ಬಳ್ಳಾರಿ: ಬಳ್ಳಾರಿ ತಾಲೂಕು ಸೇರಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ| ಅಜಯ್ ನಾಗಭೂಷಣ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ನಗರದ 32ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಬಂಡಿಹಟ್ಟಿ ಪ್ರದೇಶದಲ್ಲಿ ಮಳೆಯಿಂದ ಸಂಪೂರ್ಣ ಹಾನಿಗೊಳಗಾದ ಗಂಗಮ್ಮ ಹೊನ್ನೂರಪ್ಪ ಅವರ ಮನೆಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಹಾಗೂ ಗಂಗಮ್ಮ ಅವರಿಂದ ಮಾಹಿತಿ ಪಡೆದುಕೊಂಡರು.
ನಂತರ ಬಳ್ಳಾರಿ ತಾಲೂಕಿನ ಕಪಗಲ್ಲು ಗ್ರಾಮದ ಬಳಿಯ ರಮಿಸ್ತಾ ಅವರ ಹೊಲದಲ್ಲಿ ಬೆಳೆದು ನಿಂತಿದ್ದ ಪಪ್ಪಾಯ ಬೆಳೆ ಮಳೆಗೆ ಹಾನಿಯಾಗಿರುವುದನ್ನು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ರೈತರ ಅಹವಾಲನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಲಿಸಿದರು. ನಂತರ ಅವರು ಭೆ„ರದೇವನಹಳ್ಳಿ ಗ್ರಾಮದ ಬಳಿಯ ನಾಗಿರೆಡ್ಡಿ ಹಾಗೂ ಇನ್ನಿತರೆ ರೈತರುಗಳ ಹೊಲದಲ್ಲಿ ಭತ್ತದ ಬೆಳೆ ಸಂಪೂರ್ಣ ಹಾನಿಯಾಗಿ ನೆಲಕ್ಕೆ ಮಲಗಿರುವುದನ್ನು ಪರಿಶೀಲಿಸಿದರು. ಗ್ರಾಮದ ಹೊಲದಲ್ಲಿ ಮಳೆಯಿಂದ ಹಾನಿಯಾದ ಶೇಂಗಾ ಬೆಳೆಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಳೆಯಿಂದ ಬೆಳೆ ಹಾನಿ ಹಾಗೂ ಮನೆ ಹಾನಿಯಾಗಿರುವುದಕ್ಕೆ ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಅನ್ವಯ ಪರಿಹಾರವನ್ನು ರೈತರು ಹಾಗೂ ಫಲಾನುಭವಿಗಳ ಖಾತೆಗೆ ಆರ್‌ಟಿಜಿಎಸ್ ಮುಖಾಂತರ ಶೀಘ್ರವಾಗಿ ಪಾವತಿಸಲಾಗುವುದು ಎಂದರು. ಯಾರು ಆತಂಕ ಪಡಬೇಕಿಲ್ಲ. ಧೈರ್ಯದಿಂದ ಇರಿ. ಸರ್ಕಾರ ಮತ್ತು ಜಿಲ್ಲಾಡಳಿತ ತಮ್ಮೊಂದಿಗಿದೆ ಎಂದರು. ನಂತರ ಅವರು ಭೆ„ರದೇವನಹಳ್ಳಿ(ಮೋಕಾ) ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಚರ್ಚಿಸಿದರು. ಮಕ್ಕಳಿಗೆ ನೀಡಲಾಗುತ್ತಿರುವ ಗುಣಮಟ್ಟದ ಶಿಕ್ಷಣದ ಬಗ್ಗೆ ಚರ್ಚೆ ನಡೆಸಿದರು. ಗುಣಮಟ್ಟದ ಶಿಕ್ಷಣ ನೀಡುವಂತೆ ಪ್ರಾಂಶುಪಾಲರಾದ ಅನಸೂಯ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಜಿಪಂ ಸಿಇಒ ಜೆ. ಲಿಂಗಮೂರ್ತಿ, ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ, ತಹಶೀಲ್ದಾರ್ ವಿಶ್ವನಾಥ, ಕೃಷಿ ಇಲಾಖೆಯ ಜಂಟಿನಿರ್ದೇಶಕ ಮಲ್ಲಿಕಾರ್ಜುನ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್.ಪಿ. ಭೋಗಿ ಮತ್ತಿತರರು ಇದ್ದರು.