Advertisement

ಭಗವಂತನ ಅಭಯ ಹಾಗೂ ವರ ಪಡೆಯಲು ನಿಷ್ಠೆಯಿಂದ ಪ್ರಾರ್ಥಿಸಿ: ಸ್ವರ್ಣವಲ್ಲೀ ಶ್ರೀ

04:14 PM Sep 09, 2022 | Team Udayavani |

ಶಿರಸಿ: ನಿಷ್ಠೆಯಿಂದ ದೇವರ ಪ್ರಾರ್ಥನೆ ಮಾಡಿದರೆ ಭಗವಂತ ಅಭಯ ನೀಡುತ್ತಾನೆ, ವರವನ್ನೂ ಕೊಡುತ್ತಾನೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.

Advertisement

ಅವರು ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಸಂಕಲ್ಪಿಸಿದ 32ನೇ ಚಾತುರ್ಮಾಸ್ಯ ವೇಳೆಯಲ್ಲಿ ಮರಾಠಿ ಸಮಾಜದವರು ಸಲ್ಲಿಸಿದ ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು. ದೇವರು ನೀಡಿದ ಅದೃಷ್ಟದಿಂದ ಕಳೆದ ಎರಡು ವರ್ಷಗಳಿಂದ ಕಾಡಿದ ರೋಗವು ಕಡಿಮೆ ಆಯಿತು. ಔಷಧವೂ ಸಿಕ್ಕಿತು. ನಾವು ನಮಗೆ ಇದ್ದ ಭಯದ ವಾತಾವರಣದಿಂದ ಹೊರ ಬಂದಿದ್ದೇವೆ. ಆದರೆ, ನಿರಂತರ ಭಯದ ವಾತಾವರಣದಿಂದ ದೂರವಾಗಲು ಅಭಯ ಪಡೆಯಬೇಕು. ಅಭಯದ ಸ್ಥಿತಿಗೆ ಗಟ್ಟಿಯಾದದ್ದನ್ನು ಹಿಡಿದುಕೊಳ್ಳಬೇಕು. ಅದು ಭಗವಂತನಿಂದ ಮಾತ್ರ ಸಾಧ್ಯ. ಮನಸ್ಸಿಗೆ ಬಂದ ಅಭಯ ಹೋಗಲಾಡಿಸಲು ದೇವರನ್ನು ಪ್ರಾಮಾಣಿಕವಾಗಿ, ಸರಿಯಾಗಿ ಪ್ರಾರ್ಥಿಸಬೇಕು ಎಂದರು.

ಮುಳುಗುವವನು ಗಟ್ಟಿಯಾದದ್ದು ಹಿಡಿದುಕೊಂಡರೆ ಪಾರಾಗುತ್ತಾನೆ. ಭಯದ ಸ್ಥಿತಿಯಿಂದ ಹೊರಗೆ ಬರಲು, ಅಭಯ ನೀಡುವ ವಸ್ತು ಹಿಡಿದುಕೊಳ್ಳಬೇಕು. ಅಭಯ ಕೊಡುವವನೇ ದೇವರು. ದೇವರು ಅಭಯ ಹಾಗೂ ವರ ಎರಡೂ ನೀಡುವವನು ಹೌದು. ನಾವು ಸರಿಯಾಗಿ ದೇವರೆಲ್ಲಿ ಭಕ್ತಿ, ಪ್ರಾರ್ಥನೆ ಮಾಡಿದರೆ ಪ್ರಾರ್ಥಿಸಿದ್ದು ಸಿಗುತ್ತದೆ. ದೇವರ ಅಭಯ ಕೊಡುವದನ್ನು ಸಿಗಬೇಕಾದರೆ ಶ್ರದ್ಧೆಯಿಂದ ಪ್ರಾರ್ಥಿಸಬೇಕು ಎಂದರು.

ಮನೆಯ ಮೇಲೆ ವಿದ್ಯುತ್ ಲೈನ್ ಹೋದರೂ ಕರೆಂಟ್ ಇಲ್ಲ ಎಂದು ಪರಿತಪಿಸಿದರೆ ಆಗದು. ಅದಕ್ಕೆ ಸಂಪರ್ಕ ಕೊಡಬೇಕು. ಹಾಗೇ ದೇವರ ಸಂಪರ್ಕಕ್ಕೆ ಭಕ್ತಿ ಭಜನೆ ಪ್ರಾರ್ಥನೆ ಮಾಡಬೇಕು. ದೇವರು ಹಾಗೂ ಭಕ್ತನಿಗೆ ಈ ಮೂಲಕ ಸಂಬಂಧ ಏರ್ಪಡುತ್ತದೆ. ಆಗ ಭಗವಂತ ನೀಡುವ ಅಭಯ ಸಿಗುತ್ತದೆ. ವರ ಕೂಡ ಸಿಗುತ್ತದೆ. ಭಗವಂತ ಸರ್ವಶಾಕ್ತ. ಜಗತ್ತಿನ ವ್ಯವಸ್ಥೆ ನೀಡಿಕೊಳ್ಳುತ್ತಾನೆ. ಅತ್ಯಂತ ದುರಾಚಾರಿ ಆದರೂ ಅನನ್ಯ ಮನಸ್ಸಿನಿಂದ ಭಗವಂತನಲ್ಲಿ ಶರಣಾಗತಿ ಆದರೆ ಅವರನ್ನೂ ಕಾಪಾಡುತ್ತಾನೆ ಎಂದ ಅವರು, ವ್ಯಕ್ತಿಗೆ ಭಯ, ಚಿಂತೆ, ಕ್ರೋಧ ಸದಾ ಕಾಡಿದರೆ ಆರೋಗ್ಯವೂ ಹಾಳಾಗುತ್ತದೆ. ಈ ಮೂರನ್ನೂ ಪರಿಹರಿಸಿಕೊಳ್ಳಲು ಭಗವಂತನ
ಸಾನ್ನಿಧ್ಯ ಉತ್ತಮ ಮಾರ್ಗ ಎಂದರು.

ಮಠದ ಎಲ್ಲ ಸೀಮೆಯಲ್ಲಿಯೂ ಮರಾಠಿ ಸಮಾಜದವರು ಇದ್ದಾರೆ. ಮಠಕ್ಕೂ ಮರಾಠಿ ಸಮಾಜಕ್ಕೂ ಅನನ್ಯ ಬಾಂಧವ್ಯ ಹಿಂದಿನಿಂದಲೂ ಇದೆ ಎಂದು ಸ್ವರ್ಣವಲ್ಲೀ ಶ್ರೀಗಳು ಹೇಳಿದರು.

Advertisement

ಈ ವೇಳೆ ಪ್ರಮುಖರಾದ ಉದಯ ಮರಾಠಿ ದೇವನಳ್ಳಿ, ಸಂತೋಷ ಮರಾಠಿ, ನಾರಾಯಣ ಮರಾಠಿ, ಮಂಜು ಮರಾಠಿ ಮಂಜುಗುಣಿ ಇತರರು ಇದ್ದರು.

ನಾಳೆ ಸಂಪನ್ನ
ಸೋಂದಾ ಸ್ವರ್ಣವಲ್ಲೀ ಶ್ರೀಗಳು ಸ್ವರ್ಣವಲ್ಲೀ ಮಠದಲ್ಲಿ ಸಂಕಲ್ಪಿಸಿದ ತಮ್ಮ 32 ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಸೆ.10ರಂದು ಪೂರ್ಣವಾಗಲಿದೆ. ಕಳೆದ ಜು.13 ರಿಂದ ಶ್ರೀಗಳು ವ್ಯಾಸ ಪೂಜೆ ನಡೆಸಿ ಸಂಕಲ್ಪಿಸಿದ ಚಾತುರ್ಮಾಸ್ಯ ವ್ರತವನ್ನು ಸೀಮೋಲಂಘನಗೊಳಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next