Advertisement

ಆಲಂಕಾರು: ಗೇರು ಗಿಡ ಕಳ್ಳರ ನಿಗ್ರಹಕ್ಕೆ  ದೈವಕ್ಕೆ ಮೊರೆ!

10:11 AM Jul 29, 2018 | |

ಆಲಂಕಾರು : ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ಆಲಂಕಾರು ಗ್ರಾಮದಲ್ಲಿ ನೆಟ್ಟಿ ರುವ ಕಸಿ ಗೇರು ಸಸಿಗಳು ನಿರಂತರವಾಗಿ ಕಳವಾಗುತ್ತಿದೆ. ಗೇರು ಗಿಡ ಕಳ್ಳರ ನಿಗ್ರಹಿಸಲು ಅಧಿಕಾರಿಗಳು ಕಾನತ್ತೂರಿನ ದೈವದ ಮೊರೆ ಹೋಗಿದ್ದಾರೆ. ಕಳ್ಳರು ರಾತ್ರಿ ವೇಳೆ ಗಿಡಗಳನ್ನು ಕಳವು ಮಾಡುತ್ತಿದ್ದಾರೆ. ಕಳ್ಳರ ಕಾಟ ತಡೆಯಲಾಗದೆ ‘ಕಸಿ ಗೇರು ಗಿಡ ಕದ್ದರೆ ಕಾನತ್ತೂರಿಗೆ ಹರಕೆ ಇಡಲಾಗುವುದು’ ಎಂದು ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳು ಎಚ್ಚರಿಕೆ ಫ‌ಲಕವನ್ನು ಗೇರು ಪ್ಲಾಂಟೇಶನ್‌ನ ಸುತ್ತ ಹಾಕಿಸಿದ್ದಾರೆ.

Advertisement

210 ಎಕರೆ ವಿಶಾಲ ಪ್ರದೇಶ
ಗೇರು ನಿಗಮದವರು ಆಲಂಕಾರು ಗ್ರಾಮದ 210 ಎಕರೆ ಪ್ರದೇಶದಲ್ಲಿ 2 ಸಾವಿರ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಂಡಿದ್ದರು. ಅದರಂತೆ ಮಳೆಗಾಲದ ಆರಂಭದಲ್ಲಿ ಗುಂಡಿಯನ್ನು ನಿರ್ಮಿಸಿದ್ದು, ಗಿಡ ನೆಡುವ ಕಾರ್ಯವನ್ನು ವಾರದ ಹಿಂದೆಯೇ ಮುಗಿಸಿದ್ದರು. ಈ ಬಾರಿ ಉತ್ತಮ ಗೇರು ತಳಿಯನ್ನು ನೆಟ್ಟಿರುವುದು ಕಳ್ಳರನ್ನು ಇತ್ತ ಆಕರ್ಷಿಸುವಂತೆ ಮಾಡಿದೆ. ಗಿಡ ನೆಟ್ಟ ಮರುದಿನದಿಂದಲೇ ಗೇರು ಗಿಡಗಳ ಕಳವು ಪ್ರಾರಂಭವಾಗಿತ್ತು. ಆಲಂಕಾರು ಗ್ರಾಮದ ಕಜೆಯಂಗಡಿ ಬಳಿಯಿಂದ ಕಯ್ಯಪ್ಪೆವರೆಗೆ 100ಕ್ಕೂ ಅಧಿಕ ಗಿಡಗಳನ್ನು ಕಳವು ಮಾಡಲಾಗಿದೆ. ಜತೆಗೆ, 100ಕ್ಕೂ ಅಧಿ ಕ ಗಿಡಗಳನ್ನು ಕಿತ್ತು ನಾಶಪಡಿಸಿದ್ದಾರೆ. ಕಳ್ಳರ ಪತ್ತೆಗಾಗಿ ರಾತ್ರಿಯಿಡೀ ಪ್ಲಾಂಟೇಶನ್‌ ಸುತ್ತ ಸುತ್ತುವುದೂ ಕಷ್ಟಕರ. ಅದಕ್ಕಾಗಿ ಕಾನತ್ತೂರಿನ ದೈವಕ್ಕೆ ಹರಕೆ ಇಡುವ ನಿರ್ಧಾರವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.

ಅಂದು ಮಳ್ಳುಹಂದಿ; ಇಂದು ಕಳ್ಳರ ಕಾಟ
ಕಳೆದ ವರ್ಷ ಇದೇ ಪ್ಲಾಂಟೇಶನ್‌ನಲ್ಲಿ ಮುಳ್ಳುಹಂದಿ, ಹೆಗ್ಗಣಗಳ ಕಾಟ ಹೆಚ್ಚಾಗಿತ್ತು. ಅವು ಹಲವಾರು ಗೇರು ಗಿಡಗಳನ್ನು ನಾಶಪಡಿಸಿದ್ದವು. ಅದಕ್ಕಾಗಿ ಪ್ರತಿ ಗಿಡಗಳಿಗೆ ಒಂದೂವರೆ ಇಂಚು ಅಳತೆಯ ಪಿವಿಸಿ ಪೈಪ್‌ ತುಂಡನ್ನು ಗಿಡಗಳಿಗೆ ರಕ್ಷಣಾ ಕವಚವಾಗಿ ಹಾಕಿ ಹಂದಿ, ಹೆಗ್ಗಣಗಳ ಕಾಟ ದಿಂದ ರಕ್ಷಣೆ ಪಡೆಯಲಾಗಿತ್ತು. ಆದರೆ ಈ ಬಾರಿ ಕಳ್ಳರ ಕಾಟ ಹೆಚ್ಚಾಗಿದ್ದು, ಇಲಾಖೆ ಇನ್ನೊಂದು ಸವಾಲು ಎದುರಿಸಬೇಕಾಗಿದೆ.

ಒಳ್ಳೆಯ ಬುದ್ಧಿ ಕರುಣಿಸು
ಒಂದು ಗಿಡಕ್ಕೆ 35 ರೂ. ವೆಚ್ಚ ಕೊಟ್ಟು ಖರೀದಿ ಮಾಡಲಾಗುತ್ತಿದೆ. ದುಬಾರಿ ಬೆಲೆಯ ಗಿಡಗಳು ಕಳ್ಳರ ಪಾಲಾಗುತ್ತಿರುವುದು ಬೇಸರದ ವಿಚಾರ. ಪೊಲೀಸ್‌ ದೂರು ನೀಡಿಲ್ಲ. 2004ರಿಂದ ಪ್ರತೀ ವರ್ಷ ಕಾನತ್ತೂರು ಕ್ಷೇತ್ರ ಹೋಗಿ ಸೇವೆಯನ್ನು ಸಲ್ಲಿಸಿ ಗಿಡ ಕಳ್ಳರಿಗೆ ಇನ್ನಾದರೂ ಒಳ್ಳೆಯ ಬುದ್ಧಿಯನ್ನು ಕರುಣಿಸು ದೈವವೇ ಎಂದು ಪ್ರಾರ್ಥಿಸಿ ಬರುತ್ತಿದ್ದೇವೆ. ಈ ಬಾರಿಯೂ ದೈವದ ಮೊರೆ ಹೋಗಿದ್ದೇವೆ.
– ಸುರೇಶ್‌ ಗೌಡ
ಪುತ್ತೂರು ಕೆ.ಸಿ.ಡಿ.ಸಿ ವಲಯ ಅರಣ್ಯಾಧಿಕಾರಿ/ನೆಡುತೋಪು ಅಧೀಕ್ಷಕರು

ಸದಾನಂದ ಆಲಂಕಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next