ತುಮಕೂರು: ನಗರದಲ್ಲಿ ಬಹುದಿನಗಳಿಂದ ಅಭಿವೃದ್ಧಿ ಕಾಣದ ವಿವಿಧ ಬಡಾವಣೆಗಳ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.
ಇಲ್ಲಿಯ ಜಯನಗರದ ನರಸೇಗೌಡರ ಮನೆರಸ್ತೆಯಲ್ಲಿ ಸಿ.ಸಿ. ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ರಸ್ತೆಗಳಿಗೆ ಹೆಚ್ಚಿನ ಆದ್ಯತೆ: ಮುಖ್ಯಮಂತ್ರಿಗಳ ವಿವೇಚನಾ ಅನುದಾನದಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲಿ ಎಲ್ಲಿ ರಸ್ತೆಗಳು, ಚರಂಡಿಗಳ ಕಾಮಗಾರಿ ಆಗಿಲ್ಲ ಅಂತಹ ಕಡೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ. 80 ಲಕ್ಷ ವೆಚ್ಚದಲ್ಲಿ 31ನೇ ವಾರ್ಡ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದ್ದು, ಪ್ರಸ್ತುತ 25 ಕೋಟಿ ರೂ. ಅನುದಾನದಲ್ಲಿ ಮುಖ್ಯ ರಸ್ತೆ ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ತಲಾ 5 ಕೋಟಿ ಮೀಸಲು: ಇಲ್ಲಿನ ಪ್ಯಾರಲಲ್ ರಸ್ತೆಗೆ ತಲಾ 5 ಕೋಟಿ ಮೀಸಲಿಟ್ಟಿದ್ದು, ಶೆಟ್ಟಿಹಳ್ಳಿಯಿಂದ ಪಾಲಸಂದ್ರ ರಸ್ತೆಗೆ ಸುಮಾರು 2 ಕೋಟಿಯನ್ನು ಹಾಕಿದ್ದು, ಈ ಭಾಗದಲ್ಲಿ ಹೆಚ್ಚಿನ ಹಿರಿಯ ನಾಗರಿಕರು ಸೇರಿ ನಾಗರಿಕ ಸಮಿತಿಯಿಂದ ಹಲವಾರು ಸರ್ಕಾರಿ ಜಾಗ ಹಾಗೂ ಪಾರ್ಕ್‌ನ್ನು ಉಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ವಿವಿಧ ಕಾಮಗಾರಿಗೆ ಭೂಮಿ ಪೂಜೆ: ಇದೇ ವೇಳೆ ಮಹಾನಗರಪಾಲಿಕೆಯ ವಾರ್ಡ್ ನಂ.31ರ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿವೇಚನಾ ಅನುದಾನದಲ್ಲಿ ಜಯನಗರ ಪಶ್ಚಿಮದ 1ನೇ ಮುಖ್ಯರಸ್ತೆಯ ಪ್ಯಾರಲಲ್ ರಸ್ತೆ, 2ನೇ ಮುಖ್ಯರಸ್ತೆ ಮತ್ತು 3ನೇ ಮುಖ್ಯರಸ್ತೆ, ಕಟ್ಟ ಶ್ರೀನಿವಾಸ್ ಮನೆ ರಸ್ತೆ ಹಾಗೂ ಜಯನಗರ ಪೂರ್ವದ 40 ಅಡಿ ರಸ್ತೆಯಿಂದ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗೆ ಸಿ.ಸಿ. ಚರಂಡಿ ಮತ್ತು ರಸ್ತೆ ಅಭಿವೃದ್ಧಿ, ಜಯನಗರ ಮುಖ್ಯರಸ್ತೆಯಲ್ಲಿ ನರಸೇಗೌಡರ ಮನೆ ರಸ್ತೆಯಲ್ಲಿ ಸಿ.ಸಿ. ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಭೂಮಿ ಪೂಜೆ ನೆರವೇರಿಸಿದರು.
ಮಹಾ ನಗರಪಾಲಿಕೆ ಮೇಯರ್ ಫರೀದಾ ಬೇಗಂ, ಉಪ ಮಹಾಪೌರರಾದ ಶಶಿಕಲಾ, ಆಯುಕ್ತೆ ರೇಣುಕಾ, ಪಾಲಿಕೆ ಸದಸ್ಯರಾದ ಸಿ.ಎನ್.ರಮೇಶ್, ಬಿ.ಜಿ.ಕೃಷ್ಣಪ್ಪ, ವಿಷ್ಣುವರ್ಧನ್, ಮಂಜುಳಾ, ಜಯನಗರ ಪಶ್ಚಿಮ ಬಡಾವಣೆಯ ನಾಗರಿಕ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿಗಳಾದ ವೀರಪ್ಪ ದೇವರು, ಅಧ್ಯಕ್ಷರಾದ ದಾಸಪ್ಪ, ಶ್ರೀನಿವಾಸ್‌ಮೂರ್ತಿ, ಕೆ.ವಿ.ಪ್ರಕಾಶ್, ಷಡಾ ಕ್ಷರಿ ಇತರರು ಇದ್ದರು.