Advertisement
ನಗರದ ಕೆ.ಆರ್.ವೃತ್ತದಲ್ಲಿನ ಬೆಸ್ಕಾಂ ಕಾರ್ಪೋರೇಟ್ ಕಚೇರಿಯಲ್ಲಿ ಎರಡು ಚಾರ್ಜಿಂಗ್ ಸಾಧನವಿರುವ ಕೇಂದ್ರವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಕೇಂದ್ರ ಉದ್ಘಾಟನಾ ಸಮಾರಂಭದ ವೇಳೆ ಮಾತನಾಡಿದ ಅವರು, ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕೇಂದ್ರದಲ್ಲಿ ಸಾರ್ವಜನಿಕರು ತಮ್ಮ ಎಲೆಕ್ಟ್ರಿಕ್ ವಾಹನವನ್ನು ಕಡಿಮೆ ದರದಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ.
Related Articles
Advertisement
ಎಲೆಕ್ಟ್ರಿಕ್ ವಾಹನವಿರುವವರು ಮನೆಯಲ್ಲಿ ಚಾರ್ಜ್ ಮಾಡಿದರೆ ಪ್ರತಿ ಯೂನಿಟ್‌ಗೆ 6ರಿಂದ 7 ರೂ. ಭರಿಸಬೇಕಾಗುತ್ತದೆ. ಆದರೆ ಈ ಕೇಂದ್ರದಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರೆವರೆಗೆ ಚಾರ್ಚ್ ಮಾಡಿಕೊಂಡರೆ ಪ್ರತಿ ಯೂನಿಟ್‌ಗೆ 4.85 ರೂ. ಹಾಗೂ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಚಾರ್ಜ್ ಮಾಡಿದರೆ 3.85 ರೂ. ಪಾವತಿಸಿದರೆ ಸಾಕು. ಒಂದು ಯಂತ್ರ ಅಳವಡಿಕೆಗೆ 5 ಲಕ್ಷ ರೂ. ವೆಚ್ಚವಾಗಲಿದೆ.
ಹೊರ ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಕಾರು: ಬೆಸ್ಕಾಂ ಸದ್ಯ ತನ್ನ ದಿನನಿತ್ಯದ ಕಾರ್ಯ ನಿರ್ವಹಣೆ, ಸೇವೆಗೆ ಬಳಸುತ್ತಿರುವ 1,500 ಕಾರುಗಳಿಗೆ ಬದಲಾಗಿ ಎಲೆಕ್ಟ್ರಿಕ್ ಕಾರು ಬಳಸಲು ಗಂಭೀರ ಚಿಂತನೆ ನಡೆಸಿದೆ. ಅದರ ಭಾಗವಾಗಿ ಐದು ಕಾರು ಪಡೆಯಲಾಗಿದೆ. ಭಾಗೀರಥಿ ಕಂಪನಿಯು ಹೊರಗುತ್ತಿಗೆಯಡಿ ಎಲೆಕ್ಟ್ರಿಕ್ ಕಾರು ಸೇವೆ ಒದಗಿಸಲಿದೆ.
ಕೆಲವೇ ತಿಂಗಳಲ್ಲಿ 100 ಕಾರುಗಳನ್ನು ಎಲೆಕ್ಟ್ರಿಕ್ ಕಾರುಗಳಿಗೆ ಬದಲಾಯಿಸಲು ಸಿದ್ಧತೆ ನಡೆಸಿದೆ. ಡೀಸೆಲ್ ಕಾರಿನಲ್ಲಿ ಒಂದು ಕಿ.ಮೀ. ಕ್ರಮಿಸಲು 4 ರೂ. ಮೌಲ್ಯದ ಡೀಸೆಲ್ ಬಳಕೆಯಾಗುತ್ತದೆ. ಎಲೆಕ್ಟ್ರಿಕ್ ಕಾರಿನಲ್ಲಿ ಒಂದು ಕಿ.ಮೀ. ಕ್ರಮಿಸಲು ಬಳಕೆಯಾಗುವ ವಿದ್ಯುತ್‌ಗೆ 1 ರೂ. ಮಾತ್ರ ಖರ್ಚಾಗುತ್ತದೆ. 125 ಕಿ.ಮೀ. ದೂರ ಕ್ರಮಿಸಲು 75 ರೂ. ಖರ್ಚಾಗಲಿದೆ.
