ಗದಗ: ಬೆಳಗಾವಿ ವಿಭಾಗದ ಬರ ಪೀಡಿತ ಪ್ರದೇಶದ ಅಧ್ಯಯನ, ಪರಿಹಾರ ಹಾಗೂ ನಿರ್ವಹಣೆ ಕುರಿತು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟದ ಉಪಸಮಿತಿ ಏ. 7ರಂದು ಜಿಲ್ಲೆಗೆ ಭೇಟಿ ನೀಡಲಿದ್ದು, ಸಂಬಂಧಿತ ಅಧಿಕಾರಿಗಳು ಸರಿಯಾದ ಮಾಹಿತಿಯೊಂದಿಗೆ ಸೂಚಿತ ಸ್ಥಳಗಳಲ್ಲಿ ಹಾಜರಿರಬೇಕು. ಜಿ.ಪಂ. ಸಭಾಂಗಣದಲ್ಲಿ ಮಧ್ಯಾಹ್ನ ನಡೆಯಲಿರುವ ಪ್ರಕೃತಿ ವಿಕೋಪದಿಂದ ಸಂಭವಿಸಿರುವ ಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಪರಿಶೀಲನಾ ಸಭೆಗೆ ಅಗತ್ಯದ ಮಾಹಿತಿಯೊಂದಿಗೆ ತಪ್ಪದೇ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರವಿವಾರ ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಸಚಿವ ಸಂಪುಟದ ಉಪಸಮಿತಿಗೆ ಒದಗಿಸಬೇಕಾದ ಮಾಹಿತಿ ಹಾಗೂ ಸಿದ್ಧತಾ ಕ್ರಮಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಜಿಪಂ ಸಿಇಒ ಮಂಜುನಾಥ ಚವ್ಹಾಣ ಮಾತನಾಡಿ, ಈಗಾಗಲೇ ರಾಜ್ಯ ಸರ್ಕಾರ ಪ್ರತಿ ತಾಲೂಕಿಗೆ ಬರನಿರ್ವಹಣೆಯ ವಿವಿಧ ಕಾರ್ಯಗಳಿಗೆ ತಲಾ 50 ಲಕ್ಷ ರೂ. ಅನುದಾನ ಘೋಷಿಸಿದೆ. ಆ ಪೈಕಿ ತಲಾ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ತಾಲೂಕು ಸಮಿತಿಗಳು 50 ಲಕ್ಷ ರೂ. ಒಳಗಾಗಿ ಕ್ರಿಯಾ ಯೋಜನೆಗಳನ್ನು ತಯಾರಿಸಿ ಮಂಜೂರಾತಿ ಪಡೆಯಬೇಕು ಎಂದು ತಿಳಿಸಿದರು.
ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳ ಹಾನಿ, ಬೆಳೆ ಸಾಲ ಮನ್ನಾ ಯೋಜನೆಯಡಿ ರೈತರ ನೋದಣಿ ಕಾರ್ಯ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆ, ಮುಂಬರುವ ಬೇಸಿಗೆಯಲ್ಲಿ ಸಂಭವನೀಯ ನೀರಿನ ಕೊರತೆ, ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಬೇಕು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೃಷಿಕರಿಗೆ, ಕಾರ್ಮಿಕರಿಗೆ ಉದ್ಯೋಗ, ಜಾನುವಾರುಗಳಿಗೆ ನೀರು, ಮೇವಿನ ಪೂರೈಕೆ, ಮೇವಿನ ಕೊರತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಮೇವಿನ ಕಿಟ್ಟು ಪೂರೈಕೆ, ಜಿಲ್ಲಾಡಳಿತ ಮೂಲಕ ಟೆಂಡರ್ ಮೂಲಕ ಮೇವು ಖರೀದಿ, ಅಗತ್ಯವಿರುವೆಡೆ ಮೇವು ಬ್ಯಾಂಕ್ ಹಾಗೂ ಗೋಶಾಲೆ ತೆರೆಯವ ಸ್ಥಳಗಳು, ಅವುಗಳಿಗೆ ಅಲ್ಲಿ ಇರುವ ಮೂಲ ಸೌಕರ್ಯ, ಸಚಿವ ಸಂಪುಟದ ಉಪಸಮಿತಿಯ ಹಿಂದಿನ ಪರಿಶೀಲನಾ ಸಭೆಗಳಲ್ಲಿ ಸೂಚಿತ ವಿಷಯಗಳ ಕುರಿತು ಕೈಕೊಂಡ ಕ್ರಮಗಳು ಇತ್ಯಾದಿ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪರಿಶೀಲನೆ ನಡೆಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ, ಜಿ.ಪಂ. ಯೋಜನಾ ನಿರ್ದೇಶಕ ಟಿ. ದಿನೇಶ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಎಲ್ಲ ತಾಲೂಕಾಗಳ ತಹಶೀಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಬರನಿರ್ವಹಣೆ ತಾಲೂಕು ಮತ್ತು ಹೋಬಳಿ ಮಟ್ಟದ ನೊಡಲ್ ಅಧಿಕಾರಿಗಳು ಭಾಗವಹಿಸಿದ್ದರು.