Advertisement

ಪರೀಕ್ಷಾರ್ಥ ಸಂಚಾರಕ್ಕೆ ಇಂದು ಮುನ್ನುಡಿ

11:43 AM Feb 27, 2017 | Team Udayavani |

ಬೆಂಗಳೂರು: ಬಹುನಿರೀಕ್ಷಿತ ಉತ್ತರ-ದಕ್ಷಿಣ ಕಾರಿಡಾರ್‌ನ ಸುರಂಗದಲ್ಲಿ ಮೆಟ್ರೋ ಪರೀಕ್ಷಾರ್ಥ ಸಂಚಾರಕ್ಕೆ ದಿನಗಣನೆ ಶುರುವಾಗಿದ್ದು, ಇದಕ್ಕೆ ಮುನ್ನುಡಿಯಾಗಿ ಸೋಮವಾರ ಪರೀಕ್ಷಾಪೂರ್ವ ಗೇಜ್‌ ತಪಾಸಣಾ ಯಂತ್ರ (ಎಸ್‌ಒಡಿ) ಸಂಚಾರ ನಡೆಸಲಿದೆ. 

Advertisement

ಸೋಮವಾರ ಬೆಳಿಗ್ಗೆ 9ಕ್ಕೆ ನ್ಯಾಷನಲ್‌ ಕಾಲೇಜು ನಿಲ್ದಾಣದಿಂದ ಸಂಪಿಗೆ ರಸ್ತೆವರೆಗೆ ಮೆಟ್ರೋ ರೈಲಿನ ಮಾದರಿಯ “ಎಸ್‌ಒಡಿ’ (ಸ್ಟ್ರಕ್ಚರ್‌ ಆಫ್ ಡೈಮನನ್‌) ಅನ್ನು ತಾಂತ್ರಿಕ ಸಿಬ್ಬಂದಿ ತೆಗೆದುಕೊಂಡು ಹೋಗಲಿದ್ದಾರೆ. ಈ ಪ್ರಯೋಗ ಯಶಸ್ವಿಯಾಗಿ ಪೂರ್ಣಗೊಂಡ ನಂತರ ವಿದ್ಯುತ್‌ಚಾಲಿತ ಮೆಟ್ರೋ ರೈಲು, ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು. ಬಹುತೇಕ ಇನ್ನೆರಡು ದಿನಗಳಲ್ಲಿ ಉತ್ತರ-ದಕ್ಷಿಣ ಕಾರಿಡಾರ್‌ನ ಸುರಂಗದ ಹಳಿಗಳ ಮೇಲೆ ಮೆಟ್ರೋ ರೈಲು ಓಡಲಿದೆ ಎಂದು ಬಿಎಂಆರ್‌ಸಿ ಮೂಲಗಳು ತಿಳಿಸಿವೆ. 

ಏಪ್ರಿಲ್‌ ವೇಳೆ ಸಾರ್ವಜನಿಕ ಸೇವೆಗೆ ಲಭ್ಯ: ಸಂಪಿಗೆ ರಸ್ತೆ-ನ್ಯಾಷನಲ್‌ ಕಾಲೇಜು ನಡುವೆ ಮೆಟ್ರೋ ಪರೀಕ್ಷಾರ್ಥ ಸಂಚಾರ ಈ ವಾರದಲ್ಲೇ ಆರಂಭಗೊಂಡರೂ, ಜನರಿಗೆ ಈ ಮಾರ್ಗದಲ್ಲಿ “ಮೆಟ್ರೋದಲ್ಲಿ ಪ್ರಯಾಣಿಸಲು ಇನ್ನೂ ಕನಿಷ್ಠ ಒಂದೂವರೆ ತಿಂಗಳು ಕಾಯಬೇಕು. ಈ ಹಳಿಯಲ್ಲಿ 45 ದಿನಗಳ ಕಾಲ ಪ್ರಾಯೋಗಿಕ ಸಂಚಾರ ನಡೆಸಿದ ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿ ಪ್ರಮಾಣಪತ್ರ ನೀಡಲಿದ್ದಾರೆ. ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿವರೆಗಿನ ಏಪ್ರಿಲ್‌ ವೇಳೆಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿ ಅಧಿಕಾರಿಗಳು ಹೇಳುತ್ತಾರೆ. 

ಇತ್ತ ಕಳೆದ ನವೆಂಬರ್‌ ಕೊನೆ ವಾರದಿಂದಲೇ ನ್ಯಾಷನಲ್‌ ಕಾಲೇಜು ನಿಲ್ದಾಣದಿಂದ ಯಲಚೇನಹಳ್ಳಿ ನಡುವೆ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ರೈಲ್ವೆ ಸುರಕ್ಷತಾ ಆಯುಕ್ತರ ಪ್ರಮಾಣಪತ್ರ ಸಿಗಬೇಕಿದೆ ಅಷ್ಟೆ. ಕಾಮಗಾರಿಗಳು 3 ವರ್ಷದ ಹಿಂದೆಯೇ ಪೂರ್ಣಗೊಂಡಿದ್ದರೂ ಸಂಪಿಗೆ ರಸ್ತೆ ನ್ಯಾಷನಲ್‌ ಕಾಲೇಜು ನಿಲ್ದಾಣ ನಡುವಿನ ಸುರಂಗ  ಮಾರ್ಗದಲ್ಲಿ ಕೇಬಲ್‌, ವೆಂಟಿಲೇಷನ್‌ ಮತ್ತು ಸಿಗ್ನಲ್‌ ಅಳವಡಿಕೆ ಕಾರ್ಯ ಬಾಕಿ ಇತ್ತು. ಇದರಿಂದ ವಿಳಂಬವಾಗಿತ್ತು.

ಎರಡು ದಿನಗಳಲ್ಲಿ ಸಂಚಾರ?
ಈಗಾಗಲೇ ಯಲಚೇನಹಳ್ಳಿಯಿಂದ ನ್ಯಾಷನಲ್‌ ಕಾಲೇಜುವರೆಗೆ ಮೆಟ್ರೋ ಪ್ರಾಯೋಗಿಕ ಸಂಚಾರ ಆರಂಭಗೊಂಡಿದೆ. ಅತ್ತ ನಾಗಸಂದ್ರದಿಂದ ಸಂಪಿಗೆರಸ್ತೆ ನಡುವೆಯೂ ವಾಣಿಜ್ಯ ಸಂಚಾರ ನಡೆದಿದೆ. ಬಾಕಿ ಉಳಿದಿರುವುದು ಸಂಪಿಗೆರಸ್ತೆ-ಮೆಜೆಸ್ಟಿಕ್‌-ನ್ಯಾಷನಲ್‌ ಕಾಲೇಜು ಮಾರ್ಗ ಮಾತ್ರ. ಈಗ 4 ಕಿ.ಮೀ. ಉದ್ದದ ಈ ಜೋಡಿ ಸುರಂಗ ಮಾರ್ಗಗಳ ಕಾಮಗಾರಿ ಕೂಡ ಪೂರ್ಣಗೊಂಡಿದ್ದು, ಇನ್ನೆರಡು ದಿನಗಳಲ್ಲಿ ಇಲ್ಲಿಯೂ ಮೆಟ್ರೋ ಸಂಚರಿಸಲಿದೆ.

Advertisement

ಇದಕ್ಕೂ ಮೊದಲು “ಎಸ್‌ಒಡಿ’ ಅನ್ನು ಸಿಬ್ಬಂದಿಯೇ ತೆಗೆದುಕೊಂಡು ಹೋಗುತ್ತಾರೆ. ಈ ವೇಳೆ ಮಾರ್ಗದಲ್ಲಿ ವಿದ್ಯುತ್‌ ಲೈನ್‌ಗಳು, ಸಿಗ್ನಲಿಂಗ್‌, ನಿಲ್ದಾಣಗಳಲ್ಲಿ ನಿಲುಗಡೆ ಸೇರಿದಂತೆ ತಾಂತ್ರಿಕ ಅಂಶಗಳನ್ನು ಪರೀಕ್ಷಿಸಲಾಗುವುದು. ಸುಮಾರು ಎರಡೂವರೆ ತಾಸುಗಳಲ್ಲಿ 4 ಕಿ.ಮೀ. ಮಾರ್ಗವನ್ನು ಇದು ಕ್ರಮಿಸಲಿದೆ. 2 ದಿನಗಳಲ್ಲಿ ಈ ಮಾರ್ಗದಲ್ಲಿ ಮೆಟ್ರೋ ರೈಲು ಪ್ರಾಯೋಗಿಕವಾಗಿ ಓಡಲಿದೆ ಎಂದು ಬಿಎಂಆರ್‌ಸಿ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಉತ್ತರ- ದಕ್ಷಿಣ ಕಾರಿಡಾರ್‌ ಮಾರ್ಗದ ವಿವರ
* ನಾಗಸಂದ್ರದಿಂದ ಪೀಣ್ಯ ಕೈಗಾರಿಕಾ ಪ್ರದೇಶ 2.5 ಕಿ.ಮೀ
* ಪೀಣ್ಯ ಕೈಗಾರಿಕಾ ಪ್ರದೇಶದಿಂದ ಯಶವಂತಪುರ 4.8 ಕಿ.ಮೀ
* ಯಶವಂತಪುರದಿಂದ  ಸಂಪಿಗೆ ರಸ್ತೆ 5.1 ಕಿ.ಮೀ
* ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಧಿಣಿಕರು ಸರಾಸರಿ 35 ಸಾವಿರ

ಸದ್ಯ ಪ್ರಾಯೋಗಿಕ ಸಂಚಾರ
* ನ್ಯಾಷನಲ್‌ ಕಾಲೇಜಿನಿಂದ ರಾಷ್ಟ್ರೀಯ ವಿದ್ಯಾಲಯ ರಸ್ತೆ 4.1 ಕಿ.ಮೀ
* ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಯಲಚೇನಹಳ್ಳಿ 3.9  ಕಿ.ಮೀ

ಪ್ರಾಯೋಗಿಕ ಸಂಚಾರ ಆಗಬೇಕಿರುವುದು
ಸಂಪಿಗೆ ರಸ್ತೆಯಿಂದ ನ್ಯಾಷನಲ್‌ ಕಾಲೇಜು 40 ಕಿ.ಮೀ (ನಿಲ್ದಾಣಗಳು- ಮಂತ್ರಿಸ್ಕ್ವೇರ್‌, ಕೆಂಪೇಗೌಡ (ಮೆಜೆಸ್ಟಿಕ್‌), ಚಿಕ್ಕಪೇಟೆ, ಕೆ.ಆರ್‌. ಮಾರುಕಟ್ಟೆ, ನ್ಯಾಷನಲ್‌ ಕಾಲೇಜು.)

Advertisement

Udayavani is now on Telegram. Click here to join our channel and stay updated with the latest news.

Next