Advertisement

ಸಂತಾನ ಭಾಗ್ಯ’ಹೆಸರಲ್ಲಿ ದಂಪತಿಗೆ ವಂಚನೆ

06:00 AM Dec 04, 2017 | Team Udayavani |

ಬೆಂಗಳೂರು: ಕೃತಕ ಗರ್ಭಧಾರಣೆ ಮೂಲಕ “ಸಂತಾನ ಭಾಗ್ಯ’ ಭರವಸೆ ನೀಡಿ ಲಕ್ಷಾಂತರ ರೂ. ವಸೂಲಿ ಮಾಡಿ ವಂಚಿಸಿದ ನಗರದ ಬಂಜೆತನ ನಿವಾರಣಾ ಖಾಸಗಿ ಸಂಸ್ಥೆಗೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ.

Advertisement

ವಂಚನೆ ಎಸಗಿದ ಸಂಸ್ಥೆಯ ವಿರುದ್ಧ ದಂಪತಿ ಸಲ್ಲಿಸಿದ್ದ ದೂರು ಪುರಸ್ಕರಿಸಿರುವ ನ್ಯಾಯಾಲಯ, ಕೃತಕ ಗರ್ಭಧಾರಣೆ ಮೂಲಕ ಸಂತಾನ ಭಾಗ್ಯ ಕಲ್ಪಿಸುವುದಾಗಿ ಹೇಳಿ ದಂಪತಿಯಿಂದ ಪಡೆದುಕೊಂಡಿದ್ದ 5.50 ಲಕ್ಷ ರೂ.ಗಳನ್ನು ವಾಪಸ್‌ ನೀಡಬೇಕು. ಜೊತೆಗೆ ದೂರುದಾರರು ಸಾಕಷ್ಟು ಮಾನಸಿಕ ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ಅವರ ಪರಿಹಾರ ಮೊತ್ತವಾಗಿ 1ಲಕ್ಷ ರೂ. ನೀಡಬೇಕೆಂದು ಸೃಷ್ಟಿ ಗ್ಲೋಬಲ್‌ ಮೆಡಿಕೇರ್‌ ಆ್ಯಂಡ್‌ ರಿಸರ್ಚ್‌ ಫೌಂಡೇಶನ್‌ಗೆ ನಿರ್ದೇಶಿಸಿದೆ.

ಕೃತಕ ಗರ್ಭಧಾರಣೆ ಸೇವೆಯ ನೆಪದಲ್ಲಿ ದಂಪತಿ ಬಳಿ ಹಣ ಪಡೆದುಕೊಂಡ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ, ಮಕ್ಕಳಾಗುವ ಭರವಸೆ ನೀಡಿ ವಂಚಿಸಿರುವುದು ಕಾನೂನು ಬಾಹಿರ ಕ್ರಮ. ಈ ರೀತಿ ಸುಳ್ಳು ಭರವಸೆ ನೀಡಿ ವಂಚನೆ ಎಸಗಬೇಡಿ ಎಂದು ಎಚ್ಚರಿಕೆ ನೀಡಿದ್ದು, ಐದು ಸಾವಿರ ರೂ. ದಂಡ ಪಾವತಿಸುವಂತೆಯೂ ಆದೇಶಿಸಿದೆ.

ಹಣ ಪಡೆದು ವಂಚಿಸಿರುವುದಕ್ಕೆ  ದೂರುದಾರ ದಂಪತಿಯ ಬಳಿ ಸಾಕ್ಷ್ಯಾಧಾರಗಳಿವೆ. ಜೊತೆಗೆ ಕೃತಕ ಗರ್ಭಧಾರಣೆ ಚಿಕಿತ್ಸೆ ನೀಡುವಂತಹ ನುರಿತ  ವೈದ್ಯರು ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?
ಕೋನೇನಾ ಅಗ್ರಹಾರದ ನಿವಾಸಿಗಳಾದ ಪ್ರತಿಷ್ಠಿತ ಖಾಸಗಿ ಕಂಪೆನಿಯೊಂದರ ಉದ್ಯೋಗಿ ಮಧುಸೂಧನ್‌ ಹಾಗೂ ಶೈಲಜಾ ( ಇಬ್ಬರ ಹೆಸರೂ ಬದಲಾಯಿಸಲಾಗಿದೆ) ವಿವಾಹವಾಗಿ ಹಲವು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಸಾಕಷ್ಟು ಚಿಂತೆಗೊಳಗಾಗಿದ್ದರು. ಈ  ಮಧ್ಯೆ ನಗರದ ಸೃಷ್ಠಿ ಗ್ಲೋಬಲ್‌ ಮೆಡಿಕೇರ್‌ ಆ್ಯಂಡ್‌ ರಿಸರ್ಚ್‌ ಫೌಂಡೇಶನ್‌ 2013ರಲ್ಲಿ ಟಿ.ವಿ. ಹಾಗೂ ಪತ್ರಿಕೆಗಳಲ್ಲಿ ಶೇ.100 ಗ್ಯಾರಂಟಿ ಕೃತಕ ಗರ್ಭಧಾರಣೆ ಚಿಕಿತ್ಸೆ, ಬಂಜೆತನ ನಿವಾರಣೆ ಮಾಡುವುದಾಗಿ ಜಾಹೀರಾತು ನೀಡಿತ್ತು.

