ಕಡೂರು: ಶನಿವಾರದಿಂದ ತಾಲೂಕಿನ ಮತಿಘಟ್ಟದಲ್ಲಿ ಆರಂಭವಾಗಲಿರುವ 5ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆದಿದೆ. ಕಡೂರು ಪಟ್ಟಣದಿಂದ ಅರಸೀಕೆರೆಗೆ ತೆರಳುವ ಮಾರ್ಗದಲ್ಲಿ ಸಿಗುವ ಪುಟ್ಟ ಗ್ರಾಮವೇ ಮತಿಘಟ್ಟ. ಸಮ್ಮೇಳನಕ್ಕಾಗಿ ಇಡೀ ಮತಿಘಟ್ಟ ಗ್ರಾಮ ಮದುವನಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. ರಾಷ್ಟ್ರೀಯ ಹೆದ್ದಾರಿ ಇಕ್ಕೆಲದಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಕೆಂಪು, ಹಳದಿ ಬಣ್ಣದ ಬಂಟಿಂಗ್ಸ್‌ಗಳು ಗ್ರಾಮದ ತುಂಬಾ ರಾರಾಜಿಸುತ್ತಿದೆ.
ಗ್ರಾಮದ ಶ್ರೀ ಕಲ್ಲೇಶ್ವರ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ 2 ಸಾವಿರ ಜನ ಕುಳಿತುಕೊಳ್ಳಬಹುದಾದ ಶ್ರೀ ಕಲ್ಲೇಶ್ವರಸ್ವಾಮಿ ಮಹಾಮಂಟಪ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದರಲ್ಲಿ ಪದ್ಮಭೂಷಣ ವೆಂಕಟಲಕ್ಷ್ಮಮ್ಮ ವೇದಿಕೆ ನಿರ್ಮಾಣ ಕಾರ್ಯ ಪೂರ್ಣವಾಗಿದೆ.
ಊಟೋಪಚಾರ ವ್ಯವಸ್ಥೆಗೆ ಆಯೋಜಕರು ಸಿದ್ದತೆಗಳನ್ನು ಮಾಡಿಕೊಂಡಿದ್ದು, 5 ಊಟದ ಕೌಂಟರ್‌ಗಳನ್ನು ತೆರೆಯುವ ಕೆಲಸ ನಡೆಯುತ್ತಿದೆ. ಇದರಲ್ಲಿ ಒಂದು ಮಹಿಳೆಯರಿಗೆ ಪ್ರತ್ಯೇಕ ಕೌಂಟರ್ ಇರುತ್ತದೆ. ಎರಡು ದಿನಗಳ ಕಾಲ ವಿವಿಧ ಬಗೆಯ ಭೋಜನವನ್ನು ಸಾಹಿತ್ಯಾಸಕ್ತರಿಗೆ ಬಡಿಸಲು ಸಂಘಟಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕಾರ್ಯಕ್ರಮದ ಸ್ಥಳವೂ ಸೇರಿದಂತೆ ಗ್ರಾಮದ ವಿವಿಧ ದೇವಾಲಯಗಳು ಸರಕಾರಿ ಕಚೇರಿಗಳು ಹಾಗೂ ಖಾಸಗಿ ವ್ಯಕ್ತಿಗಳ ಮನೆಗಳ ಮೇಲೆ ದೀಪಾಲಂಕಾರ ನಡೆದಿದೆ.
ಸಮ್ಮೇಳನದಲ್ಲಿ ಆರೋಗ್ಯ ತಪಾಸಣಾ ಶಿಬಿರ
ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದ ದಿನ ಶಿವಮೊಗ್ಗದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಇದೇ ಮೊದಲ ಬಾರಿಗೆ ವ್ಯವಸ್ಥೆ ಮಾಡಲಾಗಿದೆ.