ಬಂದರು: ಸುಮಾರು 2 ತಿಂಗಳಿನಿಂದ ಮೀನುಗಾರಿಕೆ ಚಟುವಟಿಕೆ ಇಲ್ಲದೆ ಬಣಗುಡುತ್ತಿದ್ದ ಮಂಗಳೂರಿನ ಮೀನುಗಾರಿಕಾ ದಕ್ಕೆಯು ಮತ್ತೆ ಚಟುವಟಿಕೆಯ ತಾಣವಾಗಿ ಹೊಸ ನಿರೀಕ್ಷೆ ಮೂಡಿಸಿದೆ.
ಎರಡು ತಿಂಗಳ ರಜೆಯ ಬಳಿಕ ಆ.1ರಿಂದ ಮೀನುಗಾರಿಕೆ ಮರು ಆರಂಭ ಗೊಳ್ಳಲಿದ್ದು ಮುಂದಿನ ಮೀನುಗಾರಿಕೆ ಋತುವಿನ ಉತ್ತಮ ಫಸಲಿನ ನಿರೀಕ್ಷೆಯೊಂದಿಗೆ ಕಡಲಿಗಿಳಿ ಯಲು ಮೀನುಗಾರರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜೂ.1ರಿಂದ ಜಾರಿಯಲ್ಲಿದ್ದ ಮೀನುಗಾರಿಕಾ ನಿಷೇಧ ಜು.31ಕ್ಕೆ ಕೊನೆಗೊಳ್ಳಲಿದೆ.
ಮೀನುಗಾರಿಕೆಗೆ ಬೋಟುಗಳನ್ನು, ಎಂಜಿನ್‌ಗಳನ್ನು ದುರಸ್ತಿಗೊಳಿಸಿ ಹಾಗೂ ಬಲೆಗಳನ್ನು ಸಿದ್ಧಗೊಳಿಸಿ ಸನ್ನದ್ದವಾಗಿ ರಿಸುವ ಕಾರ್ಯ ನಡೆಯುತ್ತಿವೆ. ಜು.31ಕ್ಕೆ ಐಸ್‌ಪ್ಲಾಂಟ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ. ಮೀನುಗಾರಿಕೆ ದೋಣಿಗಳಲ್ಲಿ ದುಡಿಯುವರಲ್ಲಿ ಬಹುಪಾಲು ಆಂಧ್ರ, ಓರಿಸ್ಸಾ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಗೆ ಸೇರಿದವರಾಗಿದ್ದು ಊರಿಗೆ ತೆರಳಿದವರು ಮರಳಿ ಬರುತ್ತಿದ್ದಾರೆ.
ಮಂಗಳೂರು ಮೀನುಗಾರಿಕೆ ಧಕ್ಕೆಯಲ್ಲಿ ಪರ್ಸಿನ್ ಹಾಗೂ ಟ್ರಾಲ್ ಸೇರಿ ಒಟ್ಟು 1400 ಬೋಟುಗಳಿವೆ. ಇದರಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬೋಟುಗಳು ಮೊದಲಿಗೆ ಕಡಲಿಗಿಳಿಯುತ್ತವೆ.
ನಾಡದೋಣಿಗಳಿಗೆ ಅನುಕೂಲ ಹವಾಮಾನ ಸಮುದ್ರದಲ್ಲಿ ಬಲವಾದ ಗಾಳಿ ಇದ್ದ ಕಾರಣ ಇತ್ತೀಚೆಗೆ ನಾಡದೋಣಿ ಮೀನುಗಾರಿಕೆ ಅಷ್ಟಾಗಿ ನಡೆದಿರಲಿಲ್ಲ. ಸದ್ಯ ಮಳೆ ಕಡಿಮೆಯಾಗಿ ಸಮುದ್ರ ಶಾಂತವಾಗಿರುವ ಕಾರಣದಿಂದ ಮೀನುಗಾರಿಕೆ ನಡೆಯುತ್ತಿದೆ. ಅಳಿವೆಯಲ್ಲೂ ಸಣ್ಣ ದೋಣಿಗಳ ಸಂಚಾರ ಮಾಡುತ್ತಿರುವುದರಿಂದ ನವ ಮಂಗಳೂರು ಬಂದರಿನ ಬದಲಿಗೆ ದಕ್ಕೆಗೆ ಬಂದು ವಿಲೇವಾರಿ ನಡೆಯುತ್ತಿದೆ. ಯಾಂತ್ರೀಕೃತ ಮೀನುಗಾರಿಕೆ ಸ್ಥಗಿತಗೊಂಡಿರುವುದರಿಂದ ಸದ್ಯ ಮಂಗಳೂರಿನ ದಕ್ಕೆಗೆ ಹೊರ ರಾಜ್ಯಗಳಿಂದಲೂ ಮೀನು ಬರುತ್ತಿದೆ. ಆದರೆ ಇವುಗಳು ಐಸ್‌ಪ್ಯಾಕ್ ಮಾಡಿರುವ ಮೀನುಗಳಾಗಿರವುದರಿಂದ ತಾಜಾ ಆಗಿರುವುದಿಲ್ಲ. ಆದರೂ ಬೇಡಿಕೆ ಕಡಿಮೆಯಾಗಿಲ್ಲ.
ಉತ್ತಮ ಮೀನುಗಾರಿಕೆಯ ನಿರೀಕ್ಷೆ: ಆ.1 ರಿಂದ ಮೀನುಗಾರಿಕೆ ಪ್ರಾರಂಭವಾಗುತ್ತದೆ. ಹವಾಮಾನ ಅನುಕೂಲವಿದ್ದರೆ ಅಂದಿನಿಂದಲೇ ಮೀನುಗಾರಿಕೆ ಆರಂಭವಾಗುತ್ತದೆ. ಕಳೆದ ಸಾಲಿ ನಲ್ಲಿ ಕೊನೆಯ ಅವಧಿ ಬಿಟ್ಟರೆ ಉಳಿದಂತೆ ಮೀನುಗಾರಿಕೆ ಉತ್ತಮವಾಗಿತ್ತು. ಈ ಬಾರಿಯೂ ಉತ್ತಮ ಫಸಲಿನ ನಿರೀಕ್ಷೆಯಿದೆ. –
ಮೋಹನ್ ಬೆಂಗ್ರೆ, ಮೀನುಗಾರ ಮುಖಂಡರು