ಬೆಂಗಳೂರು: ಸ್ಥಳೀಯ ಸಂಪ್ರದಾಯ ಉಳಿಸಿಕೊಳ್ಳುವುದರ ಜತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿಯನ್ನು ವೈಜ್ಞಾನಿಕವಾಗಿ ರೂಪಿಸಲು ಆದ್ಯತೆ ನೀಡುವುದಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಳೆದ ಮೂರು ದಿನಗಳಿಂದ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿರುವ ಅವರು, ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ದೇಶದಲ್ಲಿ ಮಾದರಿಯಾದ ಕಾರ್ಯಯೋಜನೆಯನ್ನು ಮಾಡಿ ತೋರಿಸುವ ಉದ್ದೇಶದಿಂದ ಕೆಲಸ ಮಾಡುತ್ತಿರುವುದಾಗಿ ಹೇಳಿದರು.
ಈ ಕುರಿತು ಉದಯವಾಣಿ ಜತೆ ಮಾತನಾಡಿದ ಅವರು, ಸ್ಥಳೀಯವಾಗಿ ಕೌಶಲ್ಯ ವೃದಿಟಛಿಸುವ ಬಗ್ಗೆ ನಕ್ಷೆಯೊಂದನ್ನು ಸಿದ್ಧಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸ್ವಲ್ಪ ಮಟ್ಟಿನ ಕೆಲಸಗಳೂ ಆಗಿವೆ. ಉದಾಹರಣೆಗೆ, ಉತ್ತರ ಕನ್ನಡದ ಕಾರವಾರ ಭಾಗದಲ್ಲಿ ಚಿನ್ನದ ಕೆಲಸ, ಮೈಸೂರಿನಲ್ಲಿ ಮರದ ಕೆಲಸ ಮಾಡುವವರು, ಆರ್ಟ್ ವರ್ಕ್ ಮಾಡುವವರು ಹೆಚ್ಚಾಗಿದ್ದಾರೆ.
ಇದೇ ರೀತಿ ಆಯಾ ಭಾಗದ ವಿಶೇಷತೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯವಾಗಿ ಅವರ ಸಂಪ್ರದಾಯವನ್ನು ಉಳಿಸಿಕೊಳ್ಳುವದರ ಜತೆಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಕೌಶಲ್ಯವನ್ನು ಹೆಚ್ಚಿಸುವ ಕೆಲಸ ತಮ್ಮ ಇಲಾಖೆಯಿಂದ ಆಗಲಿದೆ ಎಂದರು. ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತಂತೆ ಶನಿವಾರ ಬೆಂಗಳೂರಿನಲ್ಲಿ ರಾಜ್ಯದ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದೇನೆ. ಆ ಬಳಿಕ ಒಂದು ಸ್ಪಷ್ಟ ಚಿತ್ರಣ ಸಿಗಲಿದ್ದು, ಅದರಂತೆ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.