Advertisement

Ranebennur: ಹೃದಯ ಕಾಯಿಲೆ ತಡೆಗೆ ಮುಂಜಾಗ್ರತೆ ಅತ್ಯಗತ್ಯ-ಡಾ| ಪುಟ್ಟರಾಜು

05:06 PM Sep 04, 2023 | Team Udayavani |

ರಾಣಿಬೆನ್ನೂರ: ಮನುಷ್ಯನ ಜೀವನ ಯಾಂತ್ರಿಕತೆಯತ್ತ ಸಾಗಿದೆ. ಹೀಗಾಗಿ ಇಂದು ಅನೇಕ ರೀತಿಯ ಕಾಯಿಲೆಗಳಿಗೆ ಒಳಗಾಗುತ್ತಿದ್ದೇವೆ. ಆದ್ದರಿಂದ ಸಣ್ಣವರು, ದೊಡ್ಡವರು ಎನ್ನದೇ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮವಾಗಿ ಹೃದಯ ತಪಾಸಣೆಗೆ ಒಳಪಡಬೇಕಾದ ಅಗತ್ಯವಿದೆ ಎಂದು ಬ್ಯಾಡಗಿ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಪುಟ್ಟರಾಜು ಹೇಳಿದರು.

Advertisement

ಇಲ್ಲಿನ ಮಾರುತಿ ನಗರದ ಅರುಣೋದಯ ಸ್ಫೋರ್ಟ್ಸ್ ಕ್ಲಬ್‌, ಸಂತೋಷ್‌ ಹೈಟೆಕ್‌ ಆಸ್ಪತ್ರೆ ಮತ್ತು ರಾಣಿಬೆನ್ನೂರು ರಕ್ತನಿಧಿ  ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಹೃದಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸದಿಂದ ಇಂದಿನವರೆಗೂ ಕಾಯಿಲೆಗಳ ಕುರಿತು ಅವಲೋಕಿಸಿದರೆ ಕೋವಿಡ್‌ ನಂತರ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಗಂಭೀರತೆ ಪಡೆದುಕೊಂಡಿದೆ ಎಂದರು.

ಗುಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ  ಮುನ್ನವೇ ಪೂರ್ವ ಜಾಗೃತಿ ವಹಿಸಬೇಕಾಗಿದೆ. ಯಾವುದೇ ರೀತಿಯಲ್ಲಿ ಕಾಯಿಲೆಯ ಲಕ್ಷಣಗಳು  ಕಂಡು ಬಂದಲ್ಲಿ, ನಿರಾಸಕ್ತಿ ತೋರದೆ ತಕ್ಷಣವೇ ವೈದ್ಯರ ಬಳಿ ತಪಾಸಣೆಗೊಳಪಡಬೇಕು. ಇದರಿಂದ ಮುಂದೆ ಆಗಬಹುದಾದ ಅನಾಹುತ ತಪ್ಪಿಸಬಹುದಾಗಿದೆ ಎಂದರು.

ದಾವಣಗೆರೆ ನಾರಾಯಣ ಹೃದಯಾಲಯದ ಡಾ| ಗುರುರಾಜ್‌ ಬಿ. ಮಾತನಾಡಿ, ಜನಸಾಮಾನ್ಯರು ಇಂದಿನ ಆರ್ಥಿಕ ಸಂಕಷ್ಟದ
ಪರಿಸ್ಥಿತಿಯಲ್ಲಿ ಆರೋಗ್ಯ ರಕ್ಷಣೆ ಕುರಿತಂತೆ ಯಾರು ಚಿಂತಿಸುವುದಿಲ್ಲ. ಹಣ ಸಾಕಷ್ಟು ಗಳಿಸಬಹುದು. ಆದರೆ ಹೋದ ಪ್ರಾಣವನ್ನು ಎಷ್ಟೇ ಹಣ ಕೊಟ್ಟರು ಮರಳಿ ತರಲು ಸಾಧ್ಯವಾಗಲಾರದು. ಎಲ್ಲರೂ ಪ್ರಾಥಮಿಕ ಹಂತದಲ್ಲಿ ಮುಂಜಾಗ್ರತಾ ಕ್ರಮವಾಗಿ ತಪಾಸಣೆಗೊಳಪಡಬೇಕು ಎನ್ನುವ ಸದುದ್ದೇಶದಿಂದ ಯಾವುದೇ ಆರ್ಥಿಕ ವೆಚ್ಚವಿಲ್ಲದೆ ತಮ್ಮ ಸಂಸ್ಥೆ ಇಂತಹ ಶಿಬಿರಗಳ ಮೂಲಕ ಸಂಪೂರ್ಣ ಸಮಾಜ ಸೇವಾ ಕಾರ್ಯಕ್ಕೆ ಮುಂದಾಗಿದೆ ಎಂದು ಹೇಳಿದರು.

ಸಾರ್ವಜನಿಕ ಸರ್ಕಾರ ಆಸ್ಪತ್ರೆ ವೈದ್ಯಾಧಿಕಾರಿ ಡಾ| ರಾಜು ಶಿರೂರು ಮಾತನಾಡಿ, ಬಿಪಿ, ಶುಗರ್‌ ಸೇರಿ ಯಾವುದೇ ಕಾಯಿಲೆಗಳಿಗೆ
ನಿಯಮಿತವಾಗಿ ಔಷಧಗಳನ್ನು ಸೇವಿಸಿದ ಮಾತ್ರಕ್ಕೆ ಸುರಕ್ಷಿತವಾಗಿದ್ದೇವೆ ಎನ್ನುವ ಭಾವನೆ ಬೇಡ. ಕಾಲಕಾಲಕ್ಕೆ ವೈದ್ಯರಲ್ಲಿ ತಪಾಸಣೆಗೊಳಪಡಬೇಕು. ಆಹಾರ ಕ್ರಮದಲ್ಲಿ ಅಗತ್ಯಕ್ಕೆ ತಕ್ಕಷ್ಟು ಬದಲಾವಣೆ ಅನುಸರಿಸುವುದು ಬಹುಮುಖ್ಯವಾಗಿದೆ ಎಂದು
ಹೇಳಿದರು.

Advertisement

ಅರುಣೋದಯ ನ್ಪೋರ್ಟ್ಸ್ ಕ್ಲಬ್‌ ಅಧ್ಯಕ್ಷ ಚೋಳಪ್ಪ ಕಸವಾಳ ಮಾತನಾಡಿ, ಸಂಸ್ಥೆ ಕ್ರೀಡಾ ಚಟುವಟಿಕೆಗಳ ಜೊತೆಗೆ ಸ್ಪರ್ಧಾತ್ಮಕ ಕಾರ್ಯಕ್ರಮಗಳು ಮತ್ತು ಇಂತಹ ಆರೋಗ್ಯ ಶಿಬಿರಗಳ ಮೂಲಕ ಜನಸೇವೆಯಲ್ಲಿ ತೊಡಗಿಸಿ ಕೊಂಡಿದೆ. ಸಮಾಜದಲ್ಲಿ ಸೇವೆ ಮಾಡಲು ಅನೇಕ ರೀತಿ ಅವಕಾಶಗಳಿವೆ. ಇಂದು ಆಯೋಜಿಸಿರುವ ಹೃದಯ ತಪಾಸಣಾ ಶಿಬಿರದಿಂದ ಸಾಮಾನ್ಯ ಜನರಿಗೆ ತುಂಬಾ ಅನುಕೂಲವಾಗಿದೆ.

ಇಂಥಹ ಶಿಬಿರಗಳು ಮೇಲಿಂದ ಮೇಲೆ ಆಯೋಜಿಸುವ ಮೂಲಕ ಮತ್ತಷ್ಟು ಸೇವಾ ಕಾರ್ಯಗಳನ್ನು ಮಾಡಲು ಸ್ಫೂರ್ತಿ ಬಂದಿದೆ ಎಂದರು. ಈ ವೇಳೆ ಉಪಾಧ್ಯಕ್ಷ ರಾಜುಗೌಡ ಶಿವಣ್ಣನವರ್‌, ರಮೇಶ್‌ ಹಳ್ಳಪ್ಪಗೌಡ್ರ, ಸಿದ್ಧಪ್ಪ ಅತಡ್ಕರ್‌, ಪಿ.ಏಸ್‌.ಕೊಪ್ಪದ,
ಚಂದ್ರು ತೆಂಬದ, ಬಸವರಾಜ ತೆಲಗಿ, ಬಸವರಾಜ ಮಳವಳ್ಳಿ, ಚನ್ನಬಸಪ್ಪ ತೋಟಪ್ಪನವರ, ಪ್ರಕಾಶ ಮೊರಶಿಳ್ಳಿನ್‌, ಬಸವರಾಜ ಹುಚ್ಚಗೊಂಡರ, ಸೋಮು ಗೌಡ ಶಿವಣ್ಣನವರ್‌ ಮತ್ತಿತರರು ಉಪಸ್ಥಿತರಿದ್ದರು. ಹೃದಯ ತಪಾಸಣಾ ಶಿಬಿರದಲ್ಲಿ ಸುಮಾರು
300ಕ್ಕೂ ಹೆಚ್ಚು ಜನರು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next