Advertisement
ಗರ್ಭ ಧರಿಸಿದ ಮತ್ತು ಶಿಶು ಜನನದ ಬಳಿಕದ ಅವಧಿಗಳಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾಗದಿರುವುದಕ್ಕೆ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ತೀರಾ ಅಗತ್ಯ. ತಾಯಿಯ ಬಾಯಿಯ ಆರೋಗ್ಯವು ಭ್ರೂಣದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಇತ್ತೀಚೆಗಿನ ಸಂಶೋಧನೆಗಳಿಂದ ತಿಳಿದುಬಂದಿದೆ. ಆದ್ದರಿಂದ ಗರ್ಭ ಧರಿಸಿದ ಅವಧಿಯಲ್ಲಿ ಯಾವುದೇ ಸಂಕೀರ್ಣ ಸಮಸ್ಯೆಗಳು ತಲೆದೋರದಂತೆ ಇರುವುದಕ್ಕಾಗಿ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸ್ತ್ರೀಯ ಗರ್ಭ ಧರಿಸಿದ ಅವಧಿಯಲ್ಲಿ ಆಕೆಯ ದೇಹದಲ್ಲಿ ಏನೇನು ಬದಲಾವಣೆಗಳಾಗುತ್ತವೆ ಮತ್ತು ಈ ಅವಧಿಯಲ್ಲಿ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
ಗರ್ಭ ಧರಿಸುವ ಯೋಜನೆ ಹಾಕಿಕೊಂಡಿದ್ದರೆ ದಂತ ವೈದ್ಯರನ್ನು ಭೇಟಿಯಾಗಿ. ಅವರು ನಿಮ್ಮ ಹಲ್ಲುಗಳು ಮತ್ತು ಬಾಯಿಯನ್ನು ಪರೀಕ್ಷಿಸಿ ಯಾವುದಾದರೂ ಸಮಸ್ಯೆಗಳಿದ್ದರೆ ಚಿಕಿತ್ಸೆ ನೀಡುತ್ತಾರೆ. ಈ ಮೂಲಕ ಗರ್ಭ ಧರಿಸಿದ ಬಳಿಕ ತೊಂದರೆ ನೀಡಬಹುದಾದ ಸಮಸ್ಯೆಗಳನ್ನು ಅದಕ್ಕೆ ಮುನ್ನವೇ ಪರಿಹರಿಸಿಕೊಳ್ಳಬಹುದು. ಗರ್ಭ ಧರಿಸಿದ ಅವಧಿಯಲ್ಲಿ
ಗರ್ಭ ಧರಿಸಿದ ದಿನದಿಂದ ತೊಡಗಿ ಹೆರಿಗೆಯಾಗುವವರೆಗೂ ಸ್ತ್ರೀ ದೇಹ ಹತ್ತು ಹಲವು ಬದಲಾವಣೆಗಳನ್ನು ಅನುಭವಿಸುತ್ತದೆ. ಹಲವಾರು ಹಾರ್ಮೋನ್ ಸಂಬಂಧಿ ಬದಲಾವಣೆಗಳು ಉಂಟಾಗುತ್ತವೆ. ಈ ಹಾರ್ಮೋನ್ ಬದಲಾವಣೆಗಳಿಂದ ಕೆಲವು ಗರ್ಭಿಣಿಯರಲ್ಲಿ ವಸಡುಗಳ ಊತ, ವಸಡುಗಳಿಂದ ರಕ್ತಸ್ರಾವ ಉಂಟಾಗಬಹುದು. ಇಂತಹ ಸಮಸ್ಯೆ ಉಂಟಾದರೆ ದಂತವೈದ್ಯರನ್ನು ಅಗತ್ಯವಾಗಿ ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಮನೆಯಲ್ಲಿ ದಿನಕ್ಕೆ ಎರಡು ಬಾರಿ ಮೃದುವಾದ ಬ್ರಶ್‌ನಿಂದ ಹಲ್ಲುಗಳನ್ನು ಉಜ್ಜಿಕೊಳ್ಳುವುದು ಅಗತ್ಯ. ಹದ ಬಿಸಿಯಾದ ನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳುವುದು ಕೂಡ ಸಹಾಯಕ.
Related Articles
Advertisement
ಯಾವುದೇ ದಂತ ವೈದ್ಯಕೀಯ ಚಿಕಿತ್ಸೆಯನ್ನು ಕೈಗೊಳ್ಳಲು ಗರ್ಭಧಾರಣೆಯ ದ್ವಿತೀಯ ತ್ತೈಮಾಸಿಕ ಅತ್ಯಂತ ಸುರಕ್ಷಿತವಾದ ಅವಧಿಯಾಗಿರುತ್ತದೆ. ಸಾಮಾನ್ಯ ರೂಢಿಗತ ಹಲ್ಲುಗಳ ತಪಾಸಣೆಯನ್ನು ಯಾವುದೇ ಸಮಯದಲ್ಲಿ ನಡೆಸಬಹುದು.
ಗರ್ಭಧಾರಣೆಯ ಸಮಯದ ಗಡ್ಡೆಗಳುಗಡ್ಡೆಗಳು ಎಂದ ಕೂಡಲೇ ನೀವು ಗಾಬರಿಗೊಳ್ಳಬೇಕಾಗಿಲ್ಲ. ಗರ್ಭಧಾರಣೆಯ ಸಮಯದ ಗಡ್ಡೆಗಳು ಜಿಂಜಿವಾದಲ್ಲಿ ಹಲ್ಲುಗಳ ನಡುವೆ ಉಂಟಾಗುವ ಮೃದು ಅಂಗಾಂಶಗಳ ಹೆಚ್ಚುವರಿ ಬೆಳವಣಿಗೆ. ಇವು ಅಪಾಯಕಾರಿಯಲ್ಲ ಮತ್ತು ಶಿಶು ಜನನದ ಬಳಿಕ ತಾವಾಗಿ ಮಾಯವಾಗುತ್ತವೆ.
ಅವು ನಿಜವಾಗಿಯೂ ಕಿರಿಕಿರಿ ಉಂಟು ಮಾಡುತ್ತಿದ್ದರೆ ದಂತ ವೈದ್ಯರು ಸ್ಥಳೀಯ ಅರಿವಳಿಕೆ ನೀಡಿ ಅವುಗಳನ್ನು ನಿವಾರಿಸಬಹುದಾಗಿದೆ. ಮಾರ್ನಿಂಗ್ ಸಿಕ್‌ನೆಸ್ ಮತ್ತು ಹಲ್ಲುಗಳು
ಅನೇಕ ಸ್ತ್ರೀಯರು ಗರ್ಭ ಧರಿಸಿದ ಅವಧಿಯಲ್ಲಿ ಹೊಟ್ಟೆತೊಳೆಸುವಿಕೆ ಮತ್ತು ವಾಂತಿಯಾಗುವ ತೊಂದರೆಯನ್ನು ಅನುಭವಿಸುತ್ತಾರೆ. ಇದು ಬೆಳಗ್ಗಿನ ಸಮಯದಲ್ಲಿ ಅತಿ ಹೆಚ್ಚು. ಹೊಟ್ಟೆಯಲ್ಲಿರುವ ಆಮ್ಲವು ವಾಂತಿಯ ಮೂಲಕ ಬಾಯಿಗೆ ಬರುವಾಗ ಹಲ್ಲುಗಳ ಎನಾಮಲ್ ಕೊರೆದು ಸೂಕ್ಷ್ಮ ಸಂವೇದಕತ್ವ ಉಂಟಾಗುವ ಸಾಧ್ಯತೆಯಿರುವುದರಿಂದ ಈ ಬಗ್ಗೆ ಕಾಳಜಿ ಅವಶ್ಯ.
ಮಾರ್ನಿಂಗ್ ಸಿಕ್‌ನೆಸ್ ಮತ್ತು ಹೊಟ್ಟೆಯುರಿ ಉಂಟಾಗುವ ಸಮಸ್ಯೆ ನಿಮಗಿದ್ದರೆ ವಾಂತಿಯ ಬಳಿಕ ಬಾಯಿಯನ್ನು ಸ್ವತ್ಛವಾಗಿ ತೊಳೆದುಕೊಳ್ಳಿ. ಇದರಿಂದ ಬಾಯಿಗೆ ಬಂದಿರುವ ಆಮ್ಲವು ತೊಳೆದುಹೋಗಿ ಹಲ್ಲುಗಳು ಸುರಕ್ಷಿತವಾಗಿರುತ್ತವೆ. ಗರ್ಭಧಾರಣೆಯ ಅವಧಿಯಲ್ಲಿ ಬಾಯಿ ಒಣಗುವಿಕೆ ಸಾಕಷ್ಟು ನೀರು ಕುಡಿಯುವ ಮೂಲಕ ಬಾಯಿಯನ್ನು
ಆದ್ರವಾಗಿ ಇರಿಸಿಕೊಳ್ಳಿ. ಬಾಯಿ ಒಣಗಿದ್ದರೆ ಹಲ್ಲು ಹುಳುಕಾಗುವ ಸಾಧ್ಯತೆಗಳು ಹೆಚ್ಚು. ಬಾಯಿ ಮತ್ತು ಹಲ್ಲುಗಳ ಆರೋಗ್ಯವೂ ತಾಯಿ ಮತ್ತು ಶಿಶುವಿನ ಸ್ವಾಸ್ಥ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಗರ್ಭಧಾರಣೆಯ ಸಂದರ್ಭದಲ್ಲಿ ಈ ಬಗ್ಗೆ ಸಾಕಷ್ಟು ಎಚ್ಚರಿಕೆ, ಕಾಳಜಿ ಹೊಂದಿರುವುದು ತುಂಬಾ ಆವಶ್ಯಕವಾಗಿದೆ. ಡಾ| ಆನಂದ್‌ದೀಪ್ ಶುಕ್ಲಾ ,
ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗ, ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