ಉಡುಪಿ/ಮಂಗಳೂರು: ಉಡುಪಿ ಶ್ರೀಕೃಷ್ಣಮಠ ಮತ್ತಿತರ ಕಡೆ ವಿವಿಧ ಮಠಾಧೀಶರು ಬುಧವಾರ ಪ್ರಥಮನ ಏಕಾದಶಿಯಂದು ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಿದರು.
ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಬೆಳಗ್ಗಿನಿಂದ ಅಪರಾಹ್ನದ ವರೆಗೆ ಮತ್ತು ಸಂಜೆ ವೇಳೆ ಸಾವಿರಾರು ಭಕ್ತರಿಗೆ ಮುದ್ರಾಧಾರಣೆ ನಡೆಸಿದರು.
ಜನನಿಬಿಡತೆ ಹಿನ್ನೆಲೆಯಲ್ಲಿ ಭೋಜನ ಶಾಲೆಯಲ್ಲಿ ಮುದ್ರಾಧಾರಣೆಯನ್ನು ನಡೆಸಲಾಯಿತು. ಮುದ್ರಾಧಾರಣೆ ಮಾಡುವ ಮುನ್ನ ವೈದಿಕರು ಸುದರ್ಶನ ಹೋಮ ನಡೆಸಿದರು. ಅದರಲ್ಲಿ ಬಿಸಿ ಮಾಡಿದ ಶಂಖ ಚಕ್ರಗಳ ಚಿಹ್ನೆಗಳನ್ನು ಮಠಾಧೀಶರು ಭಕ್ತರ ತೋಳಿನಲ್ಲಿ ಮುದ್ರಿಸಿದರು. ಈ ಪ್ರಯುಕ್ತ ಬೆಳಗ್ಗೆ 8 ಗಂಟೆಯೊಳಗೆ ಮಹಾಪೂಜೆಯನ್ನು ನೆರವೇರಿಸಲಾಯಿತು.
ಶಯನಿ ಏಕಾದಶಿ ಪ್ರಯುಕ್ತ ಹಲವು ದೇವಸ್ಥಾನಗಳಲ್ಲಿ ನಿರಂತರ ಭಜನೆ, ಪೂಜಾದಿಗಳು ನಡೆದವು. ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ತಮ್ಮ ಮಠಗಳಲ್ಲಿ, ಅದಮಾರು ಕಿರಿಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅದ ಮಾರು ಮೂಲಮಠ, ಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಸುಬ್ರಹ್ಮಣ್ಯ ಮಠಾಧೀಶರು ಉಜಿರೆ ಜನಾ ರ್ದನ ದೇವ ಸ್ಥಾನ, ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನ, ಮಜಲು ಮಾರು ಉಮಾಮಹೇಶ್ವರ ದೇವಸ್ಥಾನ, ಸುಬ್ರಹ್ಮಣ್ಯ ಮಠ, ಸುಳ್ಯದ ರಾಘವೇಂದ್ರ ಮಠದಲ್ಲಿ, ಚಿತ್ರಾಪುರ ಮಠಾಧೀಶರು ಸುರತ್ಕಲ್ ಸಮೀಪದ ಚಿತ್ರಾಪುರ ಮಠ, ಎಲ್ಲೂರು ಕೆಮುಂಡೇಲು ಪಾಂಡುರಂಗ ಭಜನ ಮಂಡಳಿಯಲ್ಲಿ, ಗೃಹಸ್ಥರು ಮುದ್ರಾಧಾರಣೆ ನಡೆಸುವ ಏಕೈಕ ಸ್ಥಳವಾದ ಉಪ್ಪಿನಂಗಡಿ ಸಮೀಪದ ಎರ್ಕಿ ಮಠದಲ್ಲಿ ಅರ್ಚಕ ನರಹರಿ ಉಪಾಧ್ಯಾಯರು ಮುದ್ರಾಧಾರಣೆ ನಡೆಸಿದರು.
ಕಾಣಿಯೂರು ಶ್ರೀಗಳು ತಿರುವನಂತಪುರ, ತ್ರಿಶೂರ್‌ನಲ್ಲಿ, ಅದಮಾರು ಹಿರಿಯ ಶ್ರೀಗಳು ಬೆಂಗಳೂರಿನ ಬಸವನಗುಡಿ ಪುತ್ತಿಗೆ ಮಠದಲ್ಲಿ, ಸಂಜೆ ಬಳ್ಳಾರಿಯಲ್ಲಿ, ಸೋದೆ ಶ್ರೀಗಳು ಬೆಂಗಳೂರಿನ ಶ್ರೀಕೃಷ್ಣವಾದಿರಾಜ ಮಂದಿರದಲ್ಲಿ, ಪೇಜಾವರ ಶ್ರೀಗಳು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ, ಚೆನ್ನೈ ಟಿ. ನಗರ ರಾಘವೇಂದ್ರ ಮಠ, ಪಲಿಮಾರು ಉಭಯ ಮಠಾಧೀಶರು ಬೆಂಗಳೂರು ಮಲ್ಲೇಶ್ವರದ ಪಲಿಮಾರು ಮಠ, ಮೈಸೂರು, ಕೆ.ಆರ್. ನಗರದಲ್ಲಿ, ಭಂಡಾರಕೇರಿ ಶ್ರೀಗಳು ಹುಬ್ಬಳ್ಳಿ ರಾಘವೇಂದ್ರ ಮಠದಲ್ಲಿ ಮುದ್ರಾಧಾರಣೆ ನಡೆಸಿದರು.