Advertisement

ಕುಟೀರ ಕೈಗಾರಿಕೆ ಪುನರುತ್ಥಾನಕ್ಕೆ ಮಹಾಕುಂಭ ಮುನ್ನುಡಿ

06:05 AM Feb 04, 2018 | |

ಹುಬ್ಬಳ್ಳಿ: ಜಾಗತೀಕರಣ, ಬಹುರಾಷ್ಟ್ರೀಯ ಕಂಪನಿಗಳ ಹೊಡೆತಕ್ಕೆ ಸಿಲುಕಿ ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಭಾರತದ ನೈಜ ಆರ್ಥಿಕತೆಯ ಬೇರಾಗಿದ್ದ ಕುಟೀರ ಉದ್ಯಮ ಕಣ್ಮರೆಯಾಗುತ್ತಿದೆ. ಗುಡಿ ಕೈಗಾರಿಕೆ ಪುನರುತ್ಥಾನ ಉದ್ದೇಶದಿಂದ ಮಹಾರಾಷ್ಟ್ರದ ಕೊಲ್ಲಾಪುರದ ಸಿದ್ದಗಿರಿ(ಕನೇರಿ)ಮಠ ಮಹತ್ವದ ಹೆಜ್ಜೆ ಇರಿಸಿದೆ.

Advertisement

ಗುಡಿ ಕೈಗಾರಿಕೆ ಉತ್ತೇಜನಕ್ಕೆ ಕನೇರಿ ಮಠದಲ್ಲಿ ಸಿದ್ದಗಿರಿ ಕರಕುಶಲ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದ್ದು, ಅದರ ಉದ್ಘಾಟನೆ ಅಂಗವಾಗಿ ಫೆ.11ರಿಂದ 15ರವರೆಗೆ ಕರಕುಶಲ ಕರ್ಮಿಗಳ ಮಹಾಕುಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 15ಕ್ಕೂ ಹೆಚ್ಚು ರಾಜ್ಯಗಳ ಕರಕುಶಲ ಕರ್ಮಿಗಳು ಭಾಗವಹಿಸಿ, ತಮ್ಮ ಕೌಟುಂಬಿಕ ಪರಂಪರೆಯಾಗಿ ಬಂದ ಇಲ್ಲವೇ ಸ್ವಯಂ ಕಲಿತ ಕಲಾ ಕೌಶಲ ಪ್ರದರ್ಶನ ಮಾಡಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ಹಿಮಾಚಲ ಪ್ರದೇಶ, ಬಿಹಾರ, ಓಡಿಶಾ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್‌, ಹರ್ಯಾಣ ರಾಜ್ಯಗಳ ಕರಕುಶಲ ಕರ್ಮಿಗಳು ಮಹಾಕುಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

5 ದಿನ ನಡೆಯುವ ಮಹಾಕುಂಭದಲ್ಲಿ 1 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕುಶಲಕರ್ಮಿಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಗೋ ಉತ್ಪನ್ನ, ರೈತರಿಗೆ ದೇಸಿ ಬೀಜ, ಸಾವಯವ ಗೊಬ್ಬರ ಇನ್ನಿತರ ವಸ್ತುಗಳ ಮಾರಾಟಕ್ಕಾಗಿ ಸುಮಾರು 300 ಮಳಿಗೆಗಳನ್ನು ಆಯೋಜಿಸಲಾಗುತ್ತದೆ. ಕಟ್ಟಿಗೆ, ಚರ್ಮ, ಕಂಚು, ಕಬ್ಬಿಣ, ಹಿತ್ತಾಳೆ, ಬಟ್ಟೆ, ತೆಂಗು, ಸೆಣಬು ಇನ್ನಿತರ ವಸ್ತುಗಳಿಂದ ತಯಾರಿಸಿದ ಉತ್ಪನ್ನಗಳು, ಆಹಾರ ಪದಾರ್ಥಗಳು, ವಿವಿಧ ಚಿತ್ತಾರದ ಕೌದಿಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಾಗಲಿವೆ.

ಅತ್ತೆ-ಸೊಸೆ ಪರಸ್ಪರ ಗುಣಗಾನ ಸ್ಪರ್ಧೆ: ಕರಕುಶಲ ಕರ್ಮಿಗಳ ಮಹಾಕುಂಭದ ಅಂಗವಾಗಿ ಗ್ರಾಮ ಸಂಸ್ಕೃತಿ ಉತ್ಸವ ಹಾಗೂ ವಿಶಿಷ್ಟ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಗ್ರಾಮೀಣ ಕಲೆ, ಸಂಸ್ಕೃತಿ, ಪರಂಪರೆ, ಆಚರಣೆ, ಬದುಕು, ಕೃಷಿಗೆ ಪೂರಕವಾದ ಕಾರ್ಯಗಳನ್ನು ಮಕ್ಕಳು ಹಾಗೂ ಯುವಕರಿಗೆ ಪರಿಚಯಿಸಿ ಪ್ರೇರಣೆ ನೀಡುವ ಉದ್ದೇಶದೊಂದಿಗೆ ಗ್ರಾಮೀಣ ಸಂಸ್ಕೃತಿ ಉತ್ಸವ ಆಯೋಜಿಸಲಾಗಿದ್ದು, ಇಡೀ ಉತ್ಸವವನ್ನು ಗ್ರಾಮಸ್ಥರೇ ನಿರ್ವಹಣೆ ಮಾಡಲಿದ್ದಾರೆ.

ಗ್ರಾಮ ಸಂಸ್ಕೃತಿ ಉತ್ಸವದಲ್ಲಿ ಚಿನ್ನಿದಂಡ, ಲಗೋರಿ, ಕುಂಟಪಿಲ್ಲೆ, ಹಗ್ಗದಾಟ, ಗೋಲಿ ಆಟ, ಹಂತಿಪದ..ಹೀಗೆ ಸುಮಾರು 40-50 ರೀತಿಯ ಆಟ ಹಾಗೂ ಪದಗಳ ಪ್ರದರ್ಶನ ನಡೆಯಲಿದೆ. ಮೊದಲ ಬಾರಿಗೆ ಅತ್ತೆ- ಸೊಸೆಯರ ಗುಣಗಾನ ಸ್ಪರ್ಧೆ ಆಯೋಜಿಸಲಾಗಿದೆ. ಸೊಸೆಯಾದವರು ತಮ್ಮ ಅತ್ತೆಯರನ್ನು ಗುಣಗಾನ ಮಾಡಿದರೆ, ಅತ್ತೆಯರು ಸೊಸೆಯಂದಿರ ಗುಣಗಾನ ಮಾಡಬೇಕು. ಯಾರು ಉತ್ತಮವಾಗಿ ಗುಣಗಾನ ಮಾಡುತ್ತಾರೋ ಅವರಿಗೆ ಬಹುಮಾನ ನೀಡಲಾಗುತ್ತದೆ. ನಶಿಸುತ್ತಿರುವ ಬಯಲಾಟ ಕಲೆ ಸಂರಕ್ಷಿಸುವ ನಿಟ್ಟಿನಲ್ಲಿ “ದಶವತಾರ’ ನಾಟಕ ಪ್ರದರ್ಶನ ಹಾಗೂ ಗೊಂಬೆಯಾಟ ಹಮ್ಮಿಕೊಳ್ಳಲಾಗಿದೆ.

Advertisement

ಗಾಂಧೀಜಿಯವರ ಗ್ರಾಮೀಣಾಧಾರಿತ ಭಾರತ ನಿರ್ಮಾಣದ ಪರಿಕಲ್ಪನೆಯ ಪುನರುತ್ಥಾನದ ನಿಟ್ಟಿನಲ್ಲಿ ಸಿದ್ಧಗಿರಿ ಕರಕುಶಲ ತರಬೇತಿ ಕೇಂದ್ರ ಆರಂಭಿಸಲಾಗಿದೆ. ದೇಶದ ವಿವಿಧ ಕಡೆಯ ಕರಕುಶಲ ಕರ್ಮಿಗಳನ್ನು ಒಂದೇ ವೇದಿಕೆಯಡಿ ಸೇರಿಸಿ, ಯುವಕರನ್ನು ಗುಡಿ ಕೈಗಾರಿಕೆಗೆ ಆಕರ್ಷಿಸುವ ಮೂಲಕ ಹಳ್ಳಿಗಳನ್ನು ಮತ್ತೆ ಸ್ವಾವಲಂಬಿಯಾಗಿಸುವ ಉದ್ದೇಶ ಹೊಂದಲಾಗಿದೆ.
– ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಸಿದ್ಧಗಿರಿ ಮಠ

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next