Advertisement
ಮಳೆ ಸಾಲದು: ಕೃಷಿ ಇಲಾಖೆ ಅಂಕಿ ಅಂಶದಂತೆ ಜನವರಿಯಿಂದ ಆಗಸ್ಟ್ ತಿಂಗಳ ಅಂತ್ಯಕ್ಕೆ ವಾಡಿಕೆ ಮಳೆ 393 ಮಿ.ಮೀ ಆಗಬೇಕಿದ್ದು, 363 ಮಿ.ಮೀ ಮಳೆ ಬಿದ್ದಿದೆ. ಆಗಸ್ಟ್ ತಿಂಗಳಲ್ಲಿ ವಾಡಿಕೆ ಮಳೆ 110 ಮಿ.ಮೀ ಆಗಬೇಕಿದ್ದು, ಬರೀ 25 ಮಿ.ಮೀ ಮಾತ್ರ ಮಳೆ ಬಿದ್ದಿದೆ.
Related Articles
Advertisement
ಕುಂಬಾಭಿಷೇಕ: ತಾಲೂಕಿನ ಉಜ್ಜನಿ ಗ್ರಾಮದಲ್ಲಿನ ಪುಲುಮರಾಯ ದೇವರಿಗೆ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮದ ನಡು ಭಾಗದಲ್ಲಿರುವ ಬಸವಣ್ಣ ದೇವರಿಗೆ 101 ಬಿಂದಿಗೆ ನೀರಿನ ಅಭಿಷೇಕ ಮಾಡುವ ಮೂಲಕ ಗ್ರಾಮಸ್ಥರು ಮಳೆಗಾಗಿ ಮೊರೆಯಿಟ್ಟರು.
ಹೊಲಮಾರಿ ದೇವರಿಗೆ ಪೂಜೆ: ತಾಲೂಕಿನ ಆರೂಢಿ ಗ್ರಾಮದಲ್ಲಿ ಗ್ರಾಮಸ್ಥರು ಮಳೆಗಾಗಿ ಹೊಲಮಾರಿ (ದೇವರ ಹೆಸರು) ದೇವರಿಗೆ ಪೂಜೆ ಸಲ್ಲಿಸಿದರು. ಗ್ರಾಮಸ್ಥರೆಲ್ಲ ಒಟ್ಟುಗೂಡಿ ದವಸ, ಧಾನ್ಯಗಳನ್ನು ಸಂಗ್ರಹಿಸಿ, ಮೂರ್ನಾಲ್ಕು ಟ್ರಾಕ್ಟರ್ ಮೂಲಕ ತುಂಬಿಕೊಂಡು ಗ್ರಾಮದ ಹೊರಭಾಗದ ಅರಣ್ಯ ಪ್ರದೇಶದ ಸಮೀಪದಲ್ಲಿರುವ ಹೊಲ ಮಾರಿ ದೇವರ ಗುಡಿ ಬಳಿ ತೆರಳಿ ಪೂಜೆ ಸಲ್ಲಿಸುತ್ತಾರೆ. ಇದೇ ವೇಳೆ ಎಲ್ಲರೂ ಸೇರಿ ಸಹ ಭೋಜನ ನಡೆಸುತ್ತಾರೆ. ಈ ಆಚರಣೆಯಲ್ಲಿ ಗ್ರಾಮದ ಸಾವಿರಾರು ಮಂದಿ ಭಾಗವಹಿಸುತ್ತಾರೆ.
ಸೂರ್ಯ, ಚಂದ್ರನ ಚಿತ್ರ ಬಿಡಿಸಿ ಪೂಜೆ :
ತಾಲೂಕಿನ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ ಸೂರ್ಯ ಹಾಗೂ ಚಂದ್ರನ ಚಿತ್ರ ಬಿಡಿಸಿ, ಪೂಜೆ ಪುನಸ್ಕಾರ ಮಾಡಿ ಮಳೆಗಾಗಿ ರೈತರು ಪ್ರಾರ್ಥನೆ ಸಲ್ಲಿಸಿದರು. ಸಕಾಲಕ್ಕೆ ಮಳೆಯಾಗದಿದ್ದಾಗ ಮೂರು ದಿನಗಳ ಕಾಲ ರಾತ್ರಿ ವೇಳೆ ಊರಿನ ಗ್ರಾಮಸ್ಥರೆಲ್ಲಾ ಒಂದೆಡೆ ಸೇರಿ ಸೂರ್ಯ-ಚಂದ್ರರಿಗೆ ಪೂಜೆ ಮಾಡಿ ಮಳೆ ಸುರಿಸುವಂತೆ ವರುಣ ದೇವನ ಮೊರೆ ಹೋಗಲಾಗುತ್ತದೆ. ರೈತನ ಸಂಕಷ್ಟದ ಕೂಗು ಮಳೆರಾಯನಿಗೆ ಮುಟ್ಟುವ ಹಾಗೆ ಜಾನಪದ ಗೀತೆ, ಪದಗಳನ್ನು ಹಾಡಿ ಮಳೆಗಾಗಿ ಗ್ರಾಮಸ್ಥರು ಪ್ರಾರ್ಥಿಸಿದರು. ಗ್ರಾಮದ ಉದ್ಭವ ಬಸವಣ್ಣ ದೇವರಿಗೆ ಊರಿನ ಗ್ರಾಮಸ್ಥರೆಲ್ಲಾ ಸೇರಿ ವಿಶೇಷ ಪೂಜೆ ಸಲ್ಲಿಸಿ, 101 ಈಡುಗಾಯಿ ಹೊಡೆದು ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಮಕ್ಕಳಿಗೆ ಚಂದಮಾಮ ಮದುವೆ:
ತಾಲೂಕಿನ ಕೆಳಗಿನಜೂಗಾನಹಳ್ಳಿ ಗ್ರಾಮದಲ್ಲಿ ಮಳೆ ಬರಲೆಂದು ಇಬ್ಬರು ಗಂಡು ಮಕ್ಕಳಿಗೆ ಸಾಂಕೇತಿಕವಾಗಿ ಚಂದಮಾಮ ಮದುವೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಿ ವರುಣ ದೇವರನ್ನು ಪ್ರಾರ್ಥಿಸಿದ್ದಾರೆ. ಮದುವೆಯಲ್ಲಿ ವರ ಶಶಾಂಕ್, ಹಾಗೂ ಅರವಿಂದ್ ವಧುವಾಗಿ ಇಬ್ಬರು ಗಂಡು ಮಕ್ಕಳನ್ನೇ ಆಯ್ಕೆ ಮಾಡಲಾಗಿತ್ತು. ವಧುವಾಗಿ ವರನಾಗಿ ಸಜ್ಜಾಗಿ ಪೂಜೆಗೆ ಕುಳಿತಿದ್ದರು. ನಂತರ ಎಲ್ಲಾ ಗ್ರಾಮ ಸ್ಥರು ಒಂದೆಡೆ ಸೇರಿ ಕಲೆತು ಮಳೆರಾಯನ ಕುರಿತು ಹಾಡುಗಳನ್ನು ಹಾಡಿದರು. ನೃತ್ಯ ಮಾಡಿ ಈಗಲೇ ಬಾರೋ ಮಳೆರಾಯ ಎಂದು ಕರೆದಿದ್ದು ವಿಶೇಷವಾಗಿತ್ತು.
ಕಳೆದ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಕೆರೆ ಕುಂಟೆಗಳು ತುಂಬಿ ದ್ದವು. ವಿಶ್ವೇಶ್ವರಯ್ಯ ವೃತ್ತ, ಆಲಹಳ್ಳಿ ತಿಪ್ಪಾಪುರ ಕಡೆ ಹೈನುಗಾರಿಕೆ ಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ರಾಸುಗಳಿಗೆ ಈಗಲೂ ಮೇವಿನ ಕೊರತೆ ಯಿದೆ. ಮಳೆ ರಾಯನನ್ನು ಆರಾಧಿಸುವ ಸಂಪ್ರದಾಯ ನಡೆದುಕೊಂಡು ಬರುತ್ತಿದೆ-ಮಂಜುನಾಥ್, ಚಂದ್ರಶೇಖರ, ರೈತರು
-ಡಿ.ಶ್ರೀಕಾಂತ