ನಾಲತವಾಡ: ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ನಾಲತವಾಡ ಪಟ್ಟಣಕ್ಕೆ ಪ್ರಥಮ ಆದ್ಯತೆ ನೀಡುತ್ತೇನೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು. ಸ್ಥಳೀಯ ವೀರೇಶ್ವರ ವೃತ್ತದಲ್ಲಿ ನಗರೋತ್ಥಾನ ಇಲಾಖೆಯಿಂದ ಸುಮಾರು 2.75 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪಟ್ಟಣದಲ್ಲಿ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇನೆ.
ಚುನಾವಣೆಯಲ್ಲಿ ಮನೆ ಮನೆಗೆ ಮತ ಕೇಳಿದ್ದೇನೆ ನಾನು ಅಷ್ಟಕ್ಕೆ ಸೀಮಿತನಲ್ಲ, ನಿಮ್ಮ ಪ್ರತಿ ಮನೆ ಮನೆಗೂ ಬಂದು ನಿಮ್ಮ ಕಷ್ಟಗಳನ್ನು ಮತ್ತು ಸರಕಾರದ ಸೌಲಭ್ಯವನ್ನು ಪ್ರಾಮಾಣಿಕವಾಗಿ ಮುಟ್ಟಿಸಲು ಪ್ರಯತ್ನ ಮಾಡುತ್ತೇನೆ ಎಂದರು.
ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಪ್ರತಿ ಮನೆ ಮನೆಗೆ ಸರ್ವೇ ಮಾಡಿ ಅದರ ವರದಿಯನ್ನು ನೀಡಿ ಎಂದು ಆದೇಶ ನೀಡಿದ್ದೇನೆ. ಅದರ ಜೊತೆಗೆ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸದ್ಯದಲ್ಲೆ ಪಟ್ಟಣದಲ್ಲಿ ಒಂದು ಸಭೆ ಮಾಡಲಾಗುವುದು. ಬಡ ಕುಟುಂಬಗಳಿಗೆ ಸರಕಾರದ ಸೌಕರ್ಯ ಒದಗಿಸುವುದು ನನ್ನ ಧರ್ಮ. ಮುಂದಿನ ಅಧಿಕಾರ ಅವಧಿಯಲ್ಲಿ ಪಟ್ಟಣದಲ್ಲಿ ಇರುವ ಪ್ರತಿಯೊಬ್ಬ ಬಡವನಿಗೆ ವಾಸಕ್ಕೆ ಯೋಗ್ಯವಾದಂತ ಮನೆಗಳನ್ನು ಕಟ್ಟಿಸಲು ಸರಕಾರದಿಂದ ಮಂಜೂರಾತಿ ತರುವ ಕೆಲಸ ಮಾಡುತ್ತೇನೆ ಎಂದರು.
ಪಟ್ಟಣದ ಸುತ್ತ ಮುತ್ತ ಸಾಕಷ್ಟು ರೈತರು ನೀರಾವರಿಗಾಗಿ ಭೂಮಿ ಕಳೆದುಕೊಂಡಿದ್ದಾರೆ. ರೈತರಿಗೆ ಸೂಕ್ತ ಪರಿಹಾರ ಕೂಡ ನೀಡಿಲ್ಲ, ಅವರ ಭೂಮಿಗೆ ನೀರು ಸಹ ಸರಿಯಾಗಿ ಬರುತಿಲ್ಲ ಎಂಬ ಸಮಸ್ಯೆಯಿತ್ತು. ನೀರಾವರಿ ಸಮಸ್ಯೆ ಪರಿಹರಿಸಲು ಈಗಾಗಲೆ 44.5 ಕೋಟಿ ರೂ. ಟೆಂಡರ್ ಅಪ್ರುವಲ್ ಆಗಿದೆ, ಆದಷ್ಟು ಬೇಗ ಅಗ್ರಿಮೆಂಟ್ ಆಗುತ್ತದೆ. ಈ ಸಾರಿ ನಾನು ಖುದ್ದು ರೈತರ ಜಮೀನುಗಳಿಗೆ ಭೇಟಿ ನೀಡಿ ಅವರ ಜಮೀನುಗಳಿಗೆ ನೀರು ಹರಿಸಲು ಪ್ರಯತ್ನ ಮಾಡುತ್ತೇನೆ ಎಂದರು.
ಈ ವೇಳೆ ಮುಖ್ಯಾಧಿಕಾರಿ ಮಾರುತಿ ನಡವಿನಕೇರಿ, ಪಟ್ಟಣ ಪಂಚಾಯತ್ ಸದಸ್ಯರಾದ ಭೀಮಣ್ಣ ಗುರಿಕಾರ, ವೀರೇಶ ಚಲವಾದಿ, ಮುಖಂಡರಾದ ಎಂ.ಎಸ್. ಪಾಟೀಲ, ಬಸವರಾಜ ಚಿನಿವಾಲ, ಮುಖಂಡರಾದ ಅಂಗಡಿ ಬಸಣ್ಣ ವಡಗೇರಿ, ಬಸವರಾಜ ಡೆರೇದ, ಖಾಜಾಹುಸೇನ ಎತ್ತಿನಮನಿ, ಜಗದೀಶ ಕೆಂಭಾವಿ, ಸಿದ್ದಣ್ಣ ಕಟ್ಟಿಮನಿ, ಮಹಾಂತೇಶ ಗಂಗನಗೌಡರ, ಸೈಯದ್ ಡಖನಿ ಇದ್ದರು.