Advertisement

ಪ್ರಿಡೇಟರ್‌ ಡ್ರೋನ್‌ ಖರೀದಿಗೆ ಅಸ್ತು: ರಕ್ಷಣ ಪಡೆಗಳಿಗೆ ಮತ್ತಷ್ಟು ಬಲ

11:35 PM Jun 16, 2023 | Team Udayavani |

ಅಮೆರಿಕದಿಂದ ಎಂಕ್ಯೂ-9ಬಿ ಪ್ರಿಡೇಟರ್‌ ಡ್ರೋನ್‌ (ಸಶಸ್ತ್ರ ಮಾನವ ರಹಿತ ವೈಮಾನಿಕ ವಾಹನ)ಗಳನ್ನು ಖರೀದಿಸುವ ರಕ್ಷಣ ಇಲಾಖೆಯ ಪ್ರಸ್ತಾವಕ್ಕೆ ರಕ್ಷಣ ಖರೀದಿ ಮಂಡಳಿ (ಡಿಎಸಿ) ಸಮ್ಮತಿ ಸೂಚಿಸಿದೆ. ಭಾರತದ ಈ ಪ್ರಸ್ತಾವನೆಗೆ ಅಮೆರಿಕ ಕಾಂಗ್ರೆಸ್‌ ತನ್ನ ಒಪ್ಪಿಗೆಯನ್ನು ಸೂಚಿ ಸಿದ್ದೇ ಆದಲ್ಲಿ ಭಾರತದ ರಕ್ಷಣ ಪಡೆಗಳಿಗೆ 30 ಪ್ರಿಡೇಟರ್‌ ಡ್ರೋನ್‌ಗಳು ಲಭ್ಯವಾಗಲಿವೆ. ಡಿಎಸಿಯ ಈ ನಿರ್ಧಾರ ಅತ್ಯಂತ ಮಹತ್ವದ್ದಾಗಿದ್ದು, ಭಾರತದ ರಕ್ಷಣ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ.

Advertisement

ಉದ್ದೇಶಿತ ಯೋಜನೆಯಂತೆ ರಕ್ಷಣ ಇಲಾಖೆಯು ಅಮೆರಿಕದ ಜನರಲ್‌ ಅಟಾಮಿಕ್ಸ್‌ ಏರೋನಾಟಿಕಲ್‌ ಸಿಸ್ಟಮ್ಸ್‌ ಇಂಕ್‌(ಜಿಎ-ಎಎಸ್‌ಐ)ನಿಂದ 30 ಎಂಕ್ಯೂ-9ಬಿ ಶಸ್ತ್ರಸಜ್ಜಿತ ಪ್ರಿಡೇಟರ್‌ ಡ್ರೋನ್‌ಗಳನ್ನು ಸುಮಾರು 3 ಬಿಲಿಯನ್‌ ಅಮೆರಿಕನ್‌ ಡಾಲರ್‌ ವೆಚ್ಚದಲ್ಲಿ ಖರೀದಿಸಲಿದೆ. ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು ಇದಕ್ಕೂ ಮುನ್ನವೇ ಡಿಎಸಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. 12 ಪ್ರಿಡೇಟರ್‌ ಡ್ರೋನ್‌ಗಳನ್ನು ನೌಕಾ ಪಡೆಗೆ ನೀಡಲಾದರೆ ತಲಾ 9 ಡ್ರೋನ್‌ಗಳನ್ನು ಭೂಸೇನೆ ಮತ್ತು ವಾಯುಸೇನೆಗೆ ನೀಡಲು ಇಲಾಖೆ ಚಿಂತನೆ ನಡೆಸಿದೆ. ಹಿಂದೂ ಮಹಾಸಾಗರದಾಳದಲ್ಲಿ ಮತ್ತು ಭಾರತ-ಚೀನ ನಡುವಣ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಕಣ್ಗಾವಲನ್ನು ಹೆಚ್ಚಿಸಲು ಇವುಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಸದ್ಯ ಭಾರತೀಯ ನೌಕಾಪಡೆಯು ಎರಡು ಎಂಕ್ಯೂ-9ಎ ಶಸ್ತ್ರಾಸ್ತ್ರ ರಹಿತ ಡ್ರೋನ್‌ಗಳನ್ನು ಹಿಂದೂ ಮಹಾ ಸಾಗರ ಪ್ರದೇಶದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಬಳಸುತ್ತಿದೆ.

ಇವೆರಡೂ ಡ್ರೋನ್‌ಗಳನ್ನು 3 ವರ್ಷಗಳ ಹಿಂದೆ ಗುತ್ತಿಗೆ ಮೇಲೆ ಜನರಲ್‌ ಅಟಾಮಿಕ್ಸ್‌ನಿಂದ ಬಾಡಿಗೆ ಪಡೆಯಲಾಗಿದೆ. ಇವುಗಳನ್ನು ಇತ್ತೀಚೆಗೆ ಎಲ್‌ಎಸಿಯಲ್ಲಿ ಕಣ್ಗಾವಲಿಗೆ ಬಳಸಿ ಕೊಳ್ಳಲಾಗಿತ್ತು. ಇದೀಗ ಸುಧಾರಿತ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ಹೊರಬಲ್ಲ ಡ್ರೋನ್‌ಗಳನ್ನು ಸೇನಾಪಡೆಗಳಿಗೆ ಒದಗಿಸುವ ಮೂಲಕ ಕಣ್ಗಾವಲನ್ನು ಮತ್ತಷ್ಟು ಬಲಪಡಿಸಲು ಸರಕಾರ ಮುಂದಾಗಿದೆ.

ಪ್ರಿಡೇಟರ್‌ ಡ್ರೋನ್‌ಗಳು ಕ್ಷಿಪಣಿಗಳು, ಸ್ಮಾರ್ಟ್‌ ಬಾಂಬ್‌ಗಳನ್ನು ಹೊತ್ತೂಯ್ಯುವುದಲ್ಲದೆ ನಿರ್ದಿಷ್ಟ ಗುರಿಯ ಮೇಲೆ ಅತ್ಯಂತ ನಿಖರ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಸಮುದ್ರದಲ್ಲಿ 5,500 ನಾಟಿಕಲ್‌ ಮೈಲುಗಳ ವ್ಯಾಪ್ತಿವರೆಗೆ 35 ಗಂಟೆಗಳಿಗೂ ಅಧಿಕ ಕಾಲ ಹಾರಾಡುವ ಶಕ್ತಿ ಹೊಂದಿರಲಿವೆ. ಶತ್ರು ರಾಷ್ಟ್ರಗಳ ವಿರುದ್ಧದ ಕಾರ್ಯಾಚರಣೆ, ಕಡಲ್ಗಳ್ಳರ ಪತ್ತೆ, ಮಾದಕ ವಸ್ತು ದಂಧೆಕೋರರ ವಿರುದ್ಧ ನಿಗಾ ಸಹಿತ ದೇಶ ವಿರೋಧಿ ಕೃತ್ಯ ಎಸಗುವವರ ಮೇಲೆ ಹದ್ದುಗಣ್ಣು ಇರಿಸಲು ಮತ್ತು ಅಂಥವರನ್ನು ಸದೆಬಡಿಯಲು ಸೇನಾಪಡೆಗಳಿಗೆ ಸಹಾಯಕವಾಗಲಿದೆ.

ಗಡಿ ಭಾಗಗಳಲ್ಲಿ ಸೇನಾಪಡೆಗಳ ಕಣ್ಗಾವಲು ವ್ಯವಸ್ಥೆ ಇನ್ನಷ್ಟು ಶಕ್ತಿಯುತವಾಗಲಿದೆ. ಗಡಿಯಲ್ಲಿ ಪದೇ ಪದೆ ತಗಾದೆ ತೆಗೆಯುವ ಚೀನ ಮತ್ತು ಪಾಕಿಸ್ಥಾನ ಸೇನೆಯ ರಹಸ್ಯ ಕಾರ್ಯಾಚರಣೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಅವನ್ನು ವಿಫ‌ಲಗೊಳಿಸಲು ಸೇನಾಪಡೆಗಳಿಗೆ ಅನುಕೂಲವಾಗಲಿದೆ. ಚೀನ ಸೇನೆ ಎಲ್ಲ ಅಂತಾರಾಷ್ಟ್ರೀಯ ಕಾನೂನು, ಭಾರತದೊಂದಿಗಿನ ದ್ವಿಪಕ್ಷೀಯ ಒಪ್ಪಂದ ನಿಯಮಾವಳಿಗಳನ್ನು ಗಾಳಿಗೆ ತೂರಿ ಭಾರತದ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ನಡುವೆಯೇ ಡಿಎಸಿ, ರಕ್ಷಣ ಇಲಾಖೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಿರುವುದು ದೇಶದ ರಕ್ಷಣ ಕಾರ್ಯತಂತ್ರದ ಒಂದು ಭಾಗ ಮತ್ತು ಪಾಕಿಸ್ಥಾನ ಮತ್ತು ಚೀನಕ್ಕೆ ನೀಡಲಾಗಿರುವ ಪರೋಕ್ಷ ಎಚ್ಚರಿಕೆ ಎಂದೇ ವಿಶ್ಲೇಷಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next