ಗಣೇಶ್ ಅವರ “ಗೀತಾ’ ಸಿನಿಮಾ ಆರಂಭವಾಗಲೂ ಇನ್ನೂ ಒಂದು ತಿಂಗಳು ಬಾಕಿ ಇದೆ. ಈ ಗ್ಯಾಪ್‌ನಲ್ಲಿ ಚಿತ್ರತಂಡ ಕಲಾವಿದರ ಆಯ್ಕೆಯಲ್ಲಿ ತೊಡಗಿಕೊಂಡಿದೆ. ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಈಗಾಗಲೇ ಮಲಯಾಳಿ ಬೆಡಗಿ ಪಾರ್ವತಿ ಅರುಣ್ ನಾಯಕಿಯಾಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಮತ್ತೂಬ್ಬ ಮಲಯಾಳಿ ನಟಿಯನ್ನು “ಗೀತಾ’ ಚಿತ್ರತಂಡ ಕರೆತರುತ್ತಿದೆ.
ಅದು ಪ್ರಯಾಗ್ ಮಾರ್ಟಿನ್. ಹೌದು, ಚಿತ್ರದ ಮತ್ತೂಬ್ಬ ನಾಯಕಿಯಾಗಿ ಪ್ರಯಾಗ್ ಮಾರ್ಟಿನ್ ಆಯ್ಕೆಯಾಗಿದ್ದು, ಕನ್ನಡದಲ್ಲಿ ಪ್ರಯಾಗ್‌ಗೆ ಮೊದಲ ಸಿನಿಮಾ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿರುವ ಪ್ರಯಾಗ್, ನಂತರ ನಾಯಕಿಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕನ್ನಡದ “ಗೀತಾ’ ಮೂಲಕ ಹೊಸ ಕನಸು ಕಾಣುತ್ತಿದ್ದಾರೆ.
ಈ ಚಿತ್ರವನ್ನು ಸಂತೋಷ್ ಆನಂದರಾಮ್ ಶಿಷ್ಯ ವಿಜಯ್ ನಾಗೇಂದ್ರ ನಿರ್ದೇಶಿಸುತ್ತಿದ್ದು, ಇವರಿಗಿದು ಚೊಚ್ಚಲ ಸಿನಿಮಾ. “ಗೀತಾ’ ಚಿತ್ರವನ್ನು ಗಣೇಶ್ ಹಾಗೂ ಸೈಯ್ಯದ್ ಸಲಾಂ ಸೇರಿ ನಿರ್ಮಿಸುತ್ತಿದ್ದಾರೆ. ಶಂಕರ್‌ನಾಗ್ “ಗೀತಾ’ ಚಿತ್ರಕ್ಕೂ ಇದಕ್ಕೂ ಏನಾದರೂ ಸಂಬಂಧ ಇದೆಯಾ ಎಂದರೆ ಖಂಡಿತಾ ಇಲ್ಲ. ಆದರೆ, ಗಣೇಶ್ ಪಾತ್ರದಲ್ಲಿ ಶಂಕರ್‌ನಾಗ್ ಅವರ ಶೇಡ್ ಕಾಣಿಸಲಿದೆ ಎಂಬ ಮಾತೂ ಇದೆ.
ಅದಕ್ಕೆ ಪೂರಕವಾಗಿ ಚಿತ್ರದ ಫಸ್ಟ್‌ಲುಕ್‌ನಲ್ಲಿ ಗಣೇಶ್ ಅವರು ಹಾಕಿಕೊಂಡಿರುವ ಕ್ಯಾಪ್, ಗಡ್ಡ ಎಲ್ಲವೂ ಶಂಕರ್‌ನಾಗ್ ಅವರನ್ನು ಹೋಲುವಂತಿದೆ. ಜೊತೆಗೆ ಶರ್ಟ್ ಮೇಲೆ ಕನ್ನಡದ ಬಾವುಟದ ಸಂಕೇತವಿದೆ. ವಿ.ಹರಿಕೃಷ್ಣ ಅವರು ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ. ಅಂದಹಾಗೆ, ಗಣೇಶ್ “ಗಿಮಿಕ್’ ಚಿತ್ರ ಮುಗಿಸಿಕೊಂಡು ವಾಪಾಸ್ಸಾಗಿದ್ದು, ಡಿಸೆಂಬರ್ 3 ರಿಂದ ಚಿತ್ರೀಕರಣ ಆರಂಭವಾಗಲಿದೆ.