ಇದೇ ಫೆಬ್ರವರಿ ಕೊನೆಯ ವಾರ ತೆರೆಕಂಡ “ಪ್ರೇಮನ್’ ಚಿತ್ರ ನಿಧಾನವಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ಕೊಳ್ಳುತ್ತಿದೆ. ಚಿತ್ರ ಸುಮಾರು 50ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆಯಾ ಗಿದ್ದು, ಬಿಡುಗಡೆಯಾದ ಬಹುತೇಕ ಎಲ್ಲ ಕೇಂದ್ರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. “ಪ್ರೇಮನ್’ ಚಿತ್ರವನ್ನು ವೀಕ್ಷಿಸಿದ ಪ್ರೇಕ್ಷಕರು, ಚಿತ್ರೋದ್ಯಮದ ಮಂದಿ ಕೂಡ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಇದೇ ಖುಷಿಯಲ್ಲಿರುವ ಚಿತ್ರತಂಡ, ಈ ವಾರ ಇನ್ನಷ್ಟು ಕೇಂದ್ರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿದೆ. ಚಿತ್ರದ ಬಿಡುಗಡೆಯ ನಂತರದ ಬೆಳವಣಿಗೆಗಳ ಮಾತನಾಡುವ ಚಿತ್ರದ ನಾಯಕ ವಿಷ್ಣುತೇಜ, “2000 ಇಸವಿಯಲ್ಲಿ ಬೆಂಗಳೂರಿನ ನ್ಯಾಶನಲ್ ಕಾಲೇಜ್‌ನಲ್ಲಿ ನಡೆದಂಥ ನೈಜ ಘಟನೆಯನ್ನು ಇಟ್ಟುಕೊಂಡು “ಪ್ರೇಮನ್’ ಸಿನಿಮಾ ಮಾಡಿದ್ದೇವೆ.
ಇಡೀ ಸಿನಿಮಾದ ಪ್ರತಿ ಪಾತ್ರಗಳು, ದೃಶ್ಯಗಳು ನೋಡುಗರ ಮನ ಮುಟ್ಟು ವಂತಿದೆ. ಈಗಾಗಲೇ ರಿಲೀಸ್ ಆಗಿರುವಎಲ್ಲ ಕಡೆಗಳಲ್ಲೂ “ಪ್ರೇಮನ್’ಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಪ್ರತಿ ಪ್ರದರ್ಶನಲ್ಲೂ ಪ್ರೇಕ್ಷಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮರಾಠಿಯ “ಸೈರಾಟ್’ ಸಿನಿಮಾಕ್ಕೆ ನಮ್ಮ ಸಿನಿಮಾವನ್ನು ಹೋಲಿಸುತ್ತಿದ್ದಾರೆ. ಆಡಿಯನ್ಸ್ ಮತ್ತು ಇಂಡಸ್ಟ್ರಿಯವರು ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ’ ಎನ್ನುತ್ತಾರೆ. “ನಮ್ಮ ಸಿನಿಮಾದಲ್ಲಿ ಯಾವುದೇ ದೊಡ್ಡ ಸ್ಟಾರ್ ಇರಲಿಲ್ಲ. ಆದರೆ ಚಿತ್ರದ ಕಥೆ ನೈಜವಾಗಿದ್ದು, ಅದನ್ನು ಅಷ್ಟೇ ನೈಜವಾಗಿ ಸ್ಕ್ರೀನ್ ಮೇಲೆ ತಂದಿದ್ದೇವೆ. ಬಹುತೇಕ ಎಲ್ಲ ಕಲಾವಿದರು ತಮ್ಮಪಾತ್ರದಲ್ಲಿ ಮನಮುಟ್ಟುವಂತೆ ಅಭಿನಯಿಸಿದ್ದಾರೆ.
ಇಡೀ ಫ್ಯಾಮಿಲಿ ಕುಳಿತು ನೋಡುವಂಥ ಕಥೆ ಇದರಲ್ಲಿರುವುದರಿಂದ, ಸಿನಿಮಾವನ್ನು ನೋಡಿದವರು ಹೊಸ ಪ್ರಯತ್ನವಾದ್ರೂ ಚೆನ್ನಾಗಿ ಮಾಡಿದ್ದೀರಿ ಎಂದು ಬೆನ್ನು ತಟ್ಟುತ್ತಿದ್ದಾರೆ. ಸಿನಿಮಾದ ಕಲೆಕ್ಷನ್‌ನಲ್ಲೂ ನಿಧಾನವಾಗಿ ಏರಿಕೆ ಕಾಣುತ್ತಿರುವುದರಿಂದ, ಈ ವಾರ ಇನ್ನಷ್ಟು ಸೆಂಟರ್‌ಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಇದೆ’ ಎನ್ನುತ್ತದೆ ಚಿತ್ರತಂಡ.ಶಿವರಾಜ ಮಧುಗಿರಿ ನಿರ್ದೇಶನದಲ್ಲಿ ಮೂಡಿಬಂದಿರುವ “ಪ್ರೇಮನ್’ ಚಿತ್ರದಲ್ಲಿ ವಿಷ್ಣುತೇಜ ಅವರೊಂದಿಗೆ ಪದ್ಮಶ್ರೀ, ಯಶಸ್ವಿನಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.