ಬೆಂಗಳೂರು: ನೆನಪಿರಲಿ ಖ್ಯಾತಿಯ ನಟ ಪ್ರೇಮ್ 400 ಕೋಟಿ ಬಂಡವಾಳದ ಚಿತ್ರವೊಂದಕ್ಕೆ ನಾಯಕನಟರಾಗಲಿದ್ದಾರೆ ಎನ್ನುವ ಸುದ್ದಿ ಇದೀಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಪ್ರೇಮ್ ನಟಿಸಲಿರುವ ಈ ಬಿಗ್ ಬಜೆಟ್ ಸಿನಿಮಾದಲ್ಲಿ ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಲಿದ್ದು, ಸಿನಿಮಾವನ್ನು ಹಾಲಿವುಡ್ ಮಾದರಿಯಲ್ಲಿಯೇ ನಿರ್ಮಾಣ ಮಾಡಲಾಗುತ್ತದೆ. ಸಿನಿಮಾದಲ್ಲಿ ಪಾತ್ರಧಾರಿಗಳು ಮತ್ತು ನಿರ್ದೇಶಕರನ್ನು ಹೊರತುಪಡಿಸಿ ಮಿಕ್ಕೆಲ್ಲರೂ ಹಾಲಿವುಡ್‌ನವರೇ ಇರಲಿದ್ದಾರಂತೆ.
ಈ ಬಿಗ್ ಬಜೆಟ್‌ನ ಚಿತ್ರಕ್ಕೆ ರಾಘವೇಂದ್ರ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇವರನ್ನು ಹೊರತುಪಡಿಸಿದರೆ ಇನ್ನೆಲ್ಲ ತಂತ್ರಜ್ಞರು ಸಹ ವಿದೇಶದವರೇ ಆಗಿದ್ದಾರೆ. ಸಿನಿಮಾವು ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ಇನ್ನೂ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ.
ವೀರ ಯೋಧ ಕರ್ನಾಟಕದ ಕಾರಿಯಪ್ಪ ಅವರ ಜೀವನಾಧರಿತ ಸಿನಿಮಾ ಇದಾಗಿದ್ದು, ಪ್ರೇಮ್ ಕಾರಿಯಪ್ಪ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೈನ್ಯದ ದೃಶ್ಯಗಳು, ಯುದ್ಧದ ಸನ್ನಿವೇಶಗಳು ಸಿನಿಮಾದಲ್ಲಿ ಇರಲಿವೆ. ಸಿನಿಮಾವು ಕರ್ನಾಟಕ, ಕಾಶ್ಮೀರ, ದೆಹಲಿ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣ ಆಗಲಿದೆ. ಸಿನಿಮಾವನ್ನು ಕೇದಾಂಬರಿ ಕ್ರಿಯೇಷನ್ಸ್ ಮತ್ತು ಮಂಗಳೂರಿನ ರಾಜಕುಮಾರ ಅನ್ನುವವರು ನಿರ್ಮಾಣ ಮಾಡುತ್ತಿದ್ದಾರೆ.
ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕರ್ನಾಟಕದ ಹೆಮ್ಮೆಯ ಯೋಧ. ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿದ್ದವರು. ಕೊಡಗಿನವರಾಗಿದ್ದ ಕಾರಿಯಪ್ಪ ಮೂರು ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. 1947ರ ಬಳಿಕದ ಭಾರತ ಪಾಕಿಸ್ತಾನ ಯುದ್ಧದಲ್ಲಿ ಸೇನಾ ತುಕಡಿಯನ್ನು ಮುನ್ನಡೆಸಿದ್ದರು. ಸೇನೆಯಲ್ಲಿ ಐದು ಸ್ಟಾರ್ ಪಡೆದ ಇಬ್ಬರೇ ಯೋಧರಲ್ಲಿ ಒಬ್ಬರು ಕಾರಿಯಪ್ಪ. ಐದು ಸ್ಟಾರ್ ಪಡೆದ ಮತ್ತೊಬ್ಬ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್‌ಶಾ.