ಬಾಗೇಪಲ್ಲಿ: ಜೀವಸಂಕುಲ ಉಳಿಸಿಕೊಳ್ಳುವ ಉದ್ದೇಶಕ್ಕಾಗಿ ಜಲ ಮೂಲಗಳನ್ನು ಸಂರಕ್ಷಿಸಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆದ್ಯತೆ ನೀಡುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಪರ ಕಾರ್ಯದರ್ಶಿ ಪಂಕಜ್‌ಕುಮಾರ್ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಗೂಳೂರು, ನಲ್ಲಪರೆಡ್ಡಿಪಲ್ಲಿ, ದೇವರಗುಡಿಪಲ್ಲಿ ಮತ್ತು ಪರಗೋಡು ಗ್ರಾಪಂಗಳ ವ್ಯಾಪ್ತಿಯಲ್ಲಿ ಜಲಶಕ್ತಿ ಅಭಿಯಾನ ಯೋಜನೆಯಡಿಯಲ್ಲಿ ವಿವಿಧ ಇಲಾಖೆ ವತಿಯಿಂದ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಲ್ಯಾಣಿ ಮತ್ತು ಕೆರೆಗಳ ಪುನಶ್ಚೇತನ, ಕಂದಕಗಳ ನಿರ್ಮಾಣ, ಹಸಿರೀಕರಣ ಚಟುವಟಿಕೆ, ನರೇಗಾ ಯೋಜನೆ ಹಾಗೂ ಚೆಕ್ ಡ್ಯಾಂ ಕಾಮಗಾರಿಗಳನ್ನು ತಂಡ ಪರಿಶೀಲಿಸಿತು.
ತಾಲೂಕು ಮಟ್ಟದ ಅಧಿಕಾರಿಗಳನ್ನುದ್ದೀಶಿಸಿ ಮಾತನಾಡಿ, ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಸಮಸ್ಯೆ ತೀವ್ರವಾಗುತ್ತಿದೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತಹ ಕಾಮಗಾರಿಗಳಾದ ಸಸಿ ನೆಡುವಿಕೆ, ಕೆರೆ ಕುಂಟೆಗಳ ಪುನಶ್ಚೇತನ, ಮಳೆನೀರು ಕೊಯ್ಲು ಅಳವಡಿಸುವಿಕೆ ಹಾಗೂ ಅಂತರ್ಜಲ ವೃದ್ಧಿಸುವಂತಹ ಕೆಲಸಗಳಿಗೆ ಮಾತ್ರ ಆಸಕ್ತಿ ತೋರಿಸಬೇಕು.
ಸರ್ಕಾರದಿಂದ ಅನುಷ್ಠಾನಗೊಳ್ಳುವ ಯೋಜನೆಗಳನ್ನು ಸಂಪೂರ್ಣವಾಗಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕಾಮಗಾರಿಗಳಿಗೆ ಬಳಕೆ ಮಾಡಿ ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಉಪ ಕಾರ್ಯದರ್ಶಿ ನೋಮೇಶ್ ಕುಮಾರ್, ನರೇಗಾ ಯೋಜನೆ ಜಿಲ್ಲಾ ಸಂಯೋಜಕ ಮಧುಕೃಷ್ಣ, ತಾಪಂ ಇಒ ಸಿ.ಶ್ರೀನಿವಾಸ್, ಕೃಷಿ ಸಹಾಯಕ ಅಧಿಕಾರಿ ಚಂದ್ರಶೇಖರ್, ತೋಟಗಾರಿಕೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಎಇಇ ರಾಮಲಿಂಗಾರೆಡ್ಡಿ, ತಾಲೂಕು ತಾಂತ್ರಿಕ ಸಂಯೋಜಕ ಮಂಜುನಾಥ್, ಪಿಡಿಒಗಳಾದ ಜಿ.ವಿ.ನಾರಾಯಣ, ಎಂ.ಎನ್.ಶಂಕರಪ್ಪ, ಎ.ಸುವರ್ಣ, ವಿ.ಭಾಗ್ಯಲಕ್ಷ್ಮೀ ಇದ್ದರು.