Advertisement

ಉತ್ತಮ ಸಂಪರ್ಕ ಸೌಲಭ್ಯಕ್ಕೆ ಆದ್ಯತೆ

04:13 PM May 20, 2017 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಉತ್ತಮ ಸಂಪರ್ಕ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಸಂಪರ್ಕ ಖಾತೆ ಸಚಿವ ಮನೋಜ ಸಿನ್ಹಾ ಹೇಳಿದರು. ನಗರದ ಸಾಂಸ್ಕೃತಿಕ ಭವನದಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ 150ನೇ ಜಯಂತ್ಯುತ್ಸವ ಸ್ಮರಣೆಗಾಗಿ ಭಾರತ ಸರ್ಕಾರದಿಂದ ಮುದ್ರಿಸಲಾದ ಅಂಚೆ ಚೀಟಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

Advertisement

ದೇಶದೆಲ್ಲೆಡೆ ಉತ್ತಮ ಸಂಪರ್ಕ ವ್ಯವಸ್ಥೆಗೆ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಬಿಎಸ್‌ಎನ್‌ಎಲ್‌ ಟೆಲಿಕಾಮ್‌ ಸಂಪರ್ಕ ಸೇವೆ ಅಭಿವೃದ್ಧಿ ಪಡಿಸಲಾಗುವುದು. 2018 ಡಿಸೆಂಬರ್‌ ವೇಳೆಗೆ ದೇಶದ ಎಲ್ಲೆಡೆ 100 ಎಂಬಿಪಿಎಸ್‌ ವೇಗದ ತ್ವರಿತ ಗತಿಯ ಸಂಪರ್ಕ ಒದಗಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ.

ದೇಶದ ಎರಡೂವರೆ ಲಕ್ಷ ಹಳ್ಳಿಗಳಲ್ಲಿ ಆಪ್ಟಿಕಲ್‌ ಫೈಬರ್‌ ಕೇಬಲ್‌ ಅಳವಡಿಸಲಾಗುತ್ತಿದೆ. ದೇಶವಾಸಿಗಳಿಗೆ ಉತ್ತಮ ಸೇವೆ ಒದಗಿಸುವ ದಿಸೆಯಲ್ಲಿ ಇಲಾಖೆ ಕಾರ್ಯೋನ್ಮುಖ ವಾಗಿದೆ. ಹೆಚ್ಚೆಚ್ಚು ಜನರಿಗೆ ಇಂಟರ್‌ನೆಟ್‌ ಸೇವೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ ಎಂದರು. 

ಮೇ 23ರಂದು 2 ಹೊಸ ರೈಲು: ಮೇ 23ರಂದು ಹುಬ್ಬಳ್ಳಿ-ವಾರಣಾಸಿ ಹಾಗೂ ಹುಬ್ಬಳ್ಳಿ-ಮೈಸೂರು ಹೊಸ ರೈಲುಗಳ ಸೇವೆ ಆರಂಭಿಸಲಾಗುವುದು. ಇದರಿಂದ ಕಾಶಿ ವಿಶ್ವನಾಥನ ದರ್ಶನಕ್ಕೆ ಹೋಗುವ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಹುಬ್ಬಳ್ಳಿಯಿಂದ ಮಂಗಳೂರಿಗೆ ನೂತನ ರೈಲು ಸೇವೆ ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.

ಹುಬ್ಬಳ್ಳಿ-ಮಂಗಳೂರು ರೈಲು ಸೇವೆ ಬೇಕು: ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಹುಬ್ಬಳ್ಳಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ನೂತನ ರೈಲು ಸೇವೆ ಆರಂಭಿಸಿದರೆ ಅನುಕೂಲವಾಗುತ್ತದೆ. ಹೊಸ ರೈಲು ಸೇವೆಗಾಗಿ ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ರೈಲು ಸೇವೆಯಿಂದ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ ಎಂದರು. 

Advertisement

ನಿರಂತರ ನಷ್ಟದಿಂದಾಗಿ ಬಿಎಸ್‌ಎನ್‌ಎಲ್‌ ಅನ್ನು ಖಾಸಗಿ ಸಂಸ್ಥೆಗೆ ವಹಿಸಿಕೊಡಬೇಕೆಂಬ ಬಗ್ಗೆ ಚಿಂತನೆ ನಡೆದಿತ್ತು. ಆದರೆ ಮನೋಜ ಸಿನ್ಹಾ ಸಚಿವರಾದ ನಂತರ ಬಿಎಸ್‌ಎನ್‌ಎಲ್‌ ಲಾಭ ಮಾಡುತ್ತಿದೆ. 2015-16ನೇ ಸಾಲಿನಲ್ಲಿ 2300 ಕೋಟಿ ಲಾಭ ಗಳಿಸಿದೆ ಎಂದರು. 

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಮಾತನಾಡಿ, ಹಾನಗಲ್ಲ ಕುಮಾರಸ್ವಾಮಿ ಅವರ ಅಂಚೆ ಚೀಟಿ ಬಿಡುಗಡೆಗೊಳ್ಳುತ್ತಿರುವುದು ನಮಗೆಲ್ಲ ಸಂತಸ ತಂದಿದೆ. ಸಚಿವರು ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವ ಸ್ಮರಣೆಗಾಗಿ ಅಂಚೆ ಚೀಟಿ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದರು. 

1904ರಲ್ಲಿ ವೀರಶೈವ ಮಹಾಸಭಾ ಆರಂಭಿಸಿದ ಕುಮಾರ ಸ್ವಾಮಿಗಳು, ವೀರಶೈವರ ಸಂಘಟನೆಗೆ ಪ್ರಯತ್ನಿಸಿದರು. ಪಂಚಾಕ್ಷರಿ ಗವಾಯಿಗಳಿಗೆ ಸಂಗೀತ ಕಲಿಯಲು ಪ್ರೋತ್ಸಾಹಿಸಿದ್ದೇ ಕುಮಾರ ಸ್ವಾಮೀಜಿ ಎಂದರು. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ರಾಜ್ಯದ ಎಲ್ಲ ಸ್ವಾಮಿಗಳು ಹಾನಗಲ್ಲ ಕುಮಾರ ಸ್ವಾಮಿಗಳ ಮಾರ್ಗದಲ್ಲಿ ನಡೆದಿದ್ದೇ ಆದರೆ ರಾಜ್ಯ ಉತ್ತುಂಗಕ್ಕೇರುವುದರಲ್ಲಿ ಸಂಶಯವಿಲ್ಲ.

ಬಸವಣ್ಣನ ನಂತರ ಸಮಾಜದ ಒಳಿತಿಗಾಗಿ ಮಹತ್ಕಾರ್ಯ ಮಾಡಿದ ವ್ಯಕ್ತಿಯೆಂದರೆ ಹಾನಗಲ್ಲ ಕುಮಾರ ಸ್ವಾಮಿಗಳು. ಮಠಗಳು ಶಿಕ್ಷಣ ಸಂಸ್ಥೆ ಆರಂಭಿಸಲು ಪ್ರೋತ್ಸಾಹ ನೀಡಿ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದರು ಎಂದರು. ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಟೆಂಗಿನಕಾಯಿ ನಿರೂಪಿಸಿದರು. ರಾಜಣ್ಣ ಕೊರವಿ ವಂದಿಸಿದರು. ಮಹಾಪೌರ ಡಿ.ಕೆ.ಚವ್ಹಾಣ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಚೀಫ್ ಪೋಸ್ಟ್‌ ಮಾಸ್ಟರ್‌ ಜನರಲ್‌ ಕರ್ನಾಟಕ ಸರ್ಕಲ್‌ ಡಾ|ಚಾರ್ಲ್ಸ್‌ ಲೋಬೊ, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತಾ, ವೀಣಾ ಶ್ರೀನಿವಾಸ ವೇದಿಕೆ ಮೇಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next