Advertisement

High Court: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ- ಆರೋಪಿಗಳಿಗೆ ಜಾಮೀನು ನಿರಾಕರಣೆ

11:13 PM Oct 04, 2023 | Team Udayavani |

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ನೀಡಲು ಹೈಕೋರ್ಟ್‌ ನಿರಾಕರಿಸಿದೆ.

Advertisement

ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಕೆ. ಇಸ್ಮಾಯಿಲ್‌ ಶಾಫಿ, ಕೆ. ಮೊಹಮ್ಮದ್‌ ಇಕ್ಬಾಲ್‌ ಹಾಗೂ ಎಂ. ಶಾಹಿದ್‌ ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ| ಪ್ರಭಾಕರ್‌ ಶಾಸ್ತ್ರಿ ಹಾಗೂ ನ್ಯಾ| ಅನಿಲ್‌ ಬಿ. ಕಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಮೇಲ್ಮನವಿಯನ್ನು ತಿರಸ್ಕರಿಸಿ ಆದೇಶಿಸಿತು.

ಮೇಲ್ಮನವಿದಾರ ಆರೋಪಿಗಳು ಪ್ರಕರಣದಲ್ಲಿ ಸಕ್ರಿಯ ಪಾತ್ರ ವಹಿಸಿರುವುದನ್ನು ಋಜುವಾತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿದೆ. ಮೃತನ ಮೇಲೆ ದಾಳಿ ನಡೆದ ವೇಳೆ ಸ್ಥಳದಲ್ಲಿ ಈ ಮೂರು ಆರೋಪಿಗಳು ಭೌತಿಕವಾಗಿ ಹಾಜರಿರಲಿಲ್ಲ. ಆದರೆ, ನೆಟ್ಟಾರು ಹತ್ಯೆಗೆ ಯೋಜನೆ ರೂಪಿಸಲು ಹಮ್ಮಿಕೊಂಡಿದ್ದ ಪಿತೂರಿ ಸಭೆಯಲ್ಲಿ ಭಾಗವಹಿಸಿದ್ದರು. ಪಿತೂರಿ ರೂಪಿಸಲು ಯಾವುದೇ ಬಹಿರಂಗ ಕ್ರಿಯೆಯನ್ನು ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನಾಲ್ವರು ಸಾಕ್ಷಿಗಳ ಹೇಳಿಕೆ ಪ್ರಕಾರ ಆರೋಪಿಗಳು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ತನಿಖಾಧಿಕಾರಿಗಳು ಸಂಗ್ರಹಿಸಿರುವ ಆರೋಪಿಗಳ ಪೋನ್‌ ಕರೆಗಳ ವಿವರಗಳು ಸಹ ಪ್ರಕರಣದಲ್ಲಿ ಮೇಲ್ಮನವಿದಾರ ಆರೋಪಿಗಳು ಪಿತೂರಿ ನಡೆಸುವುದನ್ನು ತೋರಿಸುತ್ತದೆ. ಆರೋಪಿಗಳು ಪ್ರಕರಣದಲ್ಲಿ ಗಮನಾರ್ಹ ಪಾತ್ರ ನಿರ್ವಹಿಸುವುದನ್ನು ಮೇಲ್ನೋಟಕ್ಕೆ ದೃಢಪಡಿಸುವ ಸಾಕ್ಷ್ಯಗಳು ನ್ಯಾಯಾಲಯದ ಮುಂದಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಮೇಲ್ಮನವಿದಾರರು ನೆಟ್ಟಾರು ಹತ್ಯೆಯ ಪಿತೂರಿಯಲ್ಲಿ ಭಾಗವಹಿಸಿರುವುದು ಸತ್ಯವಾಗಿದ್ದು, ಅದು ಭಯೋತ್ಪಾದಕ ಕೃತ್ಯವನ್ನು ಸಮರ್ಥಿಸುವ ಕೆಲಸವಾಗಿದೆ. ಜತೆಗೆ, ಕಾನೂನು ಬಾಹಿರ ಚುಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿ) ಭಯೋತ್ಪಾದಕ ಕೃತ್ಯದ ಪೂರ್ವಸಿದ್ಧತೆ ಕ್ರಿಯೆಯಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದ ನ್ಯಾಯಪೀಠ ಮೇಲ್ಮನವಿಯನ್ನು ವಜಾಗೊಳಿಸಿ ಆರೋಪಿಗಳಿಗೆ ಜಾಮೀನು ನಿರಾಕರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next