ಬೆಂಗಳೂರು: ಹೊಸ ಸರ್ಕಾರ ಮನಸ್ಸು ಮಾಡಿದರೆ, ಯಾವುದೇ ಶ್ರಮ ಇಲ್ಲದೆ ಅತ್ಯಲ್ಪ ಅವಧಿಯಲ್ಲೇ ನಗರದ ಶೇ. 75ರಷ್ಟು ಕೆರೆಗಳು ಸಂರಕ್ಷಿಸಬಹುದು. ಹೌದು, ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಕೆರೆಗಳು ಒತ್ತುವರಿಯಾದ ಪ್ರಮಾಣ ಶೇ. 25ರಷ್ಟು ಇದ್ದರೆ, ಉಳಿದ ಶೇ. 75ರಷ್ಟು ಭಾಗ ಈಗಲೂ ಹಾಗೇ ಇದೆ. ಆದರೆ, ಕೇಳುವವರೂ ಗತಿ ಇಲ್ಲ. ಕಣ್ಮುಂದೆಯೇ ಇರುವ ಈ ಕೆರೆಗಳ ಜಾಗ ಸಂರಕ್ಷಣೆ ಮಾಡಿದರೆ ಸಾಕು, ನೂರಾರು ಕೆರೆಗಳು ಭವಿಷ್ಯದ ಒತ್ತುವರಿಯಿಂದ ಬದುಕು ಉಳಿಯಲಿವೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿ 1,547 ಕೆರೆಗಳ ಪೈಕಿ 158 ಕೆರೆಗಳು ಒತ್ತುವರಿಯಾಗದೆ ಸುರಕ್ಷಿತವಾಗಿವೆ. ಉಳಿದೆಡೆ 40 ಸಾವಿರ ಎಕರೆಗೂ ಅಧಿಕ ಕೆರೆಗಳ ಜಾಗ ಖಾಲಿ ಇದೆ. ನೀರಿಲ್ಲದೆ ಒಣಗಿರುವ ಈ ಪ್ರದೇಶವು ಒತ್ತುವರಿದಾರರ ಕಾಕದೃಷ್ಟಿಯನ್ನು ಸೆಳೆಯುವಂತಿದೆ. ಇದನ್ನು ಎಷ್ಟೇ ಖರ್ಚಾದರೂ ಸರ್ಕಾರ ತ್ವರಿತ ಗತಿಯಲ್ಲಿ ಈ ಕೆರೆಗಳ ಗಡಿಗಳನ್ನು ಸಂರಕ್ಷಿಸಬೇಕು ಎಂದು ಕೆರೆ ಒತ್ತುವರಿ ಕುರಿತ ಸದನ ಸಮಿತಿ ಸ್ಪಷ್ಟವಾಗಿ ಹೇಳಿದೆ.
ಜತೆಗೆ ಪುನಶ್ಚೇತನ: ಈಗಾಗಲೇ ಆಗಿರುವ ಒತ್ತುವರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು. ಅದರ ಜತೆಜತೆಗೆ ಆ ಕೆರೆಯ ಪುನಶ್ಚೇತನಗೊಳಿಸಲು ಸಾಧ್ಯವಿರುವ ಎಲ್ಲಾ ಮಾರ್ಗೋಪಾಯಗಳನ್ನು ಪರಿಶೀಲಿಸಬೇಕು. ಒತ್ತುವರಿ ಪ್ರಮಾಣ 10,785.35 ಎಕರೆ ಇದ್ದರೆ, ಒತ್ತುವರಿ ಆಗಿರುವ ಕೆರೆಗಳಲ್ಲಿ ಉಳಿದ ಪ್ರದೇಶ 46,289.39 ಎಕರೆ ಆಗಿದೆ. ಬಹುತೇಕ ಅದೆಲ್ಲವೂ ಒಣಗಿರುವ ಪ್ರದೇಶ ಆಗಿದ್ದರಿಂದ ಒತ್ತುವರಿ ಸಾಧ್ಯತೆ ಹೆಚ್ಚಿದೆ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.
ಇಂತಹ ಒತ್ತುವರಿಯಾಗದೆ ಉಳಿದ ಕೆರೆಗಳು ಭವಿಷ್ಯದಲ್ಲಿ ಒತ್ತುವರಿ ಆಗದಿರಲು ಮೊದಲು ಅಲ್ಲಿ ನೀರು ಹರಿಯುವಂತೆ ಮಾಡಬೇಕು. ಇದಕ್ಕಾಗಿ ರಾಜಕಾಲುವೆಗಳನ್ನು ತೆರವುಗೊಳಿಸಬೇಕು. ಕೆರೆಗಳ ಸುತ್ತ ಇರುವ ಬಡಾವಣೆಗಳ ನೀರುಗಾಲುವೆಗಳ ವಿನ್ಯಾಸವನ್ನು ಪುನರ್‌ಪರಿಶೀಲಿಸಿ, ಅವು ಕೆರೆಗಳಿಗೆ ತಲುಪುವಂತೆ ಮಾಡಬೇಕು. ಕೊಳಚೆನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ, ಕೆರೆಗಳಿಗೆ ಹರಿಯುವ ಒಳಚರಂಡಿ ನೀರಿನ ಹರಿವು ತಪ್ಪಿಸಬೇಕು ಎಂದು ಸಮಿತಿ ಸಲ್ಲಿಸಿದ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಕೆರೆ ಅಭಿವೃದ್ಧಿ ನಿಧಿ: ಕೆರೆ ಅಂಗಳದಲ್ಲಿ ಜನರು ಅರಿವಿಲ್ಲದೆ ಮನೆಗಳು, ಫ್ಲ್ಯಾಟ್‌ಗಳು, ವಸತಿ ಸಮುಚ್ಛಯ, ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಒಮ್ಮೆಲೆ ಒಕ್ಕಲೆಬ್ಬಿಸುವುದರಿಂದ ಲಕ್ಷಾಂತರ ಜನ ಬೀದಿಗೆ ಬೀಳುತ್ತಾರೆ. ಆದ್ದರಿಂದ ಪ್ರತಿ ಒತ್ತುವರಿದಾರರ ಪ್ರಕರಣವನ್ನು ಪರಿಶೀಲಿಸಿ, ಕೆರೆ ಪುನಶ್ಚೇತನಗೊಳಿಸಲು ಸಾಧ್ಯವಿರುವ ಕಡೆಗಳಲ್ಲಿ ಕಡ್ಡಾಯವಾಗಿ ತೆರವುಗೊಳಿಸಬೇಕು. ಪುನಶ್ಚೇತನ ಸಾಧ್ಯವಿಲ್ಲದ ಕಡೆ ಮನೆಗಳನ್ನು ಸರ್ಕಾರವೇ ತನ್ನ ಸುಪರ್ದಿಗೆ ಪಡೆದು, ಅಲ್ಲಿ ವಾಸಿಸುತ್ತಿರುವವರಿಗೆ ವಾರ್ಷಿಕ ಭೋಗ್ಯ ದರ ನಿಗದಿಪಡಿಸಿ, ಲೀಸ್ ಮೊತ್ತ ಪಾವತಿಸಿಕೊಳ್ಳಬೇಕು. ಈ ರೀತಿ ಸಂಗ್ರಹವಾದ ಮೊತ್ತವನ್ನು ಕೆರೆ ಅಭಿವೃದ್ಧಿ ಕಾರ್ಯಗಳಿಗೆ ಪ್ರತ್ಯೇಕ ನಿಧಿ ಸ್ಥಾಪಿಸಿ, ಅದರಲ್ಲಿ ಜಮೆ ಮಾಡಬಹುದು ಎಂದು ತಿಳಿಸಿದೆ.
ವಿಜಯಕುಮಾರ್ ಚಂದರಗಿ