Advertisement

ಮತದಾನ ಜಾಗೃತಿಗೆ ಆದ್ಯತೆ

10:17 AM Mar 17, 2019 | |

ಶಿವಮೊಗ್ಗ: ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆಯಲು ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಶಿವರಾಮೇ ಗೌಡ ತಿಳಿಸಿದರು.

Advertisement

ಶನಿವಾರ ಜಿಪಂ ಸಭಾಂಗಣದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಕುರಿತಾಗಿ ಎಲ್ಲಾ ಇಲಾಖಾಧಿಕಾರಿಗಳೊಂದಿಗೆ ನಡೆಸಿದ ಸ್ವೀಪ್‌ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 

ಈ ಬಾರಿ ಶಿವಮೊಗ್ಗ ಜಿಲ್ಲೆ ಮತದಾನದಲ್ಲಿ ನಂಬರ್‌ ಒನ್‌ ಆಗಬೇಕು ಎಂಬ ಗುರಿ ಹೊಂದಲಾಗಿದೆ. ಇದಕ್ಕೆ ಪೂರಕವಾ ಗಿ ಕಳೆದ ಬಾರಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅಂತಹ ಮತಗಟ್ಟೆ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ತೀವ್ರಗೊಳಿಸಲಾಗುವುದು. ಕಡಿಮೆ ಮತದಾನವಾಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆಮನೆ ಭೇಟಿ, ಮತದಾನ ಕಡಿಮೆಯಾಗಲು ಕಾರಣ ತಿಳಿದು ಅದನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು. ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಯುವಜನ ಹಬ್ಬ ಆಯೋಜನೆ: ಈ ಬಾರಿ ಯುವ ಮತದಾರರನ್ನು ಸೆಳೆಯಲು ಅದರಲ್ಲೂ ಪ್ರಥಮ ಬಾರಿಗೆ ಮತ ಚಲಾಯಿಸುವ ಅಧಿ ಕಾರ ಪಡೆದಿರುವವರನ್ನು ಸೆಳೆಯಲು ಪ್ರತಿ ತಾಲೂಕಿನಲ್ಲಿ ಯುವಜನ ಹಬ್ಬ ಆಯೋಜಿಸಲಾಗುವುದು. ಇಲ್ಲಿ ಯುವ ಮತದಾರರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಚರ್ಚಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮತದಾನ ಬಗ್ಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಇದಲ್ಲದೆ ಬೀದಿ ನಾಟಕ, ಸ್ವ-ಸಹಾಯ ಗುಂಪುಗಳ ಮೂಲಕ ಜಾಗೃತಿ ಕಾರ್ಯಕ್ರಮಗಳು, ಬೈಕ್‌ ರ್ಯಾಲಿ, ಸೈಕಲ್‌
ಜಾಥಾ, ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು, ಅಂಗವಿಕಲರ ರ್ಯಾಲಿ, ಅಸಂಘಟಿತ ವಲಯದ ಕಾರ್ಮಿಕರಿಗೆ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಂಗವಿಕಲರಿಗೆ ಮತಗಟ್ಟೆಗಳಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗುವುದು. ಇದೇ ರೀತಿ ಅಶಕ್ತರನ್ನು ಮತಗಟ್ಟೆಗಳಿಗೆ ಕರೆತರಲು ವಾಹನ ವ್ಯವಸ್ಥೆ ಮಾಡಲಾಗುವುದು. ಎಲ್ಲಾ ಕಾರ್ಮಿಕರಿಗೆ ಮತದಾನದ ದಿನ ವೇತನ ಸಹಿತ ರಜೆಯನ್ನು ಕಡ್ಡಾಯವಾಗಿ ನೀಡುವಂತೆ ಎಲ್ಲಾ ವಾಣಿಜ್ಯೋದ್ಯಮಗಳಿಗೆ ಸೂಚನೆ ನೀಡಬೇಕು ಎಂದು ಅವರು ಹೇಳಿದರು.

Advertisement

ಈ ಬಾರಿ ವಿದ್ಯಾರ್ಥಿಗಳಿಂದ ಅವರ ಪೋಷಕರಿಗೆ ಮತದಾನದ ಜಾಗೃತಿ ಕುರಿತಾಗಿ ಪತ್ರ ಬರೆಯಲಾಗುವುದು. ಪ್ರತಿಯೊಂದು ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕ್ರಿಯಾ ಯೋಜನೆಯನ್ನು ತಕ್ಷಣ ಸಲ್ಲಿಸುವಂತೆ ಸೂಚನೆ ನೀಡಿದರು. ಸಾರಿಗೆ ಇಲಾಖೆ ಜಂಟಿ ಆಯುಕ್ತ ಶಿವರಾಜ ಪಾಟೀಲ್‌ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಇದ್ದರು.  

ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್‌ನಲ್ಲಿ ಮತದಾನ ಕುರಿತು ಘೋಷಣೆ, ಇದೇ ರೀತಿ ಕೆಎಂಎಫ್‌ ಹಾಲಿನ ಪ್ಯಾಕೆಟ್‌ ಹಾಗೂ ಇತರ ಉತ್ಪನ್ನಗಳ ಪ್ಯಾಕೆಟ್‌ ಮೇಲೆ ಮತದಾನ ಜಾಗೃತಿ ಸಂದೇಶ ಮುದ್ರಿಸಬೇಕು. ಪ್ರತಿ ಕಚೇರಿಗೆ ಮತದಾನದ ಜಾಗೃತಿ ರಬ್ಬರ್‌ ಸ್ಟಾಂಪ್‌ ಒದಗಿಸಲಾಗುವುದು. ರವಾನೆಯಾಗುವ ಪ್ರತಿ ಕಾಗದ ಪತ್ರಗಳ ಮೇಲೆ ಇದರ ಸೀಲ್‌ ಹೊಡೆಯಬೇಕು.
ಕೆ. ಶಿವರಾಮೇ ಗೌಡ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next