ಬೆಸ್ಕಾಂ ಹೊರ ಗುತ್ತಿಗೆಯಡಿ ಪಡೆಯುತ್ತಿರುವ ಐದು ಕಾರುಗಳಲ್ಲಿ ಮಹಿಳಾ ಚಾಲಕಿಯರೂ ಇದ್ದಾರೆ. ಭಾಗೀರಥಿ ಕಂಪನಿಯಲ್ಲಿ 500 ಮಹಿಳಾ ಚಾಲಕಿಯರಿದ್ದು, ಬೆಸ್ಕಾಂ ಕಂಪನಿಯ ಕಾರುಗಳ ಚಾಲನೆಗೆ 50 ಮಂದಿಗೆ ತರಬೇತಿ ನೀಡಿದೆ.
15 ವರ್ಷದಿಂದ ಕಾರು ಚಾಲಕಿಯಾಗಿದ್ದೇನೆ. ಈ ಹಿಂದೆ ಕೆಲ ಕಂಪನಿಗಳ ಟ್ಯಾಕ್ಸಿ, ಶಾಲಾ ಬಸ್ ಚಾಲಕಿಯಾಗಿ ಕಾರ್ಯ ನಿರ್ವಹಿಸಿದ್ದೆ. ಎಲೆಕ್ಟ್ರಿಕ್ ಕಾರಿನಲ್ಲಿ ಪೆಟ್ರೋಲ್ ಕಾರು ಚಾಲನೆಗಿಂತ ಹೆಚ್ಚು ಸುಲಭವೆನಿಸುವ ಲಕ್ಷಣಗಳಿವೆ. ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಕೆಲಸ ಮಾಡಲಿದ್ದೇನೆ -ಮಂಜುಳಾ, ಹೆಬ್ಟಾಳ ನಿವಾಸಿ ಬೆಸ್ಕಾಂನ 10 ಕಚೇರಿಯಲ್ಲಿ ಸ್ಥಾಪನೆ: ನಗರ ವ್ಯಾಪ್ತಿಯ 10 ಕಚೇರಿಗಳಲ್ಲಿ ಇದೇ ರೀತಿಯ ಚಾರ್ಜಿಂಗ್ ಕೇಂದ್ರ ತೆರೆಯಲು ಬೆಸ್ಕಾಂ ನಿರ್ಧರಿಸಿದೆ. ಯಲಹಂಕದ ದೊಡ್ಡಬಳ್ಳಾಪುರ ರಸ್ತೆ, ಜಾಲಹಳ್ಳಿ ಬಳಿಯ ಗೆಳೆಯರ ಬಳಗ ಲೇಔಟ್, ಬನಶಂಕರಿ 2ನೇ ಹಂತದ 22ನೇ ಮುಖ್ಯರಸ್ತೆ, ಕುಮಾರಸ್ವಾಮಿ ಲೇಔಟ್ 1ನೇ ಹಂತ, ಜೆ.ಪಿ.ನಗರ 1ನೇ ಹಂತ, ಪಾಂಡುರಂಗ ನಗರ, ವೈಟ್‌ಫೀಲ್ಡ್ ಸಮೀಪದ ಇಮ್ಮಡಿಹಳ್ಳಿ, ಎಚ್‌ಎಎಲ್ 2ನೇ ಹಂತದ 2ನೇ ಅಡ್ಡರಸ್ತೆ, ಪಿಳ್ಳಣ್ಣ ಗಾರ್ಡನ್ ರಸ್ತೆ, ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಎರಡು ಕೇಂದ್ರ ತೆರೆಯಲು ಬೆಸ್ಕಾಂ ಸಿದ್ಧತೆ ನಡೆಸಿದೆ. ಬಿಎಂಆರ್‌ಸಿಎಲ್ ಹಾಗೂ ಬಿಬಿಎಂಪಿಗೆ ಸೇರಿದ ಸುಮಾರು 300 ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿಯೂ ಈ ರೀತಿಯ ಚಾರ್ಜಿಂಗ್ ಕೇಂದ್ರ ತೆರೆಯಲು ಚರ್ಚೆ ನಡೆದಿದೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.