ಮಂಗಳೂರು: ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ ಬೆಳೆ ವಿಮೆ ಕಾರ್ಯಕ್ರಮವನ್ನು ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಕಾರ್ಯಕ್ರಮದಲ್ಲಿ 2017 ಮುಂಗಾರು ಹಂಗಾಮಿಗೆ ಅನ್ವಯಿಸಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ. ಈ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2017 ನೇ ಮುಂಗಾರು ಹಂಗಾಮಿಗೆ ಅಡಿಕೆ ಮತ್ತು ಕರಿಮೆಣಸು ಬೆಳೆಗಳನ್ನು ಅಧಿಸೂಚಿಸಿ ಆದೇಶ ಹೊರಡಿಸಲಾಗಿದೆ. 2017ರ ಮುಂಗಾರು ಹಂಗಾಮಿಗೆ ಸಂಬಂಧಿಸಿ ವಿಮಾ ಕಂತು ಪಾವತಿಸಲು ಅಂತಿಮ ದಿನವನ್ನು ಜು.15 ಕ್ಕೆ ವಿಸ್ತರಿಸಲಾಗಿದೆ.
ಈ ಯೋಜನೆಯು ಅಧಿಸೂಚಿತ ಬೆಳೆಗಳಿಗೆ ಬ್ಯಾಂಕ್‌ಗಳಿಂದ (ರಾಷ್ಟ್ರೀಕೃತ ಬ್ಯಾಂಕ್/ ಖಾಸಗಿ/ ಸಹಕಾರಿ ಬ್ಯಾಂಕ್‌ಗಳು) ಬೆಳೆ ಸಾಲ ಪಡೆದಿರುವ ರೈತರಿಗೆ ಕಡ್ಡಾಯವಾಗಿರುತ್ತದೆ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರಿಗೆ ಐಚ್ಚಿಕವಾಗಿರುತ್ತದೆ. ಈ ಯೋಜನೆಯಡಿ ತೋಟಗಾರಿಕೆ ರೈತರು ಅಧಿಸೂಚಿತ ಬೆಳೆಗಳಿಗೆ ಸಂಬಂಧಿಸಿ ಸಾಲ ಪಡೆದುಕೊಂಡಿರುವ ಬ್ಯಾಂಕ್‌ಗಳ ಮೂಲಕ ಹಾಗೂ ಸಾಲ ಪಡೆಯದಿರುವ ರೈತರು ಉಳಿತಾಯ ಖಾತೆಯನ್ನು ಹೊಂದಿರುವ ಬ್ಯಾಂಕ್‌ಗಳ ಮೂಲಕ ವಿಮಾ ಕಂತುಗಳನ್ನು ಪಾವತಿಸಿ ಯೋಜನೆಯಲ್ಲಿ ಭಾಗವಹಿ ಸಲು ಅವಕಾಶ ಕಲ್ಪಿಸಲಾಗಿದೆ.
ಹಣಕಾಸು ಸಂಸ್ಥೆಗಳಿಂದ ಬೆಳೆ ಸಾಲವನ್ನು ಹೊಂದಿಲ್ಲದ ತೋಟಗಾರಿಕೆ ರೈತರು ನಿಗದಿತ ಅರ್ಜಿಯೊಂದಿಗೆ ಜಮೀನಿನ ಪಹಣಿ ಪ್ರತಿ, ಉಳಿತಾಯ ಖಾತೆ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಸರಕಾರದ ಇತರೆ ಯಾವುದೇ ಅಧಿಕೃತ ಗುರುತಿನ ಚೀಟಿ, ಸ್ವಯಂ ಘೋಷಿಸಿ ದೃಢೀಕರಿಸಿದ ಜಮೀನಿನ ಬೆಳೆ ಪತ್ರ ಹಾಗೂ ಪ್ರಿಮಿಯಂ ವಿಮಾ ಮೊತ್ತದೊಂದಿಗೆ ಸಲ್ಲಿಸಿ ನೊಂದಣಿ ಮಾಡಿಸಿಕೊಳ್ಳಬಹುದು.
ಈ ಯೋಜನೆಯಡಿ ವಿಮಾ ನಷ್ಟ ಪರಿಹಾರವನ್ನು adhar card enabled RTGS/NEFT ಮೂಲಕ ಇತ್ಯರ್ಥಪಡಿಸಲಾಗುವ ಕಾರಣ ಎಲ್ಲಾ ರೈತರು ಆಧಾರ್ ಕಾರ್ಡ್ ಮಾಹಿತಿಗಳನ್ನು ಒದಗಿಸಬೇಕು. ಈ ಯೋಜನೆಯನ್ನು ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರ ರೈತ ಸಮುದಾಯಕ್ಕೆ ಉಪಯುಕ್ತವಾದ ಯೋಜನೆಯಾಗಿಸಲು ಉದ್ದೇಶಿಸಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ/ ಗ್ರಾಮೀಣ ಸಹಕಾರಿ ಬ್ಯಾಂಕ್/ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಅಥವಾ ಕೃಷಿ ಅಧಿಕಾರಿಗಳು/ ತಾಲೂಕು ಮಟ್ಟದ ಹಿರಿಯ ಸಹಾಯಕ ಅಥವಾ ಸಹಾಯಕ ತೋಟಗಾರಿಕೆ ನಿರ್ದೇಶಕರು/ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಹಾರ್ಟಿಕ್ಲಿನಿಕ್, ತೋಟಗಾರಿಕೆ ಉಪನಿರ್ದೇಶಕರ ಕಚೇರಿ, (ಜಿಪಂ) ಮಂಗಳೂರು ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.