ದೊಡ್ಡಬಳ್ಳಾಪುರ: ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾದ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಭಾರೀ ದನಗಳ ಜಾತ್ರೆಗೆ ಈ ಬಾರಿಯೂ ಅನುಮತಿ ನೀಡಲಾಗಿದ್ದು, ಪ್ರಖ್ಯಾತ ಘಾಟಿ ದನಗಳ ಜಾತ್ರೆ ಜನವರಿ 4 ರಿಂದ ಜ.14 ರವರೆಗೆ 10 ದಿನಗಳ ಕಾಲ ನಡೆಸಲು ಸಿದ್ಧತೆ ನಡೆಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ನೇತೃತ್ವದಲ್ಲಿ ಜಾತ್ರಾ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಜ.4 ರಿಂದ ಘಾಟಿ ದನಗಳ ಜಾತ್ರೆ ಹಾಗೂ ಜ.8ರಂದು ಬ್ರಹ್ಮ ರಥೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಕೋವಿಡ್ ನಿಯಮ ಪಾಲಿಸಿ ಕೋವಿಡ್ ಎರಡು ಡೋಸ್ ಲಸಿಕೆ ಪಡೆದವರಿಗೆಮಾತ್ರ ಅವಕಾಶ, ರಾಸುಗಳಿಗೆ ಕಾಲುಬಾಯಿ ರೋಗದ ಲಸಿಕೆ ಹಾಕಿಸಿರುವುದು ಖಾತ್ರಿ ಪಡಿಸಿಕೊಂಡು ಜಾತ್ರೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವುದು. ರಾಸುಗಳಿಗೆ ನೀರಿನ ಸರಬರಾಜು,ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕುರಿತು ಚರ್ಚೆ ನಡೆಸಲಾಗಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿಜಯ ಇ.ರವಿಕುಮಾರ್, ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಟಿ.ಎಸ್.ಶಿವರಾಜ್, ಜಿಲ್ಲಾ ಮುಜರಾಯಿ ಸಹಾಯಕ ಆಯುಕ್ತ ಎನ್.ನಾರಾಯಣಸ್ವಾಮಿ, ಮುಜರಾಯಿ ತಹಶೀಲ್ದಾರ್ ಹೇಮಾವತಿ, ಘಾಟಿ ದೇವಾಲಯದ ಇಒ ಎನ್.ಕೃಷ್ಣಪ್ಪ ಇದ್ದರು.
ಸಿದ್ಧತೆಗಳು ಆರಂಭ: ಕಳೆದ ವರ್ಷ ಕೋವಿಡ್‌ನಿಂದಾಗಿ ದನಗಳ ಜಾತ್ರೆ ನಡೆಯುವುದೇ ಅನುಮಾನ ವಾಗಿತ್ತು. ರೈತರು ಜಾತ್ರೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಕೊನೆ ಕ್ಷಣದಲ್ಲಿ ಅನುಮತಿ ಸಿಕ್ಕ ನಂತರ ಜಾತ್ರೆ ಜೋರಾಗಿಯೇ ನಡೆಯಿತು.
ಜ.4ರಿಂದ ಘಾಟಿ ದನಗಳ ಜಾತ್ರೆಯನ್ನು ಆರಂಭಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ, ದನಗಳ ಜಾತ್ರೆಗೆ ಮಾರಾಟಗಾರರಿಂದ ಸಿದ್ಧತೆಗಳುನಡೆಯುತ್ತಿವೆ. ರಾಸುಗಳ ಪ್ರದರ್ಶನಕ್ಕಾಗಿ ಆಕರ್ಷಕ ಪೆಂಡಾಲ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿವೆ. ಪ್ರತಿ ವರ್ಷವೂ ಅವಧಿಗೆ ಮುನ್ನವೇ ರಾಸುಗಳು ಆಗಮಿಸುವುದು ಇಲ್ಲಿನ ಪರಿಪಾಟವಾಗಿದ್ದು, ಪೆಂಡಾಲ್‌ಗಳ ಸಿದ್ಧತೆಗಳ ವೇಗ ನೋಡಿದರೆ ಈಬಾರಿಯೂ ನಿಗದಿತ ಅವಧಿಗಿಂತ ಮುನ್ನವೇ ದನಗಳ ಜಾತ್ರೆ ಆರಂಭವಾಗಲಿದೆ ಎನ್ನಲಾಗಿದೆ.
ಘಾಟಿ ಜಾತ್ರೆಗೆ ಬಳ್ಳಾರಿ, ದಾವಣಗೆರೆ, ಧಾರವಾಡ, ಗುಲ್ಬರ್ಗ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳಿಂದ ಬೇಸಾಯಕ್ಕಾಗಿ ಎತ್ತುಗಳನ್ನು ಖರೀದಿಸಲು ನೂರಾರುಸಂಖ್ಯೆಯಲ್ಲಿ ರೈತರು ಬರುತ್ತಾರೆ. ಕಳೆದ ವರ್ಷದ ಜಾತ್ರೆಯಲ್ಲಿ ಒಂದು ಜೊತೆ ಎತ್ತುಗಳು 5ಲಕ್ಷದವರೆಗೂ ಮಾರಾಟವಾಗಿದ್ದವು.