ಅಳಪ್ಪುಳ: ವೃಂದಾ ಹೆಸರಿನ ಆ ಯುವತಿ ಗರ್ಭಿಣಿ. ಹೆರಿಗೆ ಸಂಬಂಧಿತ ಸಂಪೂರ್ಣ ಬೆಡ್ ರೆಸ್ಟ್ ಗಾಗಿ ಕೇರಳಕ್ಕೆ ಹೋಗಲು ತಡೆಯಾಗಿದ್ದು ಲಾಕ್‌ಡೌನ್ ಪರಿಸ್ಥಿತಿ. ಇದರ ನಡುವೆಯೇ, ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ 3,000 ಕಿ.ಮೀ.ಗಳಿಗಿಂತ ಹೆಚ್ಚು ದೂರ ಕ್ರಮಿಸಿ ಆ್ಯಂಬುಲೆನ್ಸ್‌ನಲ್ಲೇ ಆಲಪ್ಪುಳ ಜಿಲ್ಲೆಯ ಹರಿಪಡ್ ಎಂಬ ಸ್ಥಳವನ್ನು ಸೇರಿಕೊಂಡಿದ್ದಾಳೆ ಆಕೆ!
ಕೇರಳ ಮೂಲದ ಈ ಗರ್ಭಿಣಿಗೆ ವೈದ್ಯರು ಮನೆಯಲ್ಲೇ ಸಂಪೂರ್ಣ ಬೆಡ್ ರೆಸ್ಟ್ ಮಾಡಲು ಸಲಹೆ ನೀಡಿದ್ದರಿಂದ ದೇಶಾದ್ಯಂತ ಕೋವಿಡ್ 19 ಸಂಬಂಧಿತ ಲಾಕ್ ಡೌನ್ ಪರಿಸ್ಥಿತಿ ಇದ್ದಾಗಲೂ ವೃಂದಾ ಹಾಗೂ ಆಕೆಯ ಪತಿ ವಿಷ್ಣು ಅವರಿಗೆ ಈ ಮೆಡಿಕಲ್ ಎಮರ್ಜೆನ್ಸಿ ಅಪಾಯಕಾರಿ ಸುದೀರ್ಘ ಪ್ರಯಾಣ ಮಾಡುವ ರಿಸ್ಕ್ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು.
ಆ್ಯಕ್ಸಿಜನ್ ಸಹಿತ ತುರ್ತು ವೈದ್ಯಕೀಯ ಸವಲತ್ತುಗಳಿರುವ ಸುಸಜ್ಜಿತ ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಗ್ರೇಟರ್ ನೋಯ್ಡಾದ ಆಸ್ಪತ್ರೆ ಮಾಡಿಕೊಟ್ಟಿತು. ಆದರೆ, ಇದಕ್ಕೆ ಬೇಕಾಗಿದ್ದ 1.2 ಲಕ್ಷ ರೂ. ಹೊಂದಿಸುವ ತಾಕತ್ತು ಈ ದಂಪತಿಗೆ, ಅವರ ಹೆತ್ತವರಿಗೆ ಇರಲಿಲ್ಲ. ವೃಂದಾ ಹೆತ್ತವರು ಇದ್ದಬಿದ್ದ ಚಿನ್ನವನ್ನೆಲ್ಲಾ ಅಡವಿರಿಸಿ ಸಾಲ ಮಾಡಿ ಕೊಂಚ ಹಣ ಹೊಂದಿಸಿದರು. ಕೇರಳದ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಮತ್ತು ಇತರರು ಆರ್ಥಿಕ ಸಹಾಯ ಕೊಡಿಸಿದರು.
ಗ್ರೇಟರ್ ನೋಯ್ಡಾದ ಆಸ್ಪತ್ರೆಯಿಂದ ಹೊರಟ ಈ ವಿಶೇಷ ಆ್ಯಂಬುಲೆನ್ಸ್ ಮಾರ್ಚ್ 29ರ ಬೆಳಿಗ್ಗೆ 11 ಗಂಟೆಗೆ ಹೊರಟಿತ್ತು. ಗರ್ಭಿಣಿಯ ಆರೋಗ್ಯ ನಿಗಾವಣೆಗಾಗಿ ಆ್ಯಂಬುಲೆನ್ಸ್ ನಲ್ಲಿ ಪ್ರಥಮ ಚಿಕಿತ್ಸಕ ಸಂತೋಷ್ ಇದ್ದರು. ಉತ್ತರ ಪ್ರದೇಶ ಮೂಲದ ಆ್ಯಂಬುಲೆನ್ಸ್ ಚಾಲಕರಾಗಿದ್ದ ರಾಜ್ ಮತ್ತು ಸತ್ಯವೀರ್ ಅವರಿಗೆ ದಕ್ಷಿಣ ಭಾರತದ ಈ ಪ್ರಯಾಣ ಮೊತ್ತ ಮೊದಲ ಅನುಭವವಾಗಿತ್ತು. ಸರಿಯಾದ ರಸ್ತೆ ಪರಿಚಯವಿಲ್ಲದ ಇವರ ನೆರವಿಗೆ ಬಂದಿದ್ದು ಗೂಗಲ್ ಮ್ಯಾಪ್.
53 ಗಂಟೆಗಳ (ಸರಿ ಸುಮಾರು ಮೂರು ದಿನಗಳು) ಈ ಸುದೀರ್ಘ ಎಮರ್ಜೆನ್ಸಿ ಪ್ರಯಾಣಕ್ಕೆ ಅಗತ್ಯವಾಗಿದ್ದ ಆಹಾರ ಮತ್ತು ನೀರನ್ನು ಅವರು ಆ್ಯಂಬುಲೆನ್ಸ್ ನಲ್ಲೇ ಶೇಖರಿಸಿಟ್ಟುಕೊಂಡಿದ್ದರು. ತನ್ನ ಪ್ರಯಾಣದ ಮಧ್ಯದಲ್ಲಿ ಈ ಆ್ಯಂಬುಲೆನ್ಸ್ ಒಟ್ಟಾರೆ ಎರಡು ಕಡೆಯಲ್ಲಿ ಮಾತ್ರವೇ ಇಂಧನ ಭರ್ತಿಗೆ ನಿಂತಿತ್ತು.
ಆ್ಯಂಬುಲೆನ್ಸ್ ವಲಯಾರ್ ಬಳಿ (ಕೇರಳ – ತಮಿಳುನಾಡು ಗಡಿ) ಬಂದಾಗ ಪೊಲೀಸರು ತಡೆದು ನಿಲ್ಲಿಸಿದ ಸಂದರ್ಭದಲ್ಲಿ ವೃಂದಾ ಅವರ ಎಮರ್ಜೆನ್ಸಿ ಮೆಡಿಕಲ್ ರಿಪೋರ್ಟ್ ತೋರಿಸಿ ಪೊಲೀಸರ ಮನವೊಲಿಸಿ ಕೇರಳದ ಗಡಿಯನ್ನು ಪ್ರವೇಶಿಲಾಯಿತು ಮತ್ತು ಈ ಸಂದರ್ಭದಲ್ಲಿ ಕೇರಳ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಅವರ ಸಕಾಲಿಕ ಸಹಾಯವೂ ದೊರಕಿತು.
ದೆಹಲಿ, ಹರ್ಯಾಣ, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಸಾಗಿಬಂದ ಈ ಆ್ಯಂಬುಲೆನ್ಸ್ ಕೇರಳದ ಅಲಪುಝಾ ಜಿಲ್ಲೆಯಲ್ಲಿರುವ ಹರಿಪಡ್ ತಾಲೂಕು ಆಸ್ಪತ್ರೆಗೆ ಎಪ್ರಿಲ್ 2ರ ಬುಧವಾರ ಮಧ್ಯಾಹ್ನ 2.30 ಗಂಟೆಗೆ ಯಶಸ್ವಿಯಾಗಿ ತಲುಪಿತು.
ಗರ್ಭಿಣಿ ವೃಂದಾ ಅವರಿಗೆ ಇಲ್ಲಿ ಸೂಕ್ತ ವೈದ್ಯಕೀಯ ನೆರವನ್ನು ನೀಡಿದ ಬಳಿಕ ಇದೀಗ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಈ ದಂಪತಿಗಳಿಗೆ ಮೂರು ವಾರಗಳ ಕಾಲ ಹೋಮ್ ಕ್ವಾರೆಂಟೈನ್ ನಲ್ಲಿರುವಂತೆಯೂ ಸೂಚಿಸಲಾಗಿದೆ.