Advertisement
ದೇವಾಪುರ, ನಾಗರಾಳ, ಕೋನಾಳ ಸೇರಿದಂತೆ ವಿವಿಧ ಗ್ರಾಮಗಳ ಬೆಳೆ ನಾಶ ಪೀಡಿತ ಜಮೀನುಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಅಕಾಲಿಕ ಮಳೆಗೆ ಭತ್ತ ಮೆಣಸಿನಕಾಯಿ ಬೆಳೆಗಳು ನಾಶವಾಗಿರುವ ಮಾಹಿತಿ ಹಿನ್ನೆಲೆಯಲ್ಲಿ ಭೇಟಿ ನೀಡಿ ವೀಕ್ಷಿಸಿದ್ದೇನೆ. ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಆಯಾ ಗ್ರಾಮಗಳಿಗೆ ತೆರಳಿ ಜಂಟಿ ಸಮೀಕ್ಷೆ ನಡೆಸಿ ಸಮಗ್ರ ವರದಿ ಸಲ್ಲಿಸಲು ಸೂಚಿಸಲಾಗಿದೆ. ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಪೂರ್ಣ ಮುಗಿದ ನಂತರ ಅಂತಿಮ ಮಾಹಿತಿ ದೊರಕಲಿದೆ ಎಂದರು.
Related Articles
Advertisement
ರೈತರು ಬೆಳೆ ನಾಶ ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ಭಾವಚಿತ್ರ ಅರ್ಜಿ ಜೊತೆಗೆ ಲಗತಿಸಿ ಸಂಬಂಧಿದ ಗ್ರಾಮ ಲೆಕ್ಕಿಗರ ಬಳಿ ಸಲ್ಲಿಸಬೇಕು ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ರೈತರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ವಿಠ್ಠಲ ಬಂದಾಳ ಗ್ರಾಲೆ, ರೈತರು ಮುಂತಾದವರು ಇದ್ದರು.
ನಷ್ಟದ ಸಂಪೂರ್ಣ ಮಾಹಿತಿ ಕಲೆ ಹಾಕಿ ಪರಿಹಾರಕ್ಕೆ ವರದಿ
ಕೆಲ ದಿನಗಳ ಹಿಂದೆ ತಾಲೂಕಿನಾದ್ಯಂತ ಅಕಾಲಿಕ ಮಳೆಗಾಳಿಗೆ ಹಾನಿಗೀಡಾದ ರೈತರ ಭತ್ತದ ಗದ್ದೆಗಳಿಗೆ ಜಿಲ್ಲಾ ಸಹಾಯಕ ಆಯುಕ್ತ ಶಾ ಆಲಂ ಹುಸೇನ್ ಹಾಗೂ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಎಸ್.ಎಸ್.ಹಬೀದ್ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಸಹಾಯಕ ಆಯುಕ್ತ ಶಾ ಆಲಂ ಹುಸೇನ್ ಮಾತನಾಡಿ, ಅಕಾಲಿಕ ಮಳೆ ಗಾಳಿಗೆ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದ ಬಗ್ಗೆ ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ತಾಲೂಕಿನಲ್ಲಿ ಎಷ್ಟು ನಷ್ಟ ಆಗಿದೆ ಎಂಬ ಕುರಿತು ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸುತ್ತಿದ್ದಾರೆ. ನಂತರ ಅಂದಾಜು ಮಾಹಿತಿ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ರೈತರ ಸಂಪೂರ್ಣ ನಷ್ಟದ ಮಾಹಿತಿ ಕಲೆ ಹಾಕಿ ಅಗತ್ಯ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳಿಗೆ ಪರಿಹಾರಕ್ಕಾಗಿ ವರದಿ ಸಲ್ಲಿಸಿದ ನಂತರ ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ಜಮಾ ಆಗಲಿದೆ. ಈಗಾಗಲೇ ಸಮೀಕ್ಷೆ ಕೈಗೊಂಡಿದೆ ಎಂದು ಹಬೀಬ್ ತಿಳಿಸಿದರು. ತಹಶೀಲ್ದಾರ್ ಅಶೋಕ ಸುರಪುರಕರ್, ಸಹಾಯಕ ಕೃಷಿ ನಿರ್ದೇಶಕ ಗುರುನಾಥ ಭೂಸನೂರ, ಆರ್‌ಎಸ್‌ಕೆ ಅಧಿಕಾರಿ ಪರಶುನಾಥ ಇದ್ದರು.