ಚನ್ನರಾಯಪಟ್ಟಣ/ಹಿರೀಸಾವೆ: ಶೈಕ್ಷಣಿಕ ಹಂತದಿಂದಲ್ಲಿ ವಿದ್ಯಾರ್ಥಿಗಳು ಅಕ್ಷರ ಜ್ಞಾನದ ಜತೆಗೆ ಸುಸಂಸ್ಕೃತ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದುಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾ ನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಹಿರೀಸಾವೆ ಹೋಬಳಿಯ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಬಸವೇಶ್ವರ ಸ್ವಾಮಿ 89ನೇ ಜಾತ್ರಾ ಮಹೋತ್ಸವದ ಅಂಗವಾಗಿ ಬಸವೇಶ್ವರ ಪ್ರೌಢಶಾಲೆಯ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಸಂಸ್ಕಾರದಿಂದ ನಮ್ಮ ಧರ್ಮ ಉಳಿಯುತ್ತದೆ. ಅಕ್ಷರದಿಂದ ನಮ್ಮ ಜ್ಞಾನೋದಯವಾಗುತ್ತದೆ ಎಂದರು.
ಸಮಾಜಮುಖೀ ಭಾವನೆ ಬೆಳೆಸಿಕೊಳ್ಳಿ: ಸಮಾಜ ಸಹಬಾಳ್ವೆಯ ಒಂದು ಸರೋವರವಾಗಿದ್ದು ಇಲ್ಲಿ ಯಾರೂ ದೊಡ್ಡವರಲ್ಲ, ಮನುಷ್ಯನಲ್ಲಿ ಜಡತ್ವ ಇರಬಾರದು ಬದಲಿಗೆ ಸಮಾಜಮುಖೀ ಭಾವನೆ ಬೆಳೆಸಿಕೊಳ್ಳಬೇಕು. ಈ ಮೂಲಕ ಸೇವೆ ಕಾರ್ಯದಲ್ಲಿ ತೊಡಗಬೇಕೆಂದು ತಿಳಿಸಿದರು. ಹಾಗೆಯೇ ಪ್ರತಿಯೊಬ್ಬ ಮನುಷ್ಯನಲ್ಲಿಯೂ ಸೂರ್ಯನ ಶಕ್ತಿ, ಕಿರಣ ಹಾಗೂ ಪ್ರಕಾಶತೆ ಇದೆ. ಆದರೆ ಅದನ್ನು ಸರಿಯಾಗಿ ಪ್ರದರ್ಶಿಸುವುದನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಮಾರ್ಗದರ್ಶನ ಅವಶ್ಯ:ಡಿಡಿಪಿಐ ಶ್ರೀನಿವಾಸಮೂರ್ತಿ ಮಾತನಾಡಿ, ಗುರುಕುಲ,ಮಠ-ಮಾನ್ಯದಲ್ಲಿವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಸದಾ ಚಿಂತನೆ ಮಾಡುವುದರ ಜತೆಗೆ ತಂದೆ-ತಾಯಿ ಹಾಗೂ ಗುರು ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಬೆಳೆಯುತ್ತದೆ. ಯಾವ ವ್ಯಕ್ತಿ ತಮ್ಮ ಪೋಷಕರನ್ನು ಸುಖವಾಗಿ ನೋಡಿಕೊಳ್ಳುತ್ತಾನೆ. ಅವ ಗುರು ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಬೆಳೆಯುತ್ತಾನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ಎಸ್ಸೆಸ್ಸೆಲ್ಸಿ ಹಾಗೂ ಪಿಯೂ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಕಾರ್ಯದರ್ಶಿ ಶಂಭುನಾಥಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎ.ಟಿ.ಶಿವ ರಾಮ್, ಹಾಸನ ಹಾಲೂ ಒಕ್ಕೂಟದ ವ್ಯವ ಸ್ಥಾಪಕ ನಿರ್ದೇಶಕ ಗೋಪಾಲಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜೆ.ಸೋಮನಾಥ್, ಶಾಲಾ ಮುಖ್ಯ ಶಿಕ್ಷಕ ಟಿ.ತಿಮ್ಮೇಗೌಡ, ರಾಜ್ಯ ಬಿಜೆಪಿ ಕಾರ್ಯದರ್ಶಿ ಬೇಲೂರು ರಾಘವೇಂದ್ರಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.