Advertisement

ಈ ಹಿನ್ನೆಲೆಯಲ್ಲಿ ಮಧುಸೂಧನ್‌ ಆಸ್ಪತ್ರೆಯವರನ್ನು ಸಂಪರ್ಕಿಸಿ ಚರ್ಚಿಸಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ಸಲುವಾಗಿ ಆರಂಭಿಕವಾಗಿ 6. 50 ಲಕ್ಷ ರೂ. ಪಾವತಿಸಬೇಕು ಎಂದಿದ್ದಾರೆ. ಈ ಭರವಸೆ ನಂಬಿದ್ದ ದಂಪತಿ ಅಷ್ಟೂ ಮೊತ್ತವನ್ನು ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಎರಡು ಕಂತುಗಳಲ್ಲಿ ಪಾವತಿಸಿ ರಸೀದಿ ಪಡೆದುಕೊಂಡಿದ್ದಾರೆ.
ದಂಪತಿಯಿಂದ ಹಣ ಕಟ್ಟಿಸಿಕೊಂಡ  ಸಂಸ್ಥೆ ಸಿಬ್ಬಂದಿ ಹಲವು ತಿಂಗಳು ಕಳೆದರೂ ಪತ್ನಿಗೆ ಚಿಕಿತ್ಸೆ ನೀಡದೇ ಕಾಲ ವಿಳಂಬ ಮಾಡುತ್ತಿದ್ದರು. ಹೀಗಾಗಿ ಚಿಕಿತ್ಸೆ ನೀಡಲು ಮನವಿ ಮಾಡಿದರೂ ಇಲ್ಲಸಲ್ಲದ ನೆಪ ಹೇಳಿ ಕಳುಹಿಸಿಕೊಟ್ಟಿದ್ದರು. ಈ ಮಧ್ಯೆ ಈ ಸಂಸ್ಥೆ ಕೃತಕ ಗರ್ಭಧಾರಣೆ ಚಿಕಿತ್ಸೆ ಹೆಸರಲ್ಲಿ ಹಲವು ಮಂದಿಗೆ ವಂಚಿಸಿದೆ ಎಂಬ ಸತ್ಯಾಂಶ ಗೊತ್ತಾಗಿದೆ. ಇದರಿಂದ ಎಚ್ಚೆತ್ತುಕೊಂಡ ಮಧುಸೂಧನ್‌, ಹಣ ವಾಪಸ್‌ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಸ್ಪಂದಿಸದ ಸಂಸ್ಥೆಯ ಅಧಿಕಾರಿಗಳು, ಹಣ ನೀಡಲು ನಿರಾಕರಿಸಿ ಪ್ರಾಣ ಬೆದರಿಕೆಯೊಡ್ಡಿದ್ದಾರೆ. ಹೀಗಾಗಿ, ಮಧುಸೂಧನ್‌ ಅಂದಿನ ನಗರ ಪೊಲೀಸ್‌ ಆಯುಕ್ತರಿಗೂ ದೂರು ನೀಡಿದ್ದರು.

ಅರ್ಜಿದಾರರ ವಾದ ಏನಾಗಿತ್ತು?
ಕೃತಕ ಗರ್ಭಧಾರಣೆ ಚಿಕಿತ್ಸೆ ನೀಡುವುದಾಗಿ  6.50 ಲಕ್ಷ ರೂ. ಹಣ ಪಡೆದುಕೊಂಡು ಯಾವುದೇ ಚಿಕಿತ್ಸೆ ನೀಡದೇ ವಂಚಿಸಿದೆ. ಹೀಗಾಗಿ ಸಂಸ್ಥೆಗೆ ಪಾವತಿಸಿರುವ ಮೊತ್ತ ಹಿಂತಿರುಗಿಸುವಂತೆ, 2 ಲಕ್ಷ ರೂ. ಪರಿಹಾರ ಹಾಗೂ ಕಾನೂನು ಹೋರಾಟ ಇನ್ನಿತರೆ ಪರಿಹಾರ ಮೊತ್ತವಾಗಿ 1ಲಕ್ಷ ರೂ. ಕೊಡಿಸುವಂತೆ 2014ರ ಆಗಸ್ಟ್‌ನಲ್ಲಿ ಗ್ರಾಹಕ ನ್ಯಾಯಾಲಯದಲ್ಲಿ ದಂಪತಿ ದೂರು ನೀಡಿದ್ದರು.

– ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next