Advertisement
ದಿ| ಆವೆಲಿನ್ ಬಾಯಿ ಮತ್ತು ಎಂಟನಿ ಮಚಾದೊ ದಂಪತಿಗೆ 11ಮಕ್ಕಳು. ಕಷ್ಟಪಟ್ಟು ದುಡಿದು ಎಲ್ಲ ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸಿದರು. ಇವರ ಮೂವರು ಹೆಣ್ಣು ಮಕ್ಕಳು ಸೇವಾ ಭಗಿನಿಯರಾಗಿ ಸಮಾಜಕ್ಕೆ ಸಮರ್ಪಿತರಾಗಿದ್ದಾರೆ. ಮಗ ಪೀಟರ್ ಮಚಾದೊ ಹೋಲಿರೋಸರಿ ಕಾನ್ವೆಂಟ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಮೇಲೆ ಸಮಾಜ ಸೇವೆಗಾಗಿ ಧರ್ಮಗುರುವಾಗುವ ನಿರ್ಣಯ ಕೈಗೊಂಡು ಬೆಳಗಾವಿಯ ಮೈಕಲ್ ಮೈನರ್ ಸೆಮಿನರಿ ಸೇರಿದರು. ಅಲ್ಲಿ ಶಿಕ್ಷಣ ಮುಗಿಸಿ ಪುಣೆಯಲ್ಲಿ ತತ್ವಶಾಸ್ತ್ರ ಮತ್ತು ದೈವಶಾಸ್ತ್ರ ಓದುತ್ತ ಪುಣೆಯ ವಿವಿಯಿಂದ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ, ರೋಮ್‌ನಿಂದ ಡಾಕ್ಟರೇಟ್ ಪದವಿ ಪಡೆದರು. 78ರ ಡಿಸೆಂಬರ್ ನಲ್ಲಿ ಧರ್ಮಗುರು ದೀಕ್ಷೆ ಪಡೆದು ಕಾರವಾರ ಕೋಣೆ ಚರ್ಚ್‌ನಲ್ಲಿ ಸಹಾಯಕ ಗುರುವಾಗಿ ಸೇವೆ ಆರಂಭಿಸಿದರು. ಸಿದ್ದಾಪುರ, ದಾಂಡೇಲಿ, ಶಿರಸಿಗಳಲ್ಲಿ 28 ವರ್ಷ ಸೇವೆ ಸಲ್ಲಿಸಿ 2006ರಲ್ಲಿ ಬೆಳಗಾವಿ ಧರ್ಮಾಧ್ಯಕ್ಷರಾದರು. ಶಿಕ್ಷಣ, ಸಮಾಜಸೇವೆ, ಬಡಬಗ್ಗರಿಗೆ ನೆರವು ಮೊದಲಾದ ವಿಶೇಷ ಗುಣಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲ ವರ್ಗದ ಪ್ರೀತಿ ಗಳಿಸಿ 12ವರ್ಷ ಸೇವೆ ಸಲ್ಲಿಸಿದರು.
Related Articles
ಕ್ರಿಶ್ಚಿಯನ್ನರ ಸೀರಿಯನ್ ಮಿಷನ್ ಪಂಗಡದವರು 101 ವರ್ಷದ ಹಿಂದೆ ಉತ್ತರ ಕನ್ನಡಕ್ಕೆ ಬಂದರು. ಹೊನ್ನಾವರ ತಾಲೂಕಿನಲ್ಲಿ 50 ಪ್ರಾಥಮಿಕ ಶಾಲೆ, 2 ಪ್ರೌಢಶಾಲೆ ಆರಂಭಿಸಿದರು. ಜಿಲ್ಲೆಯಲ್ಲಿ ಪ್ರಥಮವಾದ ಒಳರೋಗಿಗಳ ಮತ್ತು ಕ್ಷಯರೋಗಿಗಳ ಚಿಕಿತ್ಸೆಗಾಗಿ 50 ಹಾಸಿಗೆಗಳ ಆಸ್ಪತ್ರೆ ತೆರೆದರು. 161 ವರ್ಷದ ಹಿಂದೆ ಜಿಲ್ಲೆಗೆ ಬಂದ ಪ್ರೊಟೆಸ್ಟಂಟ್ ಪಂಗಡದವರು ಸೇಂಟ್ ಥಾಮಸ್ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಕೇರಳದಿಂದ ಎತ್ತಿನಗಾಡಿಯಲ್ಲಿ ಬಂದ ಧರ್ಮಗುರುಗಳು ಹಿಂದುಳಿದ ಪ್ರದೇಶದ ಜನರಿಗೆ ಆರೋಗ್ಯ ಮತ್ತು ಶಿಕ್ಷಣ ಸೇವೆ ನೀಡಿ ಸಮಾಜವನ್ನು ಮೇಲೆತ್ತುವ ಕೆಲಸ ಮಾಡಿದರು. ರೋಮನ್ ಕ್ಯಾಥೋಲಿಕ್ ಧರ್ಮ ಗುರುಗಳು ಗೋವಾದಿಂದ ಬಂದರು. ಚರ್ಚ್‌ಗಳಿಗೆ ಸೀಮಿತವಾಗಿದ್ದ ಈ ಪಂಗಡದ ಚಟುವಟಿಕೆಗಳು 40 ವರ್ಷಗಳ ಹಿಂದೆ ಕಾರವಾರ ಧರ್ಮಪ್ರಾಂತ್ಯ ರಚನೆಯಾದ ಮೇಲೆ ಸಂಪೂರ್ಣ ಸಮಾಜಮುಖೀಯಾದವು. ಪ್ರಥಮ ಬಿಷಪ್ ಡಾ| ವಿಲಯಂ ಡಿಮೆಲ್ಲೋ 25 ವರ್ಷಗಳಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಶಿಕ್ಷಣ, ಆರೋಗ್ಯ ಸಂಸ್ಥೆಗಳನ್ನು ಕಟ್ಟಿದರು. 2 ಐಟಿಐ, 12 ಅನಾಥಾಶ್ರಮ, 5 ಆಸ್ಪತ್ರೆ, 2 ಸಂಚಾರಿ ಚಿಕಿತ್ಸಾಲಯ, 21 ಪಪೂ ಕಾಲೇಜು, 20 ಹೈಸ್ಕೂಲ್, ಪ್ರತಿಭೋದಯ, ಸೇಂಟ್ ಇಗ್ನೇಷಿಯಸ್ ಆಸ್ಪತ್ರೆ ಸಹಿತ ಸುಮಾರು 100 ಸಂಸ್ಥೆಗಳನ್ನು ಕಟ್ಟಿದ್ದು ಇವು ಎಲ್ಲ ಸಮಾಜದ ಜನರಿಗೆ ಸೇವೆ ಸಲ್ಲಿಸುತ್ತಿವೆ. ಈಗ ಧರ್ಮಾಧ್ಯಕ್ಷರಾಗಿರುವ ಡಾ| ಡೆರಿಕ್ ಫರ್ನಾಂಡೀಸ್ ಈ ಎಲ್ಲ ಸಂಸ್ಥೆಗಳನ್ನು ಅಭಿವೃದ್ಧಿ ಪಥದಲ್ಲಿ ನಡೆಸಿದ್ದಾರೆ.
Advertisement
ಜೀಯು, ಹೊನ್ನಾವರ