ಅಫಜಲಪುರ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ತಾಲೂಕು ಆಡಳಿತ ನಿಗಾವಹಿಸಬೇಕು, ತಹಶೀಲ್ದಾರ್ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒಗಳ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಮಾಹಿತಿ ಪಡೆಯುವಂತೆ ಶಾಸಕ ಎಂ.ವೈ.ಪಾಟೀಲ ಸೂಚಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಕುಡಿಯುವ ನೀರಿನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಲ್ಕು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಬಹುತೇಕ ಘಟಕಗಳು ವಿವಿಧ ಕಾರಣಗಳಿಂದ ಸ್ಥಗಿತವಾಗಿವೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ಗಳು ಗ್ರಾಮಗಳಿಗೆ ಭೇಟಿ ನೀಡಿ, ಈ ಬಗ್ಗೆ ಮಾಹಿತಿ ಕಲೆಹಾಕಬೇಕು. ಒಂದು ವಾರದಲ್ಲಿ ನೀರಿನ ಘಟಕಗಳನ್ನು ಪ್ರಾರಂಭಿಸಬೇಕು ಎಂದು ಹೇಳಿದರು.
ನರೇಗಾದಡಿ ಕೆಲಸ ಒದಗಿಸುವಂತೆ ಕೂಲಿಕಾರರು ಕೇಳಿದ್ದು, ಈಗಾಗಲೇ ಕೆಲಸ ಆರಂಭ ಮಾಡಿದ್ದೇವೆ. ಏಪ್ರಿಲ್ ತಿಂಗಳಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಆರಂಭಿಸಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಫಿ ಭರವಸೆ ನೀಡಿದರು.
ತಹಶೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ಈಗ ತಾಲೂಕಿನಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಕುಡಿಯುವ ನೀರಿನ ಟಾಸ್ಕ್ ಫೋರ್ಸ್‌ನಲ್ಲಿ ಅನುದಾನ ಇಲ್ಲ. ಈ ಬಗ್ಗೆ ಪಿಡಿಒಗಳ ಸಭೆ ನಡೆಸಿ ಮಾಹಿತಿ ಪಡೆಯಲಾಗುವುದು. ನೀರು ಪೂರೈಸುವ ಘಟಕಗಳಿಗೆ ವಿದ್ಯುತ್ ಪೂರೈಸಲು ಜೆಸ್ಕಾಂ ಅಧಿಕಾರಿಗಳು ಕಾಳಜಿವಹಿಸಬೇಕು ಎಂದು ಹೇಳಿದರು.
ಪಟ್ಟಣದಲ್ಲಿ ಪುರಾತನ ಬಾವಿಗಳ ಪುನಶ್ಚೇತನ ಮಾಡುವ ಅಗತ್ಯತೆ ಇದೆ. ಈ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ಅನುದಾನ ನೀಡುತ್ತೇವೆ. ಮಾದಾಬಾಳ ತಾಂಡಾದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಆಗಬೇಕು. ಪಟ್ಟಣದಲ್ಲಿ ನೀರಿನ ತೊಂದರೆ ಇಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾಹಿತಿ ನೀಡಿದರು.
ಪಶು ಇಲಾಖೆಯ ಡಾ| ಎಂ.ಎಸ್. ಗಂಗನಳ್ಳಿ ಮಾತನಾಡಿ 51,640 ಮೆಟ್ರಿಕ್ ಟನ್ ಮೇವು ಲಭ್ಯವಿದೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ತೊಂದರೆ ಆಗುವುದಿಲ್ಲ ಎಂದರು. ಅಧಿಕಾರಿಗಳಾದ ಎಚ್.ಎಸ್.ಗಡಗಿ ಮನಿ,ಚೇತನ ಗುರಿಕಾರ, ನಬಿಲಾಲ ಗಬಸಾವಳಗಿ, ರತ್ನಾಕರ ತೋರಣ, ಸೈಯದ್ ಇಸಾ, ಚವ್ಹಾಣ ಹಾಗೂ ಇನ್ನಿತರರು ಇದ್ದರು.