Advertisement

ಪೃಥ್ವಿ ಶಾ ಪ್ರಚಂಡ 185: ಸೆಮಿಫೈನಲ್‌ಗೆ ಮುಂಬಯಿ

12:08 AM Mar 10, 2021 | Team Udayavani |

ಹೊಸದಿಲ್ಲಿ: ಟೀಮ್‌ ಇಂಡಿಯಾದಿಂದ ಬೇರ್ಪಟ್ಟ ಆರಂಭಕಾರ ಪೃಥ್ವಿ ಶಾ ಮತ್ತೂಂದು ಪ್ರಚಂಡ ಬ್ಯಾಟಿಂಗ್‌ ಪ್ರದರ್ಶಿಸಿ ಮುಂಬಯಿಯನ್ನು “ವಿಜಯ್‌ ಹಜಾರೆ ಟ್ರೋಫಿ’ ಪಂದ್ಯಾವಳಿಯ ಸೆಮಿಫೈನಲ್‌ಗೆ ಕೊಂಡೊಯ್ದಿದ್ದಾರೆ. ಗುರುವಾರ ಸೆಮಿ ಸೆಣಸಾಟದಲ್ಲಿ ಮುಂಬಯಿ ಮತ್ತೂಂದು ಬಲಿಷ್ಠ ತಂಡವಾದ ಕರ್ನಾಟಕವನ್ನು ಎದುರಿಸಲಿದೆ.

Advertisement

ಮಂಗಳವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮುಂಬಯಿ 9 ವಿಕೆಟ್‌ಗಳಿಂದ ಸೌರಾಷ್ಟ್ರವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಸೌರಾಷ್ಟ್ರ 5 ವಿಕೆಟಿಗೆ 284 ರನ್‌ ಪೇರಿಸಿದರೆ, ಮುಂಬಯಿ 41.5 ಓವರ್‌ಗಳಲ್ಲಿ ಒಂದೇ ವಿಕೆಟಿಗೆ
285 ರನ್‌ ಬಾರಿಸಿತು.

ಬ್ಯಾಟಿಂಗ್‌ ಬಾದ್‌ಶಾ
ಮುಂಬಯಿ ಮೊತ್ತದಲ್ಲಿ ನಾಯಕ ಪೃಥ್ವಿ ಶಾ ಕೊಡುಗೆ ಅಜೇಯ 185 ರನ್‌. 123 ಎಸೆತಗಳ ಈ ಮನಮೋಹಕ ಬ್ಯಾಟಿಂಗ್‌ ವೇಳೆ ಶಾ 21 ಬೌಂಡರಿ, 7 ಸ್ಸಿರ್‌ ಬಾರಿಸಿ ಬ್ಯಾಟಿಂಗ್‌ ಬಾದ್‌ಶಾ ಎನಿಸಿದರು. ಇದು ಪ್ರಸಕ್ತ ಕೂಟದಲ್ಲಿ ಶಾ ದಾಖಲಿಸಿದ 3ನೇ ಶತಕ. ಇದರಲ್ಲೊಂದು ದ್ವಿಶತಕವೂ ಸೇರಿದೆ. ಎಲ್ಲ ಸಂದರ್ಭಗಳಲ್ಲೂ ಅವರು ನಾಟೌಟ್‌ ಆಗಿ ಉಳಿದದ್ದು ವಿಶೇಷ (105, 227 ಮತ್ತು 185 ರನ್‌). 6 ಪಂದ್ಯಗಳಿಂದ ಪೃಥ್ವಿ ಶಾ ಅವರ ಒಟ್ಟು ರನ್‌ 589ಕ್ಕೆ ಏರಿದೆ. ಸರಾಸರಿ 196.3.

ಮುಂಬಯಿಯ ಮತ್ತೋರ್ವ ಆರಂಭಕಾರ ಯಶಸ್ವಿ ಜೈಸ್ವಾಲ್‌ 75 ರನ್‌ ಹೊಡೆದರು (104 ಎಸೆತ, 10 ಬೌಂಡರಿ, 1 ಸಿಕ್ಸರ್‌).
ಸೌರಾಷ್ಟ್ರ ಪರ ಒಟ್ಟು 9 ಮಂದಿ ಬೌಲಿಂಗ್‌ ದಾಳಿಗಿಳಿದಿದ್ದರು. ಏಕೈಕ ಯಶಸ್ಸು ಉನಾದ್ಕತ್‌ಗೆ ಲಭಿಸಿತು.

ಸೌರಾಷ್ಟ್ರ ಸರದಿಯಲ್ಲಿ ಮೂವರಿಂದ ಅರ್ಧ ಶತಕ ದಾಖಲಾಯಿತು. ಸಮರ್ಥ್ ವ್ಯಾಸ್‌ ಅಜೇಯ 90, ಚಿರಾಗ್‌ ಜಾನಿ ಅಜೇಯ 53, ವಿಶ್ವರಾಜ್‌ ಜಡೇಜ 53 ರನ್‌ ಹೊಡೆದರು. ವ್ಯಾಸ್‌ ಮತ್ತು ಜಾನಿ ಮುರಿಯದ 6ನೇ ವಿಕೆಟಿಗೆ 129 ರನ್‌ ಪೇರಿಸಿದರು. ಆದರೆ ಇದರಿಂದ ಯಾವುದೇ ಲಾಭವಾಗಲಿಲ್ಲ.

Advertisement

ಸಂಕ್ಷಿಪ್ತ ಸ್ಕೋರ್‌: ಸೌರಾಷ್ಟ್ರ-5 ವಿಕೆಟಿಗೆ 284 (ವ್ಯಾಸ್‌ ಔಟಾಗದೆ 90, ಜಾನಿ ಔಟಾಗದೆ 53, ಜಡೇಜ 53, ಮುಲಾನಿ 51ಕ್ಕೆ 2). ಮುಂಬಯಿ-41.5 ಓವರ್‌ಗಳಲ್ಲಿ ಒಂದು ವಿಕೆಟಿಗೆ 285 (ಶಾ ಔಟಾಗದೆ 185, ಜೈಸ್ವಾಲ್‌ 75, ತಾರೆ ಔಟಾಗದೆ 20, ಉನಾದ್ಕತ್‌ 52ಕ್ಕೆ 1). ಪಂದ್ಯಶ್ರೇಷ್ಠ: ಪೃಥ್ವಿ ಶಾ.

Advertisement

Udayavani is now on Telegram. Click here to join our channel and stay updated with the latest news.

Next