Advertisement

ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿ

04:04 PM Aug 30, 2017 | Team Udayavani |

ಮರಿಯಮ್ಮನಹಳ್ಳಿ: ಶಂಕಿತ ಡೆಂಘೀ ಸೇರಿದಂತೆ ವಿವಿಧ ಜ್ವರಗಳಿಂದ 47ಕ್ಕೂ ಹೆಚ್ಚು ಜನ ಬಳಲುತ್ತಿರುವ ಡಣಾಪುರ ಗ್ರಾಮಕ್ಕೆ ತಹಶೀಲ್ದಾರ್‌ ಎಚ್‌.ವಿಶ್ವನಾಥ್‌, ತಾಪಂ ಇಒ ವೆಂಕೋಬಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ, ನೈರ್ಮಲ್ಯ, ಕುಡಿವ ನೀರಿನ ತೊಟ್ಟಿಗಳನ್ನು ಪರಿಶೀಲನೆ ನಡೆಸಿದರು. ತೀವ್ರ ಜ್ವರದಿಂದ ಬಳಲುತ್ತಿದ್ದ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗೆ ಹೊಸಪೇಟೆ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಒಟ್ಟು 47ಕ್ಕೂ ಹೆಚ್ಚಿನ ಜನರಿಗೆ ತೀವ್ರ ಜ್ವರ ಕಾಣಿಸಿಕೊಂಡಿದೆ. ಗ್ರಾಮದಲ್ಲಿ ಹಲವು ದಿನಗಳಿಂದ ನೂರಕ್ಕೂ ಹೆಚ್ಚು ಜನ ಜ್ವರದಿಂದ ಬಳಲುತ್ತಿದ್ದಾರೆ. ಭಾನುವಾರ ಶಂಕಿತ ಡೆಂಘೀ ಜ್ವರದಿಂದ ಮೂರೂವರೆ ವರ್ಷದ ಬಾಲಕ ಮೃತಪಟ್ಟಿದ್ದ. ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ವೈದ್ಯರ ತಂಡ ಗ್ರಾಮದಲ್ಲಿ ಬೀಡು ಬಿಟ್ಟಿದೆ. 225 ಜನರಿಗೆ ತಪಾಸಣೆ ಮಾಡಿದ್ದು, ಇವರಲ್ಲಿ 47 ಜನರಿಗೆ ಜ್ವರಬಾಧೆ ಇರುವುದು ಕಂಡು ಬಂದಿದೆ. ಅವರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

ಆರೋಗ್ಯ ಇಲಾಖೆ ನಿರ್ಲಕ್ಷೆ: ಶಂಕಿತ ಡೆಂಘೀ, ಮಲೇರಿಯಾ, ವೈರಲ್‌ ಫಿವರ್‌ ಸೇರಿದಂತೆ ಹಲವು ಜ್ವರದಿಂದ ಗ್ರಾಮದ 100ಕ್ಕೂ ಹೆಚ್ಚು ಜನರು ಹಾಸಿಗೆ ಹಿಡಿದಿದ್ದಾರೆ. ಒಂದು ತಿಂಗಳಿಂದ ಆರೋಗ್ಯ ಇಲಾಖೆ ಹಾಗೂ ಗ್ರಾಪಂ ಆಡಳಿತಕ್ಕೆ ಮನವಿ ಮಾಡಿದರೂ, ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಕಾಳಜಿ ತೋರಿಸಲಿಲ್ಲ. ಅಲ್ಲದೆ ಕುಡಿವ ನೀರಿನ ತೊಟ್ಟಿಗಳು ಅಸ್ವಚ್ಛತೆಯಿಂದ ಕೂಡಿರುವ ಕಾರಣ ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿ ಮಾರ್ಪಟ್ಟಿದೆ. ಚರಂಡಿಗಳಿಗೆ ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಿಲ್ಲ. ಫಾಗಿಂಗ್‌ ಮಾಡಿಲ್ಲ ಎಂದು ಸಾರ್ವಜನಿಕರು ತಹಶೀಲ್ದಾರ್‌ ಎಚ್‌.ವಿಶ್ವನಾಥ್‌ ಅವರ ಮುಂದೆ ಸಮಸ್ಯೆಗಳ ಸುರಿಮಳೆ ಹರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಎಚ್‌ಒ ಡಾ| ರಮೇಶ್‌ ಬಾಬು, ಗ್ರಾಮದ ಹಲವರಿಗೆ ಜ್ವರದ ಸೋಂಕು ತಗುಲಿದ್ದು,
ತಾತ್ಕಾಲಿಕವಾಗಿ ತಪಾಸಣೆ ಕೇಂದ್ರ ತೆರೆಯಲಾಗಿದೆ. ಗ್ರಾಮದ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಲಾಗುತ್ತಿದೆ. ಈಗಾಗಲೇ 47 ಜನರಲ್ಲಿ ಜ್ವರಬಾಧೆ ಇರುವುದು ಕಂಡು ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಮನೆಯಲ್ಲೂ ಲಾರ್ವಾ ಸರ್ವೆ ಹಾಗೂ ಕುಡಿವ ನೀರಿನ ಮಾದರಿ, ಕೆಲವರ ರಕ್ತದ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು. 

ದಿಢೀರ್‌ ಪ್ರತಿಭಟನೆ: ಶಂಕಿತ ಡೆಂಘೀ ಜ್ವರದಿಂದ ಭಾನುವಾರ ಮೂರೂವರೆ ವರ್ಷದ ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಪಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಜಿಲಾ ಆರೋಗ್ಯಾಧಿಕಾರಿ ಡಾ| ರಮೇಶ್‌ ಬಾಬು, ತಹಶೀಲ್ದಾರ್‌ ಎಚ್‌.ವಿಶ್ವನಾಥ್‌, ತಾಪಂ ಇಒ ಟಿ.ವೆಂಕೋಬಪ್ಪ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ಓಂಪ್ರಕಾಶ್‌ ಕಟ್ಟಿಮನಿ, ತಾಲೂಕು ವೈದ್ಯಾಧಿಕಾರಿ ಡಾ| ಸತೀಶ್‌ಚಂದ್ರ, ಡಾ| ನಾಗೇಂದ್ರಕುಮಾರ್‌, ಡಾ| ವಿನೋದ್‌, ಪ್ರಯೋಗಾಲಯ ತಜ್ಞರಾದ ಶ್ರೀಧರಮೂರ್ತಿ, ಶ್ಯಾಮ್‌ ಸಿಂಘ ಧರ್ಮನಗೌಡ, ಎಂ.ಪಿ. ದೊಡ್ಮನಿ, ಪ್ರಶಾಂತ್‌ ಕುಮಾರ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next