ಬೆಂಗಳೂರು: ನನ್ನ ಜಾತಿ ಮತ್ತು ಜನ್ಮ ಸ್ಥಳದ ಕುರಿತು ಸಮಾಜಕಲ್ಯಾಣ ಇಲಾಖೆಯ ಮಾಜಿ ಸಚಿವ ಎಚ್. ಆಂಜನೇಯ ಅವರು ಚಿತ್ರದುರ್ಗದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಡಿರುವ ಆರೋಪಗಳು ನಿರಾಧಾರ ಹಾಗೂ ಸತ್ಯಕ್ಕೆ ದೂರವಾಗಿವೆ ಎಂದು ಪಶು ಸಂಗೋಪನೆ, ವಕ್ಫ್ ಮತ್ತು ಹಜ್ ಖಾತೆ ಸಚಿವರಾದ ಪ್ರಭು ಚವ್ಹಾಣ್ ಅವರು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟಪಡಿಸಿದ್ದಾರೆ.
ಆಂಜನೇಯ ಅವರಿಗೆ ನನ್ನ ಜಾತಿ, ಜನ್ಮದ ಮೂಲದ ಬಗ್ಗೆ ತಿಳಿಯಬೇಕಿದ್ದರೆ ಒಮ್ಮೆ ನನ್ನ ಕ್ಷೇತ್ರಕ್ಕೆ ಬಂದು ಸ್ವತಃ ವಾಸ್ತವ ಏನೆಂಬುದು ತಿಳಿದುಕೊಳ್ಳಲಿ. ನಾನು ಸುಳ್ಳು, ಮೋಸದಿಂದ ಜಾತಿ, ಜನ್ಮ ಪ್ರಮಾಣಪತ್ರ ಪಡೆದಿರುವುದು ಸಾಬೀತಾದರೆ ಅದೇ ಕ್ಷಣ ರಾಜಕೀಯದಿಂದ ನಿವೃತ್ತಿ ಪಡೆಯುವೆ. ಒಂದು ವೇಳೆ ಇದು ಸುಳ್ಳು ಎಂದಾದರೆ ಅವರು ಬಹಿರಂಗವಾಗಿ ಕ್ಷಮೆ ಕೋರಲಿ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ :ಯಮ ಯಾರಿಗೂ ಕರುಣೆ ತೋರುವುದಿಲ್ಲ, ಸುರೇಶ್ ಅಂಗಡಿ ಸಾವು ಅನ್ಯಾಯ: ಡಿ.ಕೆ ಶಿವಕುಮಾರ್
ನಾನು ಮೂಲತಃ ಕರ್ನಾಟಕದವನು. ನಾನು ಅಪ್ಪಟ ಕನ್ನಡಿಗ. ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಬೋಂತಿ ತಾಂಡಾ ನನ್ನ ಹುಟ್ಟೂರು. ನಾನು ಪರಿಶಿಷ್ಟ ಜಾತಿಯ(ಎಸ್.ಸಿ) ಲಂಬಾಣಿ ಜನಾಂಗಕ್ಕೆ ಸೇರಿದ್ದೇನೆ. ಆದರೆ ಆಂಜನೇಯ ಅವರು ವಾಸ್ತವ ಅರಿಯದೆ ಹಾಗೂ ಯಾರೋ ಕುತಂತ್ರಿಗಳು ನೀಡಿದ ಸುಳ್ಳು ಮಾಹಿತಿಯನ್ನು ನಂಬಿ ನಾನು ಮಹಾರಾಷ್ಟ್ರದವ ಎಂದು ಜಾತಿಗೆ ಸೇರಿದವನಲ್ಲ ಎಂದು ಆರೋಪಿಸಿದ್ದಾರೆ. ಪರಿಶಿಷ್ಟ ಸಮಾಜದ ಹಿರಿಯ ನಾಯಕರೆನಿಸಿಕೊಂಡ ಆಂಜನೇಯ ಅವರಿಂದ ಇಂತಹ ತಪ್ಪು ಹೇಳಿಕೆ ಬಂದಿರುವುದು ಅಚ್ಚರಿ ತಂದಿದೆ ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ ; ನಿರೂಪಕಿ ಅನುಶ್ರೀ ಗೂ ಸಿಸಿಬಿ ನೋಟೀಸ್
ನನ್ನ ಜಾತಿ ಹಾಗೂ ಜನ್ಮ ಸ್ಥಳದ ಕುರಿತು ಯಾವುದೇ ವಿವಾದವಿಲ್ಲ. ಆದರೆ ಕೆಲವರು ಮೇಲಿಂದ ಮೇಲೆ ಈ ವಿಷಯವನ್ನು ಕೆದಕಿ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಮೂರನೇ ಸಲ ಔರಾದ್ ಕ್ಷೇತ್ರದ ಶಾಸಕನಾಗಿ, ಕಳೆದ ಒಂದು ವರ್ಷದಿಂದ ಸಚಿವನಾಗಿ ಮಾಡುತ್ತಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಈ ರೀತಿ ಸುಳ್ಳು ವಿಷಯ ಪ್ರಸ್ತಾಪಿಸಿ ನನಗೆ ಮಾನಸಿಕ ಹಿಂಸೆ ನೀಡಲು ಪ್ರಯತ್ನಿಸುತ್ತಿದ್ದಾರೆ. ನಾನು ಇದ್ಯಾವುದಕ್ಕೂ ಜಗ್ಗುವವನಲ್ಲ. ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿ ಅವಿರತ ಕೆಲಸ ಮುಂದುವರಿಸಿದ್ದೇನೆ ಎಂದರು.