Advertisement

ಅಕಾಲಿಕ ಮಳೆ: ತರಕಾರಿ ಜತೆ ದ್ವಿದಳ ಧಾನ್ಯ ಬೆಳೆಗೂ ಹಿನ್ನಡೆ

01:43 AM Nov 29, 2021 | Team Udayavani |

ಕೋಟ: ಮುಂಗಾರಿನ ಭತ್ತ ಕಟಾವು ಅಂತ್ಯಗೊಳ್ಳುತ್ತಿದ್ದಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿದಳ ಧಾನ್ಯ ಹಾಗೂ ತರಕಾರಿ ಬೆಳೆಯುವುದು ವಾಡಿಕೆ. ಆದರೆ ಈ ಬಾರಿ ಅಕಾಲಿಕ ಮಳೆಯಿಂದಾಗಿ ಭತ್ತ ಕಟಾವು ವಿಳಂಬವಾಗಿದೆ. ಕಟಾವು ಪೂರ್ಣಗೊಂಡಿರುವಲ್ಲಿ ಬೈಹುಲ್ಲು ಗದ್ದೆಯಿಂದ ವಿಲೇವಾರಿಯಾಗಿಲ್ಲ. ಆದ್ದರಿಂದ ದ್ವಿದಳ ಧಾನ್ಯ, ತರಕಾರಿ ಬೆಳೆಗೆ ಸಾಕಷ್ಟು ಹಿನ್ನಡೆಯಾಗಿದೆ.

Advertisement

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಉದ್ದು, ಹುರುಳಿ, ಹೆಸರು ಹಾಗೂ ಅಳಸಂಡೆ, ಶೇಂಗಾ ಮುಂತಾದ ಬೆಳೆಗಳಿಗೆ ಪೂರಕವಾದ ಭೌಗೋಳಿಕ ವಾತಾವರಣವಿದೆ. ಭತ್ತ ಕಟಾವು ಅಂತ್ಯಗೊಳ್ಳುತ್ತಿದ್ದಂತೆ ಈ ಚಟುವಟಿಕೆಗಳು ಗರಿ ಗೆದರುತ್ತಿದ್ದವು. ಆದರೆ ಈ ಬಾರಿ ಇದುವರೆಗೂ ಪ್ರಕ್ರಿಯೆ ಆರಂಭಗೊಂಡಿಲ್ಲ.

ಉಡುಪಿ ಜಿಲ್ಲೆಯ ಸುಮಾರು 2,750 ಹೆಕ್ಟೇರ್‌ ಪ್ರದೇಶದಲ್ಲಿ ಹಾಗೂ ದ.ಕ. ಜಿಲ್ಲೆಯ 40 ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರಿನಲ್ಲಿ ದ್ವಿದಳ ಧಾನ್ಯ ಬೆಳೆಯಲಾಗುತ್ತದೆ. ಹೊರ ಜಿಲ್ಲೆಗಳಲ್ಲೂ ಅಕಾಲಿಕ ಮಳೆ ದ್ವಿದಳ ಧಾನ್ಯ ಬೆಳೆಗೆ ಸಮಸ್ಯೆ ತಂದಿದೆ. ಹೀಗಾಗಿ ದ್ವಿದಳ ಧಾನ್ಯದ ಉತ್ಪಾದನೆ ಗಣನೀಯವಾಗಿ ಕುಸಿಯಲಿದ್ದು, ಇವುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಶೇಂಗಾ ಬೆಳೆಗೂ ಹಿನ್ನಡೆ
ಉಡುಪಿ ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಶೇಂಗಾ ಬೆಳೆ ಗಾರರಿದ್ದು 18 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯ ಲಾಗುತ್ತದೆ. ಒಣಭೂಮಿಯಲ್ಲಿ ಶೇಂಗಾ ಬೆಳೆಯುವುದರಿಂದ ನವೆಂಬರ್‌ ಆರಂಭದಲ್ಲಿ ಭೂಮಿಯನ್ನು ಹದಮಾಡಲು ಆರಂಭಿಸಿ ಡಿಸೆಂಬರ್‌ನಲ್ಲಿ ಬಿತ್ತನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಇದುವರೆಗೂ ಭೂಮಿ ಹದ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಶೇಂಗಾ ಬೇಸಾಯಕ್ಕೆ ಸಾಕಷ್ಟು ಹಿನ್ನಡೆಯಾಗಿದ್ದು, ಮಳೆ ಕಡಿಮೆಯಾಗದಿದ್ದರೆ ಸಮಸ್ಯೆಯಾಗಲಿದೆ.

ಇದನ್ನೂ ಓದಿ:ಪರ್ಕಳ ಅಪಘಾತ ವೇಳೆ ಘರ್ಷಣೆ: ಮಣಿಪಾಲ ಠಾಣೆಗೆ ಮುತ್ತಿಗೆ ಹಾಕಿದ ಸಂಘಟನೆಗಳು

Advertisement

ಅಕಾಲಿಕ ಮಳೆಯಿಂದ ಭತ್ತ ಕಟಾವು ತಡವಾಗಿದೆ. ಆದರೆ ಮಳೆ ಕಡಿಮೆಯಾದಾಗ ದ್ವಿದಳ ಧಾನ್ಯ ಬಿತ್ತನೆ ಮಾಡಬಹುದಾಗಿದ್ದು ಮಣ್ಣಿನ ತೇವಾಂಶ ಮುಂತಾದ ಸಮಸ್ಯೆಗಳು ಎದುರಾಗುವುದಿಲ್ಲ. ಆದ್ದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ. ಪೂರಕ ಮಾಹಿತಿಗಳನ್ನು ಪಡೆದು ಬೇಸಾಯದಲ್ಲಿ ತೊಡಗಿದರೆ ಈ ಬಾರಿಯೂ ಉತ್ತಮ ಬೆಳೆ ತೆಗೆಯಲು ಅವಕಾಶವಿದೆ.
– ನವೀನ್‌, ಬೇಸಾಯ ತಜ್ಞರು,
ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ

ದ್ವಿದಳ ಧಾನ್ಯಕ್ಕೆ ಹೆಚ್ಚು ತೇವಾಂಶ ಅಗತ್ಯ. ಹೀಗಾಗಿ ಕಟಾವು ಮಾಡಿದ ಬೈಹುಲ್ಲು ವಿಲೇವಾರಿ ಮಾಡಿ ಧಾನ್ಯ ಬಿತ್ತುವ ತನಕ ಪೂರಕ ತೇವಾಂಶವಿರುವುದು ಅನುಮಾನ ಹಾಗೂ ಡಿಸೆಂಬರ್‌ ಮಧ್ಯಾವಧಿಯಲ್ಲಿ ಶೇಂಗಾ ನಾಟಿ ಕೂಡ ಕಷ್ಟ. ಹೀಗಾಗಿ ಈ ಬಾರಿ ಹಿಂಗಾರು ಬೆಳೆ ಕೂಡ ನಷ್ಟವಾಗುವ ಸಂಭವವಿದೆ.
– ಶಿವಮೂರ್ತಿ ಉಪಾಧ್ಯ ಪಡುಕರೆ, ರೈತ

ಉಡುಪಿ ಜಿಲ್ಲೆಯಲ್ಲಿ ದ್ವಿದಳ
ಧಾನ್ಯ ಬೇಸಾಯ ಪ್ರಮಾಣ
-ಉದ್ದು – 2,500 ಹೆಕ್ಟೇರ್‌
-ಹುರುಳಿ -30 ಹೆಕ್ಟೇರ್‌
-ಹೆಸರು – 50 ಹೆಕ್ಟೇರ್‌
-ಅಳಸಂಡೆ – 154 ಹೆಕ್ಟೇರ್‌
-ಕಲ್ಲಂಗಡಿ – 60 ಹೆಕ್ಟೇರ್‌

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next