Advertisement

ಎಂಒ4 ಬದಲು ಸಹ್ಯಾದ್ರಿ ಕೆಂಪುಮುಖ್ತಿಗೆ ಆದ್ಯತೆ

12:54 AM May 25, 2024 | Team Udayavani |

ಉಡುಪಿ: ಭತ್ತ ಬೇಸಾಯದಲ್ಲಿ ಎರಡು ದಶಕಗಳಿಂದ ಉಭಯ ಜಿಲ್ಲೆಗಳಲ್ಲಿ ಜನಪ್ರಿಯವಾಗಿದ್ದ ಎಂಒ4 ತಳಿಯ ಬದಲಿಗೆ ಈ ಬಾರಿ “ಸಹ್ಯಾದ್ರಿ ಕೆಂಪುಮುಖ್ತಿ ತಳಿಗೆ ಕೃಷಿ ಇಲಾಖೆಯಿಂದ ಆದ್ಯತೆ ನೀಡಲಾಗಿದೆ.

Advertisement

ಎಂಒ4 ಮತ್ತು ಸಹ್ಯಾದ್ರಿ ಕೆಂಪುಮುಖ್ತಿ ಎರಡೂ ಕುಚ್ಚಲಕ್ಕಿ ತಳಿಗಳೇ. ಸಹ್ಯಾದ್ರಿ ಕೆಂಪುಮುಖ್ತಿಯನ್ನು 3 ವರ್ಷಗಳಿಂದ ಪ್ರಾಯೋಗಿಕವಾಗಿ ಬಿತ್ತನೆ ಮಾಡುತ್ತ ಬರಲಾಗಿದೆ. ಈ ಬಾರಿ ಎಂಒ4 ತಳಿಯ ಬಿತ್ತನೆ ಬೀಜದ ಪೂರೈಕೆ ಕಡಿಮೆ ಇರುವುದರಿಂದ ಸಹ್ಯಾದ್ರಿ ಕೆಂಪುಮುಖ್ತಿ ಬಿತ್ತನೆಗೆ ಆದ್ಯತೆ ನೀಡಲಾಗಿದೆ. ಈ ತಳಿ ಪ್ರಾಯೋಗಿಕ ಬಿತ್ತನೆಯಲ್ಲಿ ಯಶ ಕಂಡಿರುವುದು ಮಾತ್ರವಲ್ಲದೆ ಎಂಒ4ಗೆ ಹೋಲಿಕೆ ಮಾಡಿದರೆ ಇಳುವರಿಯೂ ಶೇ. 30ರಷ್ಟು ಹೆಚ್ಚು ಎನ್ನುತ್ತಾರೆ ಕೃಷಿ ಇಲಾಖೆಯ ತಜ್ಞರು.

ಬಿತ್ತನೆ ಪ್ರದೇಶ ವಿಸ್ತರಣೆಯಾಗಿಲ್ಲ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಭತ್ತ ಪ್ರಧಾನ ಬೆಳೆಯಾಗಿದೆ. ಉಭಯ ಜಿಲ್ಲೆಗಳಲ್ಲೂ ಭತ್ತ ಬಿತ್ತನೆ ಪ್ರದೇಶದ ಗುರಿಯಲ್ಲಿ ಈ ಬಾರಿ ಏರಿಕೆ ಆಗಿಲ್ಲ. ಕಳೆದ ಬಾರಿಯಷ್ಟೇ ಪ್ರದೇಶದಲ್ಲಿ ಬಿತ್ತನೆಗೆ ಕೃಷಿ ಇಲಾಖೆ ಗುರಿ ನಿಗದಿಪಡಿಸಿಕೊಂಡಿದೆ.

ಕಳೆದ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಭತ್ತ ಬಿತ್ತನೆಯ ಗುರಿ ಸಾಧನೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ವರ್ಷ ಅಷ್ಟೇ ಪ್ರಮಾಣದಲ್ಲಿ ಗುರಿ ನಿಗದಿಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ಇಳುವರಿಗೆ ಯೋಜನೆ ರೂಪಿಸಲಾಗಿದೆ.

ಕಳೆದ ಬಾರಿ ಉಡುಪಿ ಜಿಲ್ಲೆಯಲ್ಲಿ 36 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆಯ ಗುರಿ ಹೊಂದಲಾಗಿತ್ತು. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಸುಮಾರು 35 ಸಾವಿರ ಹೆಕ್ಟೇರ್‌ ಪ್ರದೇಶಗಳಲ್ಲಿ ಮಾತ್ರ ಬಿತ್ತನೆ ಸಾಧ್ಯವಾಗಿತ್ತು. ಹೀಗಾಗಿ ಈ ಬಾರಿ ಕೇವಲ 500 ಹೆಕ್ಟೇರ್‌ ಪ್ರದೇಶ ಮಾತ್ರ ವಿಸ್ತರಿಸಿಕೊಂಡು 36,500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

Advertisement

ದ.ಕ. ಜಿಲ್ಲೆಯಲ್ಲಿ 9,390 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಕಳೆದ ವರ್ಷ ಇಷ್ಟೇ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅಂದರೆ ಈ ವರ್ಷ ಭತ್ತದ ಕೃಷಿ ಪ್ರದೇಶ ವಿಸ್ತರಣೆಯಾಗಿಲ್ಲ.

ಬಿತ್ತನೆ ಬೀಜ ಎಷ್ಟು ಲಭ್ಯ?
ಉಡುಪಿ ಜಿಲ್ಲೆಯ ಮೂರು ತಾಲೂಕುಗಳ ರೈತರಿಗೆ ವಿತರಿಸಲು 1,391 ಕ್ವಿಂಟಾಲ್‌ ಬಿತ್ತನೆ ಬೀಜ ಪೂರೈಕೆಯಾಗಿದ್ದು, ಈಗಾಗಲೇ 702 ಕ್ವಿಂಟಾಲ್‌ ಬೀಜವನ್ನು ಸಂಬಂಧಪಟ್ಟ ರೈತರಿಗೆ ವಿತರಣೆ ಮಾಡಲಾಗಿದೆ. ಸದ್ಯ 689 ಕ್ವಿಂಟಾಲ್‌ ದಾಸ್ತಾನು ಇದೆ. ದ.ಕ. ಜಿಲ್ಲೆಯಲ್ಲಿ 340 ಕ್ವಿಂಟಾಲ್‌ ಪೂರೈಕೆಯಾಗಿದ್ದು, ವಿತರಣೆ ಮಂಗಳವಾರ ಆರಂಭವಾಗಿದೆ. ಎರಡು ಜಿಲ್ಲೆಗಳಲ್ಲೂ ಬೇಡಿಕೆಗೆ ತಕ್ಕಷ್ಟು ರಸಗೊಬ್ಬರ ಪೂರೈಕೆ ಇದೆ.

ಸಹ್ಯಾದ್ರಿ ಕೆಂಪುಮುಖ್ತಿ: ವೈಶಿಷ್ಟ್ಯವೇನು?
-ಎಂಒ4 ಮತ್ತು ಸಹ್ಯಾದ್ರಿ ಕೆಂಪುಮುಖ್ತಿಎರಡೂ ಕುಚ್ಚಲಕ್ಕಿ ಭತ್ತದ ತಳಿಗಳು.
-ಎಂಒ4 ಭತ್ತದ ಸಸಿ ಸುಮಾರು 80 ಸೆಂ.ಮೀ. ಎತ್ತರ ಬೆಳೆದರೆ ಸಹ್ಯಾದ್ರಿ ಕೆಂಪುಮುಖ್ತಿ ಸುಮಾರು 85 ಸೆಂ.ಮೀ. ಎತ್ತರ ಬೆಳೆಯುತ್ತದೆ.
-ಭತ್ತದ ಗಾತ್ರವೂ ಎಂಒ4ಗಿಂತ ಸಹ್ಯಾದ್ರಿ ಕೆಂಪುಮುಖ್ತಿಯದು ಸ್ವಲ್ಪ ದೊಡ್ಡದು.
-ಎಂಒ-4 ತಳಿ 130-135 ದಿನಗಳಲ್ಲಿ ಕಟಾವಿಗೆ ಬಂದರೆ ಸಹ್ಯಾದ್ರಿ ಕೆಂಪುಮುಖೀ¤ 8ರಿಂದ 10 ದಿನ ಮುಂಚಿತ ಅಂದರೆ 120- 125 ದಿನಗಳಲ್ಲಿ ಕಟಾವಿಗೆ ಬರುತ್ತದೆ.
-ಮಾನ್ಸೂನ್‌ ವಿಳಂಬವಾದರೂ ಜುಲೈ ಎರಡನೇ ವಾರದವರೆಗೆ ಕಾದು ಅನಂತರ ಸಹ್ಯಾದ್ರಿ ಕೆಂಪುಮುಖ್ತಿ ಬಿತ್ತನೆ ಮಾಡಿ ಉತ್ತಮ ಇಳುವರಿ ಪಡೆಯಬಹುದು.
-ಸಹ್ಯಾದ್ರಿ ಕೆಂಪುಮುಖ್ತಿ ಬೆಂಕಿ ರೋಗ ವನ್ನು ತಡೆದುಕೊಳ್ಳಲು ಶಕ್ತಿ ಹೊಂದಿದೆ.
-ಎಂಒ4 ಪ್ರತೀ ಹೆಕ್ಟೇರ್‌ಗೆ 50ರಿಂದ 55 ಕ್ವಿಂಟಾಲ್‌ ಇಳುವರಿ ನೀಡಿದರೆ ಸಹ್ಯಾದ್ರಿ ಕೆಂಪುಮುಖ್ತಿ ಪ್ರತೀ ಹೆಕ್ಟೇರ್‌ಗೆ 55ರಿಂದ 60 ಕ್ವಿಂಟಾಲ್‌ ಇಳುವರಿ ನೀಡುತ್ತದೆ.
-ಶಿವಮೊಗ್ಗ , ಚಿಕ್ಕಮಗಳೂರು ಭಾಗದಲ್ಲಿ ಈಗಾಗಲೇ ಪ್ರತೀ ಹೆಕ್ಟೇರ್‌ಗೆ 60 ಕ್ವಿಂಟಾಲ್‌ಗ‌ಳಷ್ಟು ಇಳುವರಿ ಪಡೆದಿದ್ದಾರೆ ಎಂದು ಉಡುಪಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಎಂಒ4 ಭತ್ತದ ತಳಿಯನ್ನು 20 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಬೆಳೆಯುತ್ತ ಬಂದಿದ್ದೇವೆ. ಈಗ ಸಹ್ಯಾದ್ರಿ ಕೆಂಪುಮುಖ್ತಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಇಳುವರಿಯೂ ಚೆನ್ನಾಗಿದೆ. ಹೀಗಾಗಿ ಈ ಬಾರಿ ಎಂಒ4 ಬದಲಿಗೆ ಹೊಸ ತಳಿಯ ಭತ್ತ ನೀಡುತ್ತಿದ್ದೇವೆ. ಬಿತ್ತನೆ ಪ್ರದೇಶದಲ್ಲಿ ವಿಸ್ತರಣೆಯಾಗಿಲ್ಲ.
-ಡಾ| ಕೆಂಪೇಗೌಡ , ಜಂಟಿ ನಿರ್ದೇಶಕ ಕೃಷಿ ಇಲಾಖೆ, ದ.ಕ.
-ಸತೀಶ್‌, ಹಿರಿಯ ತಾಂತ್ರಿಕ ಅಧಿಕಾರಿ, ಕೃಷಿ ಇಲಾಖೆ, ಉಡುಪಿ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next