Advertisement

ಗೊಂದಲದ ಗೂಡಾದ ಪೂರ್ವಭಾವಿ ಸಭೆ

11:53 AM Jan 05, 2019 | Team Udayavani |

ಚಿತ್ರದುರ್ಗ: ಬೆಂಗಳೂರಿನಲ್ಲಿ ಜ.17ರಂದು ನಡೆಯಲಿರುವ ಆದಿ ಜಾಂಬವ ಅಭಿವೃದ್ಧಿ ನಿಗಮ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ನಗರದ ಕ್ರೀಡಾ ಭವನದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆ ಗೊಂದಲದ ಗೂಡಾಯಿತು. ಸಭೆಯಲ್ಲಿ ಮಾಜಿ ಸಚಿವ ಎಚ್‌.ಆಂಜನೇಯ ಮತ್ತು ಕಾಂಗ್ರೆಸ್‌ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜಿ.ಎಸ್‌. ಮಂಜುನಾಥ್‌ ಅವರ ಬೆಂಬಲಿಗರ ತಳ್ಳಾಟ-ನೂಕಾಟವೂ ನಡೆಯಿತು.

Advertisement

ಪೂರ್ವಭಾವಿ ಸಭೆಯ ಆರಂಭದಲ್ಲಿ ಎಚ್‌. ಆಂಜನೇಯ ಮಾತನಾಡಿದರು. ನಂತರನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಯಣ್ಣ ಮುಂಚಿತವಾಗಿ ಕಾಂಗ್ರೆಸ್‌ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜಿ.ಎಸ್‌.ಮಂಜುನಾಥ್‌ ಮಾತನಾಡಲು ಅವಕಾಶ ನೀಡುತ್ತಿದ್ದಂತೆ ಎಚ್‌.ಆಂಜನೇಯ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಜಿ.ಎಸ್‌.ಮಂಜುನಾಥ್‌ ಬೆಂಬಲಿಗರು ಮಂಜುನಾಥ್‌ ಪರ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ನೋಡು ನೋಡುತ್ತಿದ್ದಂತೆ ಆಂಜನೇಯ ಮತ್ತು ಮಂಜುನಾಥ್‌ ಬೆಂಬಲಿಗರು ವೇದಿಕೆ ಮೇಲೆ ಧಾವಿಸಿ
ತಳ್ಳಾಟ-ನೂಕಾಟ ನಡೆಸಿದರು. ಪೊಲೀಸರು ಇಬ್ಬರ ಬೆಂಬಲಿಗರನ್ನು ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರೂ, ಒಮ್ಮೆ ಮಂಜುನಾಥ್‌ ಬೆಂಬಲಿಗರು ಕೂಗಿದರೆ, ಮತ್ತೂಮ್ಮೆ ಆಂಜನೇಯ ಬೆಂಬಲಿಗರು ಕೂಗುತ್ತಿದ್ದರು. ಈ ವೇಳೆ ಎಚ್‌.ಆಂಜನೇಯ ವೇದಿಕೆ ಮೇಲೆ ಮೂಕ ಪ್ರೇಕ್ಷಕರಂತೆ ಕುಳಿತಿದ್ದರು. ಹೀಗೆ ಸುಮಾರು 45 ನಿಮಿಷ ಗದ್ದಲ-ಗಲಾಟೆ ನಡುವೆ ಸಭೆ ಗೊಂದಲದ
ಗೂಡಾಗಿತ್ತು. ಪೊಲೀಸರು ಇಬ್ಬರ ಬೆಂಬಲಿಗರನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು.

ಕೊನೆಗೆ ಎಚ್‌.ಆಂಜನೇಯ, ಜಿ.ಎಸ್‌. ಮಂಜುನಾಥ್‌ ಅವರ ಪಕ್ಕದಲ್ಲಿ ನಿಂತು ಬೆಂಗಳೂರಿನಲ್ಲಿ ಜ.17ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಜಿ.ಎಸ್‌. ಮಂಜುನಾಥ್‌ ಸೇರಿ ಎಲ್ಲರೂ ಬರುತ್ತಾರೆ ಎಂದು ಹೇಳಿ ವೇದಿಕೆಯಿಂದ ನಿರ್ಗಮಿಸಲು ತೆರಳಲು ಪ್ರಯತ್ನಿಸಿದರು. ಇದಕ್ಕೆ ಜಿ.ಎಸ್‌. ಮಂಜುನಾಥ್‌, ಆಂಜನೇಯ ಅವರು ಹೇಳಿಕೆಗೆ ನನ್ನ ವಿರೋಧ ಇದೆ ಎಂದರು. ಈ ವೇಳೆ ಎಚ್‌.ಆಂಜನೇಯ ವೇದಿಕೆಗೆ ವಾಪಸ್‌ ಆಗಮಿಸಿದರು. ಜಿ.ಎಸ್‌.ಮಂಜುನಾಥ್‌ ತನ್ನ ಬೆಂಬಲಿಗರೊಂದಿಗೆ ಸಭೆಯಿಂದ ಹೊರ ನಡೆದರು. ಒಟ್ಟಾರೆ ಬೆಂಗಳೂರಿನಲ್ಲಿ ಜ.17ರಂದು ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ರೂಪರೇಷೆ ಕುರಿತು ಚರ್ಚಿಸಬೇಕಾಗಿದ್ದ ಪೂರ್ವಭಾವಿ ಸಭೆ ಯಾವುದೇ ವಿಷಯ ಚರ್ಚೆ ನಡೆಸದೆ ಗದ್ದಲದಲ್ಲಿಯೇ ಮುಕ್ತಾಯವಾಯಿತು. 

ಬೆಂಗಳೂರಿನಲ್ಲಿ ಜ.17ರಂದು ನಡೆಯಲಿರುವ ಮಾದಿಗರ ಕಾರ್ಯಕ್ರಮ ಕುರಿತು ಇಂದು ಮಾಜಿ ಸಚಿವ ಎಚ್‌.ಆಂಜನೇಯ ಪೂರ್ವಭಾವಿ ಸಭೆ ಕರೆದಿದ್ದರು. ಆದರೆ ಸಭೆಯಲ್ಲಿ ಅವರೊಬ್ಬರೇ ಮಾತನಾಡುವುದು ಬಿಟ್ಟರೆ ಬೇರೆಯವರಿಗೆ ಅವಕಾಶ ನೀಡಲಿಲ್ಲ ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜಿ.ಎಸ್‌.ಮಂಜುನಾಥ್‌ ಆಕ್ರೋಶ ವ್ಯಕ್ತಪಡಿಸಿದರು. ಪೂರ್ವಭಾವಿ ಸಭೆಯಿಂದ ಹೊರ ಬಂದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಗೆ ಮಾಜಿ ಸಚಿವ ಎಚ್‌.ಆಂಜನೇಯ ಅವರ ಕೊಡುಗೆ ಶೂನ್ಯ. ಆಂಜನೇಯ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಸಚಿವರಾದ ಅವಧಿಯಲ್ಲಿ ಮಾದಿಗರಿಗೆ ಯಾವ ಸೌಲಭ್ಯಗಳನ್ನು ಕೊಟ್ಟಿಲ್ಲ. ಐದು ವರ್ಷದ ಅವಧಿಯ ಕೊನೆ ವರ್ಷದಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ 5 ಸಾವಿರ ಬೋರ್‌, 3000 ಕಾರು ನೀಡಿ ಇತರೆ ಸಮುದಾಯದವರ ಮುಂದೆ ಹಾಡಿಕೊಳ್ಳುವಂತಹ ಹೀನಾಯ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಅವರನ್ನು ಜಿಲ್ಲೆಯಿಂದ ಹೊರ ಹಾಕದಿದ್ದರೆ ಜಿಲ್ಲೆಯ ಮಾದಿಗರಿಗೆ ಉಳಿಗಾಲವಿಲ್ಲ ಎಂದು ಕಿಡಿಕಾರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next