Advertisement
ನೆಟ್ಟಾರಿನ ಶೇಖರ ಪೂಜಾರಿ ಮತ್ತು ರತ್ನಾವತಿ ದಂಪತಿಯ ನಾಲ್ವರು ಮಕ್ಕಳಲ್ಲಿ ಪ್ರವೀಣ್ ಏಕೈಕ ಪುತ್ರ. ಉಳಿದ ಮೂವರು ಪುತ್ರಿಯರು. ಮಗನ ಸಾವಿನಿಂದ ಇಡೀ ಕುಟುಂಬಸ್ಥರಲ್ಲಿ ಅಕ್ಷರಶಃ ಶೂನ್ಯ ಆವರಿಸಿದಂತಾಗಿದೆ. ಮನೆ ಮಗನನ್ನು ಕಳೆದುಕೊಂಡ ಮನೆಯವರ ರೋದನ ನೆರೆದಿದ್ದವರ ಮನ ಕಲಕುವಂತಿತ್ತು!
ಮೂವರು ಸಹೋದರಿಯರ ವಿವಾಹದ ಬಳಿಕ ಪ್ರವೀಣ್ ಅವರು ಮೂರು ವರ್ಷಗಳ ಹಿಂದೆ ಈಶ್ವರಮಂಗಲ ಸಮೀಪದ ಮುಂಡ್ಯ ನಿವಾಸಿ ನೂತನಾ ಅವರನ್ನು ವಿವಾಹವಾಗಿದ್ದರು. ತಂದೆಯ ಅನಾರೋಗ್ಯದ ಬಳಿಕ ಇಡೀ ಕುಟುಂಬದ ಜವಾಬ್ದಾರಿ ಹೊಂದಿದ್ದರು. ಕಳೆದ ವರ್ಷವಷ್ಟೇ ಮಾಸ್ತಿಕಟ್ಟೆಯಲ್ಲಿ ಬಾಡಿಗೆ ಆಧಾರ ದಲ್ಲಿ ಚಿಕನ್ ಸೆಂಟರ್ ಪ್ರಾರಂಭಿದ್ದರು. ಪ್ರವೀಣ್ ಹೊಸ ಮನೆ ಕಟ್ಟುವ ಯೋಚನೆ ಹೊಂದಿದ್ದರು. ಅಲ್ಪ ಕೃಷಿ ಭೂಮಿ ಬಿಟ್ಟರೆ ಬೇರೆ ಯಾವುದೇ ಆದಾಯ ಈ ಕುಟುಂಬಕ್ಕಿಲ್ಲ. ಪತ್ನಿ ಪುತ್ತೂರಿನ ವಿದ್ಯಾಸಂಸ್ಥೆಯೊಂದರಲ್ಲಿ ಗ್ರಂಥಪಾಲಕಿಯಾಗಿದ್ದರು. ಪ್ರವೀಣ್ ಎಲ್ಲರಿಗೂ ಬೇಕಾದ ವ್ಯಕ್ತಿ. ತಾನು ಕಷ್ಟದಲ್ಲಿದ್ದರೂ ಇತರರಿಗೆ ನೆರವು ನೀಡುತ್ತಿದ್ದರು ಅನ್ನುತ್ತಾರೆ ಸ್ಥಳೀಯರು.
ರಾತ್ರಿ 10 ಗಂಟೆಯ ಅನಂತರ ದುರ್ಘಟನೆ ವಿಷಯ ತಿಳಿಯಿತು. ಯಾವ ಕಾರಣಕ್ಕಾಗಿ ಮಗನನ್ನು ಕೊಲೆಗೈದಿದ್ದಾರೆ ಎಂದು ಗೊತ್ತಿಲ್ಲ. ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನನ್ನ ಮಗ ಯಾವುದೇ ಕುಕೃತ್ಯದಲ್ಲೂ ಭಾಗಿಯಾದವನಲ್ಲ ಎಂದು ದುಃಖ ತೋಡಿಕೊಂಡರು ಪ್ರವೀಣ್ ತಂದೆ ಶೇಖರ್.
Related Articles
Advertisement
ಪ್ರವೀಣರ ಮನೆಗೆ ಬಂದವರೂ ಅಲ್ಲಿನ ನೀರವ ಮೌನವನ್ನು ಕಂಡು ಏನೂ ಹೇಳಲಾಗದೆ ಗರಬಡಿದವರಂತೆ ನಿಂತಿದ್ದªರು. ಸಾಂತ್ವನ ಹೇಳಲು ಮನಸ್ಸಿತ್ತಾದರೂ ಹೇಗೆಂದು ಹೇಳುವುದು ? ಮಗನನ್ನು ಕಳೆದುಕೊಂಡ ದುಃಖಕ್ಕೆ ಹಾಗೆ ಸಣ್ಣದೊಂದು ಸಾಂತ್ವನ ಪರಿಹಾರವಾದೀತೆ ಎಂಬ ಪ್ರಶ್ನೆ ಎಲ್ಲರ ಮುಖದಲ್ಲಿತ್ತು. ಒಬ್ಬ ಒಳ್ಳೆಯ ಹುಡುಗ ಅನಾಯಾಸವಾಗಿ ಹೋಗಿಬಿಟ್ಟ ಎನ್ನುವ ಬೇಸರದ ನುಡಿಗಳೇ ಎಲ್ಲೆಲ್ಲೂ ಕೇಳಿಬರುತ್ತಿದ್ದವು.
ಇದು ಇಲ್ಲಿಗೆ ಕೊನೆಯಾಗಲಿನನ್ನ ಪತಿ ಸಮಾಜಕ್ಕಾಗಿ ಬಹಳಷ್ಟು ದುಡಿದಿದ್ದಾರೆ. ಅವರಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗ ಬಾರದು. ಇದು ಇಂದಿಗೇ ಕೊನೆಯಾಗಬೇಕು ಎಂದು ಆಕ್ರೋಶದಿಂದ ನುಡಿದವರು ಪ್ರವೀಣರ ಪತ್ನಿ ನೂತನಾ.
“ನನ್ನ ಗಂಡ ಬಹಳ ಒಳ್ಳೆಯವರು. ಯಾರಿಗೂ ಕೆಟ್ಟದು ಮಾಡಿರಲಿಲ್ಲ. ಸಮಾಜಕ್ಕಾಗಿ ಸಾಕಷ್ಟು ದುಡಿದಿದ್ದರು. ಇವರನ್ನು ಕೊಲ್ಲುವುದಕ್ಕೆ ಕಾರಣಗಳೇ ಇರಲಿಲ್ಲ. ಯಾಕಾಗಿ ಕೊಂದರು? ನನ್ನ ಪತಿಯನ್ನು ಕೊಲೆಗೈದವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲೇಬೇಕು’ ಎಂಬುದು ನೂತನಾ ಅವರ ಆಗ್ರಹ. “ಎಷ್ಟು ಹೊತ್ತಿಗೆ ಯಾರು ಕರೆದರೂ ಹೋಗಿ ಸಹಾಯ ಮಾಡುತ್ತಿದ್ದರು. ನಾನು ಕೆಲವೊಮ್ಮೆ ಬೇಡ ಅಂದ್ರೂ, ಅವರ ಅಪ್ಪ, ಅಮ್ಮ ಬೇಡ ಅಂದ್ರೂ ಕೇಳುತ್ತಿರಲಿಲ್ಲ. ಇವತ್ತು ಅವರನ್ನು ಕಳೆದುಕೊಂಡಿದ್ದೇನೆ. ನನಗೆ ಅವರನ್ನು ಮರಳಿ ಯಾರು ಕೊಡುತ್ತಾರೆ? ಅವರು ಸಮಾಜಕ್ಕೆ ಏನೆಲ್ಲ ಮಾಡಿದರು? ಸಮಾಜ ಏನೂ ಅವರಿಗೆ ಮಾಡಲಿಲ್ಲ. ನನ್ನ ಗಂಡನ ಜೀವ ಉಳಿಸಲು ಯಾರಿಂದಲೂ ಆಗಲಿಲ್ಲ. ಪ್ರತಿ ದಿನ ನಾನು ಅಂಗಡಿಯಲ್ಲಿ ಇರುತ್ತಿದ್ದೆ. ಮಂಗಳವಾರ (ಘಟನೆಯ ದಿನ) ನಾನು ಈಶ್ವರಮಂಗಲದ ಮನೆಗೆ ಹೋಗಿದ್ದೆ. ನಾನಿದ್ದರೆ ಹೀಗಾಗುತ್ತಿರಲಿಲ್ಲವೇನೋ? ಎಂದು ಪತ್ನಿ ಕಣ್ಣೀರಿಟ್ಟರು.