Advertisement
ರಾಜ್ಯದ ಎರಡನೇ ದೊಡ್ಡ ಮಹಾನಗರ ಪಾಲಿಕೆಯನ್ನು ಹೊಂದಿರುವ ಧಾರವಾಡ ಜಿಲ್ಲೆಗೆ ವಿವಿಧ ಅಭಿವೃದ್ಧಿ ಯೋಜನೆ ಬೇಡಿಕೆಗಳಿಗೆ ಸ್ಪಂದನೆ ಜತೆಗೆ, ವಿಶೇಷ ಅನುದಾನ ಸೌಲಭ್ಯ ದೊರೆಯುವ ವಿಶ್ವಾಸವಿತ್ತಾದರೂ, ಆಯವ್ಯಯ ಅಂತಹ ಯಾವುದೇ ಸೌಲಭ್ಯ ನೀಡಿಲ್ಲ. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಉತ್ಪನ್ನಗಳ ನಿರ್ವಾತ ದಾಸ್ತಾನು ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿದ್ದು, ಅದಕ್ಕೆ 3 ಕೋಟಿ ರೂ. ಅನುದಾನ ಘೋಷಣೆ ಬಿಟ್ಟರೆ ಬೇರೆ ರೀತಿಯ ಅಭಿವೃದ್ಧಿ ಸೌಲಭ್ಯ ಇಲ್ಲವಾಗಿದೆ. ರಾಜ್ಯದ ಐದು ಮಹಾನಗರ ಪಾಲಿಕೆಯಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಾಣ ಮಾಡುವುದಾಗಿ ಆಯವ್ಯಯದಲ್ಲಿ ಪ್ರಸ್ತಾಪಿಸಿದ್ದು, ಈ ಯೋಜನೆ ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಕಾರ್ಯಗತಕ್ಕೆ ಮುಂದಾಗಿದೆ.
Related Articles
Advertisement
ಅವಳಿ ನಗರ ವ್ಯಾಪ್ತಿಯ ಬೇಲೂರು, ಗಾಮನಗಟ್ಟಿ, ಗೋಕುಲ, ತಾರಿಹಾಳ, ಲಕಮನಹಳ್ಳಿ ಇನ್ನಿತರ ಕೈಗಾರಿಕಾ ವಲಯಗಳು ವಿವಿಧ ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿದ್ದು, ಉದ್ಯಮಾಕರ್ಷಣೆಗೆ ತೊಡಕಾಗುತ್ತಿದೆ. ಕೈಗಾರಿಕಾ ವಲಯಗಳ ಮೂಲಸೌಕರ್ಯಕ್ಕೆ ಒತ್ತು ನೀಡಬೇಕು, ಹೆಚ್ಚಿನ ಅನುದಾನ ನೀಡಿ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆಗೆ ಆಯವ್ಯಯದಲ್ಲಿ ಯಾವುದೇ ಕ್ರಮ ಇಲ್ಲ.
ಜಿಲ್ಲೆಯಲ್ಲಿ ಅನೇಕ ಗ್ರಾಮಗಳಿಗೆ ಚಳಿಗಾಲದಲ್ಲೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಸ್ಥಿತಿ ಇದೆ. ಬೇಸಿಗೆ ಬಂದರೆ ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗುತ್ತದೆ. ಜಿಲ್ಲೆಯಲ್ಲಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನೇಕ ಕಡೆ ತ್ರಿಶಂಕು ಸ್ಥಿತಿಯಲ್ಲಿದ್ದು, ಇನ್ನೂ ಕೆಲವು ಕಡೆ ಯೋಜನೆಯ ನಿರೀಕ್ಷೆಗೆ ಸ್ಪಂದನೆ ಇಲ್ಲವಾಗಿದೆ. ಯೋಜನೆ ಅನುಷ್ಠಾನಕ್ಕೆ ಪ್ರೋತ್ಸಾಹ ನಿಟ್ಟಿನಲ್ಲಿ ಆಯವ್ಯಯದಲ್ಲಿ ಕ್ರಮ ಇಲ್ಲವಾಗಿದೆ.
ವಾಯವ್ಯ ಸಾರಿಗೆ ಸಂಸ್ಥೆ ವಿವಿಧ ಕಾರಣಗಳಿಂದ ಆರ್ಥಿಕ ಸಮಸ್ಯೆಗೆ ಸಿಲುಕಿ ನಲುಗುತ್ತಿದ್ದು, ಇದರ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಬೇಡಿಕೆ ಇದೆಯಾದರೂ, ಆಯವ್ಯಯದಲ್ಲಿ ಪ್ಯಾಕೇಜ್‌ನ ಪ್ರಸ್ತಾಪ ಇಲ್ಲವಾಗಿದೆ. ಅದೇ ರೀತಿ ಸಂಸ್ಥೆ ನಷ್ಟದಿಂದ ಹೊರಬರುವ ನಿಟ್ಟಿನಲ್ಲಿ ಮೋಟಾರು ವಾಹನ ತೆರಿಗೆಯಿಂದ ವಿನಾಯ್ತಿ ನೀಡಬೇಕೆಂಬ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ.
ಹುಬ್ಬಳ್ಳಿ ಹೊರವಲಯದ ಅಂಚಟಗೇರಿ ಬಳಿ ಉದ್ದೇಶಿತ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಜಾಗ ಗುರುತಿಸಿ ಆರೇಳು ವರ್ಷವಾಗಿದ್ದರೂ ಅನುದಾನ ಕೊರತೆಯಿಂದ ನಿರ್ಮಾಣ ಕಾರ್ಯ ಸಾಧ್ಯವಾಗಿಲ್ಲ. ಈ ಆಯವ್ಯಯದಲ್ಲಾದರೂ ಅನುದಾನ ದೊರೆಯಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಒಟ್ಟಾರೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿರುವ ಆಯವ್ಯಯ ಧಾರವಾಡ ಜಿಲ್ಲೆಗೆ ನಿರಾಶಾದಾಯಕವಾಗಿದೆ ಎಂಬುದು ಅನೇಕರ ಅನಿಸಿಕೆ.