Advertisement

ವರಮಹಾಲಕ್ಷ್ಮಿಯ ಸ್ಮರಿಸಿ…

03:47 PM Jul 29, 2020 | mahesh |

ಶ್ರಾವಣ ಮಾಸವೆಂದರೆ ಪ್ರಕೃತಿ ಹಸಿರುಟ್ಟು ಶೋಭಿಸುವ ಕಾಲ. ಆಷಾಢ ಮಾಸದ ಕೆಡುಕೆಲ್ಲವೂ ಕಳೆದು ಸುಭಿಕ್ಷೆಯ ದಿನಗಳು ಆರಂಭವಾಗುವ, ಸಾಲುಸಾಲಾಗಿ ವ್ರತ, ಹಬ್ಬ, ಶುಭ ಕಾರ್ಯಗಳು ಶುರುವಾಗುವ ಕಾಲ. ಶ್ರಾವಣದ ಹಬ್ಬಗಳ ಸಾಲಿನಲ್ಲಿ ಮೊದಲು ಬರು ವುದೇ ಐಶ್ವರ್ಯ ಲಕ್ಷ್ಮಿಯ ಪೂಜಾ ವ್ರತ. ಮಹಿಳೆ ಯರೇ ಮುಂದಾಗಿ ನಿಂತು ನಡೆಸುವ ಹಬ್ಬ ಇದು.

Advertisement

ವರಮಹಾಲಕ್ಷ್ಮಿ ವ್ರತಕ್ಕೆ ಇರುವ ಹಿನ್ನೆಲೆ ಕಥೆ ಹೀಗಿದೆ. ಬಡತನದ ಬದುಕು ಕಳೆಯುವ ಗೃಹಿಣಿ ಚಾರುಮತಿ, ಕುಂಡಿನಪುರದ ನಿವಾಸಿ. ಆಕೆ ಪರಮ ದೈವ ಭಕ್ತೆ. ಒಂದು ರಾತ್ರಿ ಆಕೆಗೆ ಕನಸಿನಲ್ಲಿ ಲಕ್ಷ್ಮಿ ದೇವಿ ಕಾಣಿಸಿಕೊಂಡು- “ಭಕ್ತೆಯಾದ ನಿನ್ನ ಕಷ್ಟ, ಸಂಕಟಗಳು ನನಗೆ ತಿಳಿದಿದೆ. ಅದರ ಪರಿಹಾರಕ್ಕಾಗಿ ವರಮಹಾಲಕ್ಷ್ಮಿಯಾಗಿ ಬಂದಿದ್ದೇನೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ ಸಮೀಪದ ಶುಕ್ರವಾರ ಭಕ್ತಿ, ಶ್ರದ್ಧೆಯಿಂದ ನನ್ನನ್ನು ಅರ್ಚಿಸು. ಬೇಡಿದ ವರಗಳನ್ನು ಕರುಣಿಸುತ್ತೇನೆ’ ಎಂದು ಹೇಳಿದಳು. ಆ ಮಾತನ್ನು ಪಾಲಿಸಿದ ಚಾರುಮತಿ, ನಂತರದ ದಿನಗಳಲ್ಲಿ ಸಮೃದ್ಧಿಯ ಬದುಕನ್ನು ಪಡೆದು, ದಾನ ಧರ್ಮಗಳನ್ನು
ಮಾಡುತ್ತ ಒಳ್ಳೆಯ ಬದುಕು ಪಡೆದಳು.

ಪಾರ್ವತಿ ದೇವಿಗೆ ಪರಮೇಶ್ವರನು ಉಪದೇಶಿಸಿದ ವ್ರತ ಇದು. ಮುಂದಿನ ದಿನಗಳಲ್ಲಿ ಇದನ್ನು ಶೌನಕಾದಿ ಮುನಿಗಳು ಸೂತ ಪುರಾಣಿಕರ ಮೂಲಕ ಭಕ್ತರಿಗೆಲ್ಲ ತಿಳಿಸಿದರು. ಆನಂತರದಲ್ಲಿ, ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ ಸಮೀಪದ ಶುಕ್ರವಾರ, ಮಂಗಲದಾ ಯಕ ವಾದ ವರಮಹಾಲಕ್ಷ್ಮಿಯನ್ನು ಪೂಜಿಸಿ ಸತ್ಪಲಗಳನ್ನು ಪಡೆಯುವಂತೆ ಆಯ್ತು. ಲಕ್ಷ್ಮಿ ಪೂಜೆಯ ಮೂಲ ಉದ್ದೇಶ, ದಾರಿದ್ರ್ಯಕಳೆದು ಸಿರಿಯನ್ನು ಕರುಣಿಸಲು ಎನ್ನುವ ಭಾವ ತಪ್ಪಲ್ಲ. ಆದರೆ ಆರ್ಥಿಕ ಸಂಪತ್ತಿಗೂ ಮಿಗಿಲಾದ ಅನೇಕ ಸಂಪತ್ತುಗಳೂ ಬದುಕಿಗೆ ಅತ್ಯಾವಶ್ಯಕ. ಒಳ್ಳೆಯ ಆರೋಗ್ಯ, ಉತ್ತಮ ಸಂತಾನ, ಒಳ್ಳೆಯ ವೈವಾಹಿಕ ಸಂಗಾತಿ, ಉತ್ತಮ ಗುಣ- ನಡತೆ, ಸಮೃದ್ಧ ಕುಟುಂಬ, ವಿದ್ಯೆ, ಬುದ್ಧಿ, ಯಶಸ್ಸುಗಳೇ ಅಳಿವಿಲ್ಲದ ಸಿರಿ ಸಂಪತ್ತು. ಕೊರೊನಾ ಕಂಟಕದ ಈ ಸಮಯದಲ್ಲಿ, ಉತ್ತಮ
ಆರೋಗ್ಯಕ್ಕಾಗಿ ಲಕ್ಷ್ಮಿಯನ್ನು ಪ್ರಾರ್ಥಿಸೋಣ.

ಕೃಷ್ಣವೇಣಿ ಎಂ

Advertisement

Udayavani is now on Telegram. Click here to join our channel and stay updated with the latest news.

Next