ಸಾಗರ: ಸಾಗರ ತಾಲೂಕಿನ 35, ಸೊರಬ ತಾಲೂಕಿನ 27, ಶಿಕಾರಿಪುರ ತಾಲೂಕಿನ 39, ಹೊಸನಗರತಾಲೂಕಿನ 30 ಗ್ರಾಪಂಗಳಲ್ಲಿ ಡಿ. 27ರಂದು ಗ್ರಾಪಂ ಚುನಾವಣೆ ನಡೆಯಲಿದ್ದು, ಪ್ರಾಥಮಿಕ ಹಂತದಲ್ಲಿ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಸಾಗರ ಉಪ ವಿಭಾಗದ ಸಹಾಯಕ ಅಧಿಕಾರಿ ಪ್ರಸನ್ನ ವಿ. ತಿಳಿಸಿದರು.
ಇಲ್ಲಿನ ಉಪ ವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಉಪ ವಿಭಾಗೀಯ ವ್ಯಾಪ್ತಿಯ ಸಾಗರ, ಹೊಸನಗರ, ಸೊರಬ ಮತ್ತು ಶಿಕಾರಿಪುರ ತಾಲೂಕಿನ ಗ್ರಾಪಂ ಚುನಾವಣಾ ಮೇಲುಸ್ತುವಾರಿ ಸಮಿತಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳುಪ್ರತಿ ತಾಲೂಕಿಗೆ ಮಾದರಿ ನೀತಿ ಸಂಹಿತೆ ತಂಡವನ್ನು ರಚನೆ ಮಾಡಿದ್ದಾರೆ ಎಂದರು.
ತಹಶೀಲ್ದಾರ್, ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ಆಯಾ ತಾಲೂಕಿನ ಪುರಸಭೆ, ಪಪಂ ಮುಖ್ಯಾಧಿಕಾರಿಗಳು, ಸರ್ಕಲ್ ಇನ್ಸ್ ಪೆಕ್ಟರ್ ಒಳಗೊಂಡಂತೆ ಆರು ಜನರ ತಂಡವನ್ನು ರಚಿಸಲಾಗಿದೆ. ಇವರು ತಮ್ಮ ತಮ್ಮ ತಾಲೂಕು ವ್ಯಾಪ್ತಿಯಲ್ಲಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದೆ. ಈ ಬಾರಿ ಎರಡನೇ ಶನಿವಾರ ಸಹ ನಾಮಪತ್ರವನ್ನು ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದರು.
ಗ್ರಾಪಂ ಚುನಾವಣೆಗೆ ಗುತ್ತಿಗೆದಾರರು ನಿಲ್ಲಬಾರದು ಎನ್ನುವ ಬೇರೆ ಬೇರೆ ಚರ್ಚೆ ನಡೆಯುತ್ತಿದೆ. ಗುತ್ತಿಗೆದಾರರಾಗಿದ್ದು ಗ್ರಾಪಂನೊಂದಿಗೆ ಯಾವುದಾದರೂ ಕರಾರು ಮಾಡಿಕೊಂಡಿದ್ದಲ್ಲಿ, ಕರಾರಿನ ಅವಧಿ ಮುಗಿಯದೆ ಇದ್ದಲ್ಲಿ ಅವರು ಗ್ರಾಪಂ ಚುನಾವಣೆಗೆ ನಿಂತು ಲಾಭದಾಯಕ ಹುದ್ದೆಗೆ ಬರುವಂತೆ ಇಲ್ಲ. ಒಂದೊಮ್ಮೆ ಗುತ್ತಿಗೆದಾರರಾಗಿದ್ದೂ, ಗ್ರಾಪಂನೊಂದಿಗೆ ಯಾವುದೇ ವ್ಯವಹಾರ ಮಾಡದೆ ಇದ್ದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಬಹುದು. ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರೆ, ಹಣ ಹಂಚಿಕೆ, ಅಕ್ರಮಮದ್ಯ ಸಂಗ್ರಹ ಇನ್ನಿತರ ಆಮಿಷವೊಡ್ಡುವುದು ಕಂಡು ಬಂದರೆ ಸಾರ್ವಜನಿಕರು ತಾಪಂ ಕಾರ್ಯನಿರ್ವಾಹಣಾಧಿಕಾರಿ ಅಥವಾ ತಹಶೀಲ್ದಾರ್ ಅವರಿಗೆ ದೂರು ನೀಡಬಹುದು.
ಸ್ಪರ್ಧೆ ಮಾಡುವ ಆಕಾಂಕ್ಷಿಗಳು ನಮೂನೆ “ಎ’ ಮತ್ತು “ಬಿ’ ನಲ್ಲಿ ಎಲ್ಲ ವಿವರ ಬರೆದು ಕೊಡಬೇಕು. ನ್ಯಾಯಾಲಯದಲ್ಲಿ ಇರುವ ಪ್ರಕರಣ ಸಹ ನಮೂದಿಸಬೇಕು. ಕೈನಲ್ಲಿ ಅಥವಾ ಟೈಪ್ ಮಾಡಿಕೊಟ್ಟರೆ ಸಾಕು. ನೋಟರಿ, ಸ್ಟಾಂಪ್ ಪೇಪರ್ ಅಗತ್ಯವಿಲ್ಲ ಎಂದರು. ಡಿವೈಎಸ್‌ಪಿ ವಿನಾಯಕ್ ಶೆಟ್ಟಿಗಾರ್, ತಹಶೀಲ್ದಾರ್ ಚಂದ್ರಶೇಖರ ನಾಯ್ಕ, ಪೌರಾಯುಕ್ತ ಎಚ್.ಕೆ. ನಾಗಪ್ಪ, ಅಧಕಾರಿಗಳಾದ ಪರಮೇಶ್ವರ್ ಟಿ., ಬಾಲಚಂದ್ರ, ಹೇಮಂತ್ ದೊಳ್ಳೆ, ಸುರೇಶ್, ಕುಮಾರಸ್ವಾಮಿ ಇನ್ನಿತರರು ಇದ್ದರು.