ಬ್ಯಾಡಗಿ: ಮೂಲ ನಕ್ಷೆಯಂತೆ ಆಣೂರು ಗುಡ್ಡಕ್ಕೆ ನೀರು ತರುವ ಮೂಲಕ ಬ್ಯಾಡಗಿ ಸೇರಿದಂತೆ ಹಿರೇಕೆರೂರು, ಹಾವೇರಿ ತಾಲೂಕುಗಳ 36 ಗ್ರಾಮಗಳ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ಬಜೆಟ್‌ನಲ್ಲಿ 600 ಕೋಟಿ ರೂ.ಮೀಸಲಿಡಬೇಕು. ಇಲ್ಲದಿದ್ದರೆ ಬ್ಯಾಡಗಿ ತಾಲೂಕು ಕಚೇರಿ ಸಭಾಂಗಣದಲ್ಲಿ ಫೆ. 4 ರಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುವುದಾಗಿ ರೈತ ಮುಖಂಡ ಗಂಗಣ್ಣ ಎಲಿ ಎಚ್ಚರಿಸಿದರು.
ಪಟ್ಟಣದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 36 ಗ್ರಾಮಗಳ ರೈತ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪೊಳ್ಳು ಭರವಸೆ ಕೊಡುವುದನ್ನು ನಿಲ್ಲಿಸಲಿ. 2010ರಿಂದ ಹೋರಾಟ ಮಾಡುತ್ತಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಶಿವಣ್ಣನವರ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ್ದೇ ಆದಲ್ಲಿ ನಿಮ್ಮೆಲ್ಲ ಭರವಸೆ ಈಡೇರಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಶಾಸಕರಾಗಿ 5 ವರ್ಷ ಅಧಿಕಾರ ಅನುಭವಿಸಿದರೂ ಯೋಜನೆ ಅನುಷ್ಠಾನಗೊಳಿಸದಿರುವುದು ಖೇದಕರ ಸಂಗತಿ ಎಂದರು.
ಚಿಕ್ಕಪ್ಪ ಛತ್ರದ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಯೋಜನೆಯ ಗಾತ್ರವನ್ನು 91 ಕೋಟಿ ರೂ.ಗಳಿಗೆ ಕಡಿತಗೊಳಿಸಿ, ಅಸುಂಡಿ ಸೇರಿದಂತೆ ರಾಣಿಬೆನ್ನೂರ ತಾಲೂಕಿನ ಕೆಲ ಗ್ರಾಮಗಳಿಗಷ್ಟೇ ಸೀಮಿತವಾಗುವಂತೆ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಅವಸರದಲ್ಲಿ ಚಾಲನೆ ನೀಡಿ ಕೈತೊಳೆದುಕೊಂಡರು. ಈ ಯೋಜನೆಗೆ ನಮ್ಮ ವಿರೋಧವಿಲ್ಲ, ಅಲ್ಲಿರುವವರೂ ನಮ್ಮ ಸಹೋದರರೆ. ಆದರೆ, ತಾಲೂಕಿನ ರೈತರ ಗತಿ ಏನಾಯಿತು ಎಂಬುದನ್ನು ತಿರುಗಿಯೂ ನೋಡದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ವರ್ತನೆ ನಿಜಕ್ಕೂ ರೈತ ಸಮುದಾಯಕ್ಕೆ ಬೇಸರ ತರಿಸಿದೆ ಎಂದರು.
ಕಿರಣ ಗಡಿಗೋಳ ಮಾತನಾಡಿ, ಪೊಳ್ಳು ಭರವಸೆ ನೀಡುತ್ತಿರುವ ಭ್ರಷ್ಟ ಸರ್ಕಾರಗಳಿಂದ ರೈತ ಸಮುದಾಯ ಏನನ್ನೂ ನಿರೀಕ್ಷಿಸದಂತಾಗಿದೆ. ಈಗಾಗಲೇ ಸಾವಿರ ಅಡಿ ಕೊಳವೆ ಭಾವಿ ಕೊರೆಸಿದರೂ ನೀರು ಸಿಗದಂತಾಗಿದೆ. ಜೀವಜಲ ಉಳಿಸಿಕೊಳ್ಳಲು ಸರ್ಕಾರದ ಬಳಿ ಯಾವುದೇ ಉದಾತ್ತ ಯೋಜನೆಗಳಿಲ್ಲ. ಕೇವಲ 5 ಕಿಮೀ ಅಂತರದಲ್ಲಿ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ಹಾಯ್ದು ಹೋಗಿದ್ದರೂ ಬ್ಯಾಡಗಿ ತಾಲೂಕಿನ ರೈತರಿಗೆ ಹನಿ ನೀರು ಕೊಟ್ಟಿಲ್ಲ ಎಂದು ಆರೋಪಿಸಿದರು.
ಡಾ| ಕೆ.ವಿ.ದೊಡ್ಡಗೌಡ್ರ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಪ್ರಮುಖ ನದಿಗಳಿಲ್ಲ, ಅದರಲ್ಲೂ ಮಳೆಗಾಲ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತ ಸಾಗಿವೆ. ಹೀಗಾಗಿ ರೈತರು ಕಂಗಾಲಾಗಿದ್ದು, ಕೃಷಿ ಚಟುವಟಿಕೆಗಳೇ ಸ್ಥಗಿತಗೊಳ್ಳುವ ಹಂತಕ್ಕೆ ಬಂದು ತಲುಪಿವೆ. ಕೂಡಲೇ ಸರ್ಕಾರ ಬ್ಯಾಡಗಿ ತಾಲೂಕಿನ ರೈತರಿಗೆ ಅವಶ್ಯವಿರುವ ಕೆರೆ ತುಂಬಿಸುವ ಕಾರ್ಯಕ್ಕೆ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಆಗ್ರಹಿಸಿದರು.
ಮೌನೇಶ ಬಡಿಗೇರ ಮಾತನಾಡಿ, ಅಹೋರಾತ್ರಿ ಧರಣಿ ನಡೆಸುವ ವಿಚಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕೃಷಿ ಸೇರಿದಂತೆ ರೈತರು ಅಳಿವು ಉಳಿವಿನ ಪ್ರಶ್ನೆ ಉದ್ಭವಿಸಿದೆ. ಸರಣಿ ವೈಫಲ್ಯದಿಂದ ಕಂಗಾಲಾಗಿದ್ದೇವೆ. ಕೂಡಲೇ ಮೂಲ ನಕ್ಷೆಯಂತೆ ರಾಣಿಬೆನ್ನೂರ ತಾಲೂಕಿನ ಹೊಳೆ ಆನ್ವೇರಿಯಿಂದ ಆಣೂರು ಗುಡ್ಡದಲ್ಲಿರುವ ಕೆರೆಗೆ ನೀರು ತುಂಬಿಸಿ ಅಲ್ಲಿಂದ ಗುರುತ್ವಾಕರ್ಷಣೆ ಆಧಾರದ ಮೇಲೆ 36 ಕೆರೆಗಳಿಗೆ ನೀರು ತುಂಬಿಸುವ ಕಾರ್ಯವಾಗಬೇಕು. ಇಲ್ಲದೇ ಹೋದಲ್ಲಿ ರೈತರ ಪ್ರತಿರೋಧ ಎದುರಿಸಲಿ ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಯೋಗಿ ಶಿರೂರ, ಮಹದೇವಪ್ಪ ಶಿಡೇನೂರ, ಮಲ್ಲೇಶ ಕೊಪ್ಪದ, ಬಸವರಾಜ ಬಣಕಾರ, ಶಂಕ್ರಪ್ಪ ಕಾಟೇನಹಳ್ಳಿ, ಬಸಲಿಂಗಪ್ಪ ಬ್ಯಾಡಗಿ, ಚಂದ್ರಪ್ಪ ಕೊಪ್ಪದ, ಚಿದಾನಂದ ಬಡ್ಡಿಯವರ, ಹನುಮಂತಪ್ಪ ಮಲ್ಲಾಡದ, ಗುಡ್ಡಪ್ಪ ಗುದ್ನೂರು, ನಿಂಗಪ್ಪ ಹೆಗ್ಗಣ್ಣನವರ, ಬಸಪ್ಪ ಬನ್ನಿಹಟ್ಟಿ, ನಾಗಪ್ಪ ಬನ್ನಿಹಟ್ಟಿ, ನಾಗಪ್ಪ ಸಪ್ಪಣ್ಣನವರ, ಹನುಮಂತಪ್ಪ ಅರಳೀಕಟ್ಟಿ, ಸಿದ್ದಯ್ಯ ಪಾಟೀಲ, ವಿಜಯ ಎಲಿಗಾರ, ಶಿವಯೋಗಿ ಎಲಿಗಾರ, ಬಸವರಾಜ ಬುಡಪನಹಳ್ಳಿ, ಈರನಗೌಡ ಗೌಡ್ರ ಹಾಗೂ ರೈತರು ಉಪಸ್ಥಿತರಿದ್ದರು.