Advertisement

ಮನೆ-ತಾರಸಿ ಮೇಲೆ ಪ್ರಾರ್ಥನೆ ಸಲ್ಲಿಸಿದ್ರು

05:54 AM May 26, 2020 | Team Udayavani |

ಹರಿಹರ: ಹಸಿವಿನ ಮೌಲ್ಯ, ಬಡವರ ಬಗ್ಗೆ ಕಾಳಜಿ, ಆತ್ಮ ಪರಿಷ್ಕರಣೆಯ ಸಂದೇಶ ನೀಡುವ ಈದ್‌-ಉಲ್‌ -ಫಿತರ್‌ (ರಂಜಾನ್‌) ಹಬ್ಬವನ್ನು ಸೋಮವಾರ ತಾಲೂಕಿನಾದ್ಯಂತ ಮುಸ್ಲಿಂ ಸಮುದಾಯದವರು ಸರಳವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

Advertisement

ಲಾಕ್‌ಡೌನ್‌ ನಿಮಿತ್ತ ಈದ್ಗಾ ಮೈದಾನ, ಮಸೀದಿಗಳ ಸಾಮೂಹಿಕ ಪ್ರಾರ್ಥನೆಗಳಿಂದ ದೂರ ಉಳಿದು ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಹಲವರು ತಮ್ಮ ಮನೆಗಳ ತಾರಸಿ ಮೇಲೆಯೆ ಬೆಳಿಗ್ಗೆ ಹಬ್ಬದ ಪ್ರಾರ್ಥನೆ ಸಲ್ಲಿಸಿದರೆ, ಹಂಚಿನ ಮನೆಯವರು ಮನೆಯೊಳಗೆ ಸಲ್ಲಿಸಿದರು. ಬಹುತೇಕರಿಗೆ ಹಬ್ಬದ ಪ್ರಾರ್ಥನೆ ಮನೆಗಳಲ್ಲಿ ಸಲ್ಲಿಸುತ್ತಿರುವುದು ಪ್ರಥಮ ಅನುಭವವಾಯಿತು.

ಲಾಕ್‌ಡೌನ್‌ ಜನರ ದುಡಿಮೆ ಮೇಲೆ ಗದಾಪ್ರಹಾರ ಮಾಡಿದ್ದರೂ, ಮುಸ್ಲಿಮರು ಮನೆಗಳಲ್ಲಿ ಸಿಹಿ ಅಡುಗೆ ಮಾಡಿ ಸೇವಿಸಿದರು. ಕೆಲವರು ಅನ್ಯಧರ್ಮಿಯ ನೆರೆಹೊರೆಯವರಿಗೆ ಸಿಹಿಯೂಟವನ್ನು ಹಂಚಿದರು. ಬಡವರೂ ಕೂಡ ಹೊಸ ಬಟ್ಟೆ ಧರಿಸುವ ಈ ಹಬ್ಬದಲ್ಲಿ ಬಹುತೇಕರು ಹಳೆ ಬಟ್ಟೆಗಳನ್ನೇ ಆಶ್ರಯಿಸಿದರು. ಕೆಲ ಮಕ್ಕಳು ಮಾತ್ರ ಹೊಸ ಬಟ್ಟೆ ಧರಿಸಿ ಸಂಭ್ರಮ ಪಟ್ಟರು. ಸಮಾಜದವರ ಕರೆಯ ಮೇರೆಗೆ ಈ ಬಾರಿ ಹೊಸ ಬಟ್ಟೆ ಖರೀದಿಯಿಂದ ಜನರು ದೂರವಿದ್ದರು.

ಕುಟುಂಬದಲ್ಲಿರುವಆಭರಣ, ಆಸ್ತಿ, ಆದಾಯವವನ್ನು ಆಧರಿಸಿ ನೀಡುವ ದಾನಕ್ಕೆ ಜಕಾತ್‌ ಎಂದೂ, ಕುಟುಂಬದ ಸದಸ್ಯರ ಸಂಖ್ಯೆಯನ್ನಾಧರಿಸಿ ನೀಡುವ ದಾನಕ್ಕೆ ಫಿತರಾ ಎನ್ನಲಾಗುತ್ತದೆ. ಉಳ್ಳವರು ಸುತ್ತಲಿನ ಬಂಧು, ಬಳಗ, ವಿಧವೆ, ಅನಾಥರಿಗೆ ದಾನ ಮಾಡಿದರು. ತಾಲೂಕಿನಭಾನುವಳ್ಳಿ, ಕರಲಹಳ್ಳಿ, ಮಲೆಬೆನ್ನೂರು, ಬೆಳ್ಳೂಡಿ, ಕೊಂಡಜ್ಜಿ, ಹೊಳೆಸಿರಿಗೆರೆ, ಕೆ.ಎನ್‌. ಹಳ್ಳಿ, ಅಮರಾವತಿ, ಎಕ್ಕೆಗೊಂದಿ, ರಾಜನಹಳ್ಳಿ, ಹಲಸಬಾಳು ಇತರೆ ಗ್ರಾಮಗಳಲ್ಲೂ ರಂಜಾನ್‌ ಆಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next