Advertisement

ನೀರಿನ ಕೊರತೆ ದೂರ ಮಾಡಿದ ಪೂರ್ವ ಮುಂಗಾರು

08:15 AM May 14, 2018 | Team Udayavani |

ಮಂಗಳೂರು: ಬೇಸಗೆಯ ಕೊನೆಯಲ್ಲಿ ಪೂರ್ವ ಮುಂಗಾರು ಮಳೆಯಾಗಿ ಬಿಸಿಲ ಬೇಗೆಯನ್ನು ತುಸು ತಣಿಸುವುದು ವಾಡಿಕೆ. ಆದರೆ ಈ ಬಾರಿ ಕರಾವಳಿ ಭಾಗದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಬೇಸಗೆ ಮಳೆಯಾಗಿದ್ದು, ನೀರಿನ ಕೊರತೆಯನ್ನು ಸ್ವಲ್ಪವಾದರೂ ದೂರ ಮಾಡಿದೆ. ಹವಾಮಾನ ಇಲಾಖೆಯ ಅಂಕಿ ಅಂಶಗಳ ಪ್ರಕಾರ, 2018ರ ಜನವರಿ ತಿಂಗಳಿನಿಂದ ಮೇ 8ರ ವರೆಗೆ ದ.ಕ. ಜಿಲ್ಲೆಯ ಐದು ತಾಲೂಕುಗಳಲ್ಲಿ ಒಟ್ಟು 450.2 ಮಿ.ಮೀ. ನಷ್ಟು ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ಅವಧಿಯಲ್ಲಿ ಒಟ್ಟು 634.7 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದು 461.7 ಮಿ.ಮೀ. ಆಗಿತ್ತು. ಉಡುಪಿ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 168.1 ಮಿ.ಮೀ. ಮಳೆಯಾಗಬೇಕಿತ್ತು; 301.3 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದು ಕೇವಲ 59.9 ಮಿ.ಮೀ. ಆಗಿತ್ತು.

Advertisement


ಇಳಿಯದ ತಾಪಮಾನ

ಕರಾವಳಿ ಪ್ರದೇಶದಲ್ಲಿ ಮಳೆ ಬಂದರೂ ತಾಪಮಾನದಲ್ಲಿ ಇಳಿಕೆ ಆಗಿಲ್ಲ; ಬದಲಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಿ ಸೆಕೆ ಜಾಸ್ತಿ ಅನುಭವಕ್ಕೆ ಬರುತ್ತಿದೆ. ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಗವಾಸ್ಕರ್‌ ಅವರು ‘ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿ, ಕರಾವಳಿ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದ ಸಮಯದಲ್ಲಿ ತಾಪಮಾನದಲ್ಲಿ ಹೆಚ್ಚಳವಾಗಲಿದೆ. ಹಿಂದಿನ ವರ್ಷ ಈ ಸಮಯದಲ್ಲಿ 38 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿತ್ತು. ಆದರೆ ಸದ್ಯ 37 ಡಿಗ್ರಿ ಸೆ. ಇದ್ದು, ಮುಂದಿನ ದಿನಗಳಲ್ಲಿ ಇನ್ನೂ ಎರಡು ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ. ಹವಾಮಾನ ಇಲಾಖೆ ಅಂಕಿಅಂಶದ ಪ್ರಕಾರ ಮಂಗಳೂರು ನಗರದಲ್ಲಿ 1985ರ ಮಾ. 13ರಂದು 39.8 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿತ್ತು.

ಉತ್ತಮ ಮಾನ್ಸೂನ್‌
ಹವಾಮಾನ ಇಲಾಖೆಯ ನಿರ್ದೇಶಕ ಡಾ| ಶ್ರೀನಿವಾಸ ರೆಡ್ಡಿ ಉದಯವಾಣಿಗೆ ಪ್ರತಿಕ್ರಿಯೆ ನೀಡಿ ‘ಹವಾಮಾನ ಇಲಾಖೆಯ ಲೆಕ್ಕಾಚಾರದ ಪ್ರಕಾರ ಈ ಬಾರಿ ಕರಾವಳಿ ಪ್ರದೇಶದಲ್ಲಿ ಮುಂಗಾರು ಉತ್ತಮವಾಗಲಿದೆ.  ಈ ಬಾರಿ ವಾಡಿಕೆಯಂತೆ ಮಳೆಯಾಗಲಿದ್ದು, ಮೇ ಕೊನೆಯ ವಾರ ಅಥವಾ ಜೂನ್‌ 2ರ ಒಳಗೆ ಮುಂಗಾರು ಕರ್ನಾಟಕದ ಕರಾವಳಿ ಕಡೆಗೆ ಅಪ್ಪಳಿಸಲಿದೆ ಎಂದು ತಿಳಿಸಿದ್ದಾರೆ.

— ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next