Advertisement

ಸಂತೆಕಟ್ಟೆಯಲ್ಲಿ ಮುನ್ನೆಚ್ಚರಿಕೆ ಕಾಮಗಾರಿ ಬಿರುಸು

03:01 PM Jun 21, 2023 | Team Udayavani |

ಉಡುಪಿ: ಸಂತೆಕಟ್ಟೆಯಲ್ಲಿ ಓವರ್‌ ಪಾಸ್‌ ನಿರ್ಮಾಣಕ್ಕಾಗಿ ತೋಡಿರುವ ಗುಂಡಿಯಿಂದ ಮಳೆಗಾಲದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಸೂಚನೆಯ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೆದ್ದಾರಿ ಸಮೀಪದಲ್ಲಿ ಮಳೆ ನೀರಿನಿಂದ ಹೆದ್ದರಿಗೆ ಹಾನಿಯಾಗದ ರೀತಿಯಲ್ಲಿ ಮುಂಜಾಗೃತ ಕ್ರಮಕ್ಕೆ ಬೇಕಾದ ಕಾಮಗಾರಿ ಆರಂಭಿಸಿದ್ದಾರೆ.

Advertisement

ಓವರ್‌ಪಾಸ್‌ ನಿರ್ಮಾಣಕ್ಕೆ ತೆಗೆದಿರುವ ಹೊಂಡದಲ್ಲಿ ನೀರು ನಿಂತರೆ ಹೆದ್ದಾರಿಗೂ ಸಮಸ್ಯೆಯಾಗಬಹುದು ಎಂಬ ಉದ್ದೇಶದಿಂದ ಇತ್ತೀಚಿಗೆ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆಯವರು ತತ್‌ಕ್ಷಣವೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿ ಕೂರ್ಮಾರಾವ್‌ ಅವರು ಹೆದ್ದಾರಿ ಪ್ರಾಧಿಕಾರದ ಸಭೆ ನಡೆಸಿ ಕೂಡಲೇ ಮುನ್ನೆಚ್ಚರಿಕೆ ಕಾಮಗಾರಿ ಆರಂಭಿಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದರು.

ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಒಂದು ಕಡೆಯಲ್ಲಿ ಸುಮಾರು 380 ಮೀಟರ್‌ ಉದ್ದದ 3ರಿಂದ 6 ಮೀಟರ್‌ ಎತ್ತರದ ರಿಟೈನಿಂಗ್‌ ವಾಲ್‌ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಿದ್ದಾರೆ. ಇದು ಶಾಶ್ವತ ವ್ಯವಸ್ಥೆಯಾಗಿದ್ದು, ಸರ್ವಿಸ್‌ ರಸ್ತೆಗೆ ತಾಗಿಕೊಂಡು ಇದನ್ನು ನಿರ್ಮಿಸಲಾಗುತ್ತಿದೆ. ಇನ್ನೊಂದು ಕಡೆಗಳಲ್ಲಿ (ಹೆದ್ದಾರಿಗೆ ತಾಗಿಕೊಂಡು) ಮಳೆಗೆ ಮಣ್ಣು ಕುಸಿಯದಂತೆ ಚೀಲಗಳಲ್ಲಿ ಮಣ್ಣನ್ನು ತುಂಬಿಸಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ಅದರ ಮೇಲೆ ಟರ್ಪಲಿನ್‌(ಟಾರ್ಪಾಲು ಹೊದಿಕೆ) ಮಾಡಲಾಗುತ್ತಿದೆ.

ಮಳೆಯ ಪ್ರಮಾಣ ಹೆಚ್ಚಾದಂತೆ ಹೊಂಡದಲ್ಲಿ ನೀರು ನಿಲ್ಲಿಸುವ ಸಾಧ್ಯತೆಯಿದೆ. ಜತೆಗೆ ಹೆದ್ದಾರಿಯಲ್ಲಿ ನಿರಂತರ ವಾಹನ ಸಂಚಾರ ಇರುವುದರಿಂದ ಕುಸಿಯುವ ಭೀತಿಯೂ ಹೆಚ್ಚಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ದಿನಗಳಿಂದ ಟರ್ಪಲಿನ್‌ ಕಾರ್ಯವನ್ನು ವೇಗವಾಗಿ ಮಾಡುತ್ತಿದ್ದಾರೆ. ಹೆದ್ದಾರಿ ಬದಿಯಿಂದ ಆರಂಭಗೊಂಡು ಹೊಂಡದ ತುದಿಯವರೆಗೂ ಟಾರ್ಪಾಲು ಹಾಕಿ ಭದ್ರಗೊಳಿಸಲಾಗುತ್ತಿದೆ.

ಕುಸಿಯುವ ಭೀತಿ
ಕೆಲವೊಂದು ಕಡೆಗಳಲ್ಲಿ ಅಲ್ಪ ಮಳೆಗೆ ಕುಸಿಯುವ ಭೀತಿ ಎದುರಾಗಿದೆ. ಮಣ್ಣಿನ ದಿನ್ನೆಗಳು ಯಾವಾಗ ಬೇಕಾದರೂ ಬೀಳಬಹುದಾದ ಸ್ಥಿತಿಯಲ್ಲಿವೆ. ರಿಟೈನಿಂಗ್‌ ವಾಲ್‌ಗೆ ಸಮಸ್ಯೆಯಾಗಿದ್ದ ಬಂಡೆಗಳನ್ನು ಶೇ.70ರಷ್ಟು ತೆಗೆಯಲಾಗಿದೆ. ಮಳೆ ನೀರು ನಿಂತು ಕುಸಿತ ಆರಂಭವಾದರೆ, ಸಮೀಪದ ರಸ್ತೆ, ಕಟ್ಟಡಗಳಿಗೂ ಇದರಿಂದ ಅಪಾಯ ಎದುರಾಗುವ ಸಾಧ್ಯತೆಯೂ ಇದೆ. ಹೀಗಾಗಿ ಮಳೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ಮೊದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next