ಲಕ್ನೋ : ಇದೇ ಜನವರಿ 15ರಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ಆರಂಭಗೊಳ್ಳುವ ಕುಂಭ ಮೇಳಕ್ಕೆ ಪೂರ್ಣ ಪ್ರಮಾಣದ ಸಿದ್ಧತೆಗಳು ಇದೀಗ ಅಂತಿಮ ಹಂತದಲ್ಲಿದ್ದು ಉತ್ತರ ಪ್ರದೇಶ ಪೊಲೀಸರು ಕುಂಭ ಮೇಳದ ಯಶಸ್ಸಿಗಾಗಿ ಬಿಗಿ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಗಾಗಿ ಪೂರ್ಣ ಪ್ರಮಾಣದ ವ್ಯವಸ್ಥೆಯನ್ನು ಆಯೋಜಿಸುತ್ತಿದ್ದಾರೆ.
ಮದ್ಯ ಮತ್ತು ಮಾಂಸಾಹಾರಿ ಸೇವಿಸದ ಸುಮಾರು 20,000 ಪೊಲೀಸ್ ಸಿಬಂದಿಗಳನ್ನು ಕುಂಭಮೇಳ ಕರ್ತವ್ಯಕ್ಕೆ ನಿಯೋಜಿಸಲಾಗಿರುವುದಾಗಿ ವರದಿಗಳು ತಿಳಿಸಿವೆ.
ಕುಂಭ ಮೇಳಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು, ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಬರುವ ಪ್ರಯಾಗ್‌ರಾಜ್ ಈಚಿನ ವರೆಗೂ ಅಲಹಾಬಾದ್ ಎಂದೇ ಕರೆಯುಲ್ಪಡುತ್ತಿತ್ತು.
ಕುಂಭ ಮೇಳದ ಕಾನೂನು ಮತ್ತು ಸುವ್ಯವಸ್ಥೆ ಪರಿಪಾಲನೆಗೆ ಮದ್ಯ, ಮಾಂಸಾಹಾರ ಸೇವಿಸದ ಪೂರ್ಣ ಶಾಕಾಹಾರಿ ಪೊಲೀಸ್ ಸಿಬಂದಿಗಳನ್ನು ಸುಮಾರು 20,000 ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ಉತ್ತರ ಪ್ರದೇಶ ಡಿ ಐಜಿ ಕೆ ಪಿ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಕುಂಭ ಮೇಳದ ಸಂದರ್ಭದಲ್ಲಿ ಪ್ರಯಾಗ್‌ರಾಜ್ ಗೆ ಬರುವ ಜನರು ತಮ್ಮೊಂದಿಗೆ ಅಧಿಕೃತ ಗುರುತು ಪತ್ರ ಹೊಂದಿರಬೇಕು. ಮಾತ್ರವಲ್ಲದೆ ತುರ್ತು ಸಂದರ್ಭಕ್ಕೆ ಅನುಕೂಲವಾಗುವಂತೆ ತಮ್ಮ ಕುಟುಂಬದ ಸದಸ್ಯರೋರ್ವರ ಮೊಬೈಲ್ ನಂಬರನ್ನು ಕೂಡ ಹೊಂದಿರಬೇಕು ಎಂದು ಸಿಂಗ್ ಹೇಳಿದರು.
ಕುಂಭ ಮೇಳಕ್ಕಾಗಿ ಸುಮಾರು 12 ಕೋಟಿ ಜನರು ಪ್ರಯಾಗ್‌ರಾಜ್ ಗೆ ಬರುವ ನಿರೀಕ್ಷೆ ಇದೆ. ಕುಂಭ ಮೇಳಕ್ಕೆ ಯುನೆಸ್ಕೋ, ವಿಶ್ವ ಪಾರಂಪಾರಿಕ ಸ್ಥಾನಮಾನ ನೀಡಿದೆ. ಮಾರ್ಚ್ 4ರಂದು ಕುಂಭ ಮೇಳ ಮುಗಿಯುತ್ತದೆ. 192 ದೇಶಗಳ ಪ್ರತಿನಿಧಿಗಳು ಕುಂಭ ಮೇಳಕ್ಕೆ ಬರುತ್ತಾರೆ ಎಂದು ಸಿಂಗ್ ಹೇಳಿದರು.