ಬೆಂಗಳೂರು: ಬಿಜೆಪಿಯ ಪಾದಯಾತ್ರೆ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮಧ್ಯೆ ನಡೆದ ರಾಜಕೀಯದ ಫಲವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಈಗ ಪಕ್ಷದಲ್ಲಿ “ತ್ರಿಶಂಕು’ ಸ್ಥಿತಿ ತಲುಪಿದ್ದಾರೆ ಎಂಬ ವ್ಯಾಖ್ಯಾನ ಕೇಸರಿ ಪಾಳಯದಲ್ಲಿ ಕೇಳಿ ಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಪ್ರತಿಷ್ಠೆಯ ಅಖಾಡದಲ್ಲಿ ಪ್ರೀತಂ ಗೌಡಗೆ ಮಾತ್ರ ಪೆಟ್ಟು ಬಿದ್ದಿದೆ. ಪಾದಯಾತ್ರೆ ಸಂದರ್ಭ ಪ್ರೀತಂ ಅವರನ್ನು ಎಷ್ಟು ಸಾಧ್ಯವೋ ಅಷ್ಟು ದೂರ ಇಡುವಂತೆ ವರಿಷ್ಠರೇ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದರು ಎಂಬ ಸುದ್ದಿ ಈಗ ಬಿಜೆಪಿಯಲ್ಲಿ ವಲಯದಲ್ಲಿ ಹರಿದಾಡಿದೆ.
ಮೈಸೂರು ಚಲೋ ಪಾದಯಾತ್ರೆಯಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಮೈಲೇಜ್ ದೊರೆಯುತ್ತದೆ ಎಂಬುದು ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಆದರೆ ಮೈತ್ರಿ ಧರ್ಮವನ್ನು ಬಿಟ್ಟು ಗೈರಾಗುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹಾಸನದ ಪೆನ್ ಡ್ರೈವ್ ಪ್ರಕರಣವನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ಪ್ರೀತಂ ಮೇಲೆ ವಾಗ್ಧಾಳಿ ನಡೆಸಿದರು. ಜತೆಗೆ ಹಾಸನದಲ್ಲಿ ಜೆಡಿಎಸ್ ಸೋಲುವುದಕ್ಕೆ ಪ್ರೀತಂ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ದೂರಲಾಗಿತ್ತು.
ವರಿಷ್ಠರ ಮುಂದೆ ದೂರಿದ್ದ ಎಚ್‌ಡಿಕೆ?
ಪ್ರೀತಂ ಗೌಡ ಈ ಮಟ್ಟಕ್ಕೆ ಹೆಚ್ಚಿಕೊಳ್ಳುವುದಕ್ಕೆ ವಿಜಯೇಂದ್ರ ಕೂಡ ಕಾರಣ ಎಂದು ಕುಮಾರಸ್ವಾಮಿ ಬಿಜೆಪಿ ವರಿಷ್ಠರ ಮುಂದೆ ಆಕ್ಷೇಪಿಸಿದ್ದರು ಎಂದು ತಿಳಿದು ಬಂದಿದೆ. ದೇವೇಗೌಡರ ಕುಟುಂಬದ ವಿರುದ್ಧ ಪ್ರೀತಂ ಟೀಕಾಸ್ತ್ರ ಪ್ರಯೋಗಿಸುವಾಗ ವಿಜಯೇಂದ್ರ ಕರೆದು ಬುದ್ಧಿ ಹೇಳಿದ್ದರೆ ಪರಿಸ್ಥಿತಿ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ಇದೆಲ್ಲದರ ಫಲವಾಗಿ ಪಾದಯಾತ್ರೆ ಸಂದರ್ಭದಲ್ಲಿ ಪ್ರೀತಂಗೆ ಹಿನ್ನಡೆಯಾಗಿದ್ದು, ಕೆಲವು ಹಿರಿಯ ಶಾಸಕರಿಗೆ ಕರೆ ಮಾಡಿ ತಮಗಾದ ಅನ್ಯಾಯದ ಬಗ್ಗೆ ಗೋಳು ತೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.