Advertisement

ಮುಕ್ತ- ನ್ಯಾಯಸಮ್ಮತ ಚುನಾವಣೆಗೆ ಸಿದ್ಧತೆ

02:40 PM Jun 12, 2022 | Team Udayavani |

ಬೆಳಗಾವಿ: ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳು ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳಲ್ಲಿ ಇದೇ ಜೂ.13ರಂದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಹೇಳಿದರು.

Advertisement

ನಗರದಲ್ಲಿ ಮತ ಎಣಿಕೆ ನಡೆಯುವ ಜ್ಯೋತಿ ಕಾಲೇಜಿನಲ್ಲಿ ಶನಿವಾರ ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಲ್ಲೆಗಳ ವ್ಯಾಪ್ತಿಯ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ 12 ಜನ ಅಭ್ಯರ್ಥಿಗಳು, ಪದವೀಧರ ಕ್ಷೇತ್ರದಲ್ಲಿ 11 ಜನರು ಹಾಗೂ ಧಾರವಾಡ, ಉತ್ತರ ಕನ್ನಡ, ಹಾವೇರಿ ಮತ್ತು ಗದಗ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಏಳು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದರು.

ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 25388 ಮತದಾರರು ಮತ ಚಲಾಯಿಸಲಿದ್ದಾರೆ. ವಾಯವ್ಯ ಪದವೀಧರ ಕ್ಷೇತ್ರದಲ್ಲಿ 99598 ಮತದಾರರು ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 17973 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ. ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 190 ಮತಗಟ್ಟೆ ಸ್ಥಾಪಿಸಲಾಗಿದ್ದರೆ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 77 ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಅತೀ ಹೆಚ್ಚು ಮತಗಟ್ಟೆಗಳು ಇರುವುದರಿಂದ ಮತ್ತು ಕೋವಿಡ್‌ ಮಾರ್ಗಸೂಚಿ ಪಾಲಿಸಲು ಅನುಕೂಲವಾಗುವಂತೆ ಮತದಾನ ಅವಧಿಯನ್ನು ಒಂದು ಗಂಟೆ ಅಂದರೆ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಹೆಚ್ಚಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್‌, ಡಿಜಿಟಲ್‌ ಪೆನ್‌ ತೆಗೆದುಕೊಂಡು ಹೋಗಲು ಅನುಮತಿ ಇಲ್ಲ. ಒಂದು ವೇಳೆ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಆಧಾರ್‌ ಕಾರ್ಡ್‌, ಚಾಲನಾ ಪರವಾನಗಿ ಪತ್ರ, ಪ್ಯಾನ್‌ ಕಾರ್ಡ್‌, ಪಾಸ್‌ಪೋರ್ಟ್‌ ಸೇರಿದಂತೆ ಇತರೆ ಹತ್ತು ದಾಖಲೆ ತೋರಿಸಿ ಮತ ಚಲಾವಣೆಗೆ ಅವಕಾಶವಿರುತ್ತದೆ. ಮೂರೂ ಮತಕ್ಷೇತ್ರಗಳ ವ್ಯಾಪ್ತಿಯ ಎಲ್ಲ ಜಿಲ್ಲೆಯಲ್ಲಿ ಮಾದರಿ ನೀತಿಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಅಕ್ರಮ ಮದ್ಯ, ಸೀರೆ, ಕ್ಯಾಪ್‌ ಇತ್ಯಾದಿ ಉಡುಗೊರೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಸ್ವಾಸ್‌ ಹೇಳಿದರು.

ಶಿಕ್ಷಕರ ಹಾಗೂ ಪದವೀಧರರ ಮತಕ್ಷೇತ್ರಕ್ಕೆ ಒಂದೇ ಮತಗಟ್ಟೆಯಲ್ಲಿ ಪ್ರತ್ಯೇಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಕರ ಮತಕ್ಷೇತ್ರದ ಮತಪೆಟ್ಟಿಗೆಗೆ ಪಿಂಕ್‌ ಹಾಗೂ ಪದವೀಧರ ಮತಕ್ಷೇತ್ರಕ್ಕೆ ಬಿಳಿ ಬಣ್ಣದ ವ್ಯವಸ್ಥೆ ಮಾಡಲಾಗಿದೆ ಎಂದರು.

Advertisement

ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಅಥಣಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಕರ್ತವ್ಯ ಲೋಪವೆಸಗಿದ ತಹಶೀಲ್ದಾರ್‌ ಅವರನ್ನು ಚುನಾವಣಾ ಕಾರ್ಯದಿಂದ ಬಿಡುಗಡೆಗೊಳಿಸಿ ಬೇರೆಯವರನ್ನು ನಿಯೋಜಿಸಲಾಗಿದೆ ಎಂದರು.

ಪ್ರತಿಯೊಬ್ಬ ಮತದಾರರಿಗೆ ಅವರು ಮತ ಚಲಾಯಿಸಬೇಕಾದ ಮತಗಟ್ಟೆಯ ಮಾಹಿತಿಯನ್ನು ಹಾಗೂ ಗೂಗಲ್‌ ನಕ್ಷೆಯನ್ನು ಅವರ ಮೊಬೈಲ್‌ ಸಂಖ್ಯೆಗೆ ಕಳುಹಿಸಲಾಗುತ್ತಿದೆ. ಇದರಿಂದ ಮತಗಟ್ಟೆಯ ನಿಖರ ಮಾಹಿತಿ ಮತದಾರರಿಗೆ ತಲುಪಿಸಲಾಗುತ್ತಿದ್ದು, ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು. ಜಿಲ್ಲೆಯು ಗಡಿಭಾಗದಲ್ಲಿರುವುದರಿಂದ ನೆರೆಯ ಮಹಾರಾಷ್ಟ್ರದ ವ್ಯಾಪ್ತಿಯಲ್ಲಿ ಸಹ ಐದು ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.

ಬೆಳಗಾವಿ ನಗರ ಪೊಲೀಸ್‌ ಆಯುಕ್ತರಾದ ಡಾ| ಎಂ.ಬಿ.ಬೋರಲಿಂಗಯ್ಯ ಮಾತನಾಡಿ ಮತಗಟ್ಟೆಗಳ ಸೂಕ್ಷ್ಮತೆ ಆಧರಿಸಿ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮತದಾನದದ ಬಳಿಕ ಮತಪೆಟ್ಟಿಗೆಗಳನ್ನು ಸುರಕ್ಷಿತವಾಗಿ ತಂದು ಸ್ಕ್ಯಾನಿಂಗ್‌ ರೂಮ್‌ನಲ್ಲಿ ಇರಿಸುವವರೆಗೆ ಭದ್ರತೆ ಒದಗಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ನಜ್ಮಾ ಪೀರಜಾದೆ, ಗೀತಾ ಕೌಲಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